ನವದೆಹಲಿ(ಏ.03): ದೇಶದಲ್ಲಿ ಭಾರಿ ಪ್ರಮಾಣದಲ್ಲಿ ವ್ಯಾಪಿಸುತ್ತಿರುವ ಕೊರೋನಾ ವೈರಸ್‌ನ ಎರಡನೇ ಅಲೆ ಏ.15ರಿಂದ 20ರ ವೇಳೆಗೆ ಗರಿಷ್ಠಕ್ಕೆ ಹೋಗಲಿದೆ. ನಂತರ ಇಳಿಕೆಯಾಗಲು ಆರಂಭಿಸಿ ಮೇ ಅಂತ್ಯದೊಳಗೆ ಪೂರ್ಣ ಪ್ರಮಾಣದಲ್ಲಿ ಇಳಿಕೆಯಾಗಲಿದೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ.

ಇತ್ತೀಚೆಗಷ್ಟೇ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ)ನ ಅಂಕಿ​-ಅಂಶ ತಜ್ಞರು ಇಂತಹುದೇ ಲೆಕ್ಕಾಚಾರ ಮುಂದಿಟ್ಟಿದ್ದರು. ಈಗ ಐಐಟಿ ಕಾನ್ಪುರದ ವಿಜ್ಞಾನಿ ಮಣೀಂದ್ರ ಅಗರ್ವಾಲ್‌ ಎಂಬುವರು ಕೂಡ ಇದೇ ರೀತಿಯ ಭವಿಷ್ಯ ಹೇಳಿದ್ದಾರೆ. ಕುತೂಹಲಕರ ಸಂಗತಿಯೆಂದರೆ, ದೇಶದಲ್ಲಿ ಕೊರೋನಾದ ಮೊದಲ ಅಲೆಯ ವೇಳೆಯಲ್ಲೂ ಅಗರ್ವಾಲ್‌ ಸೇರಿದಂತೆ ಕೆಲ ತಜ್ಞರು ‘ಸೂತ್ರ’ ಎಂಬ ಮಾದರಿಯನ್ನು ಬಳಸಿ 2020ರ ಆಗಸ್ಟ್‌-ಸೆಪ್ಟೆಂಬರ್‌ನಲ್ಲಿ ಮೊದಲ ಅಲೆ ಗರಿಷ್ಠಕ್ಕೆ ತಲುಪಿ 2021ರ ಫೆಬ್ರವರಿಯಲ್ಲಿ ಸಂಪೂರ್ಣ ಇಳಿಕೆಯಾಗುತ್ತದೆ ಎಂದು ಹೇಳಿದ್ದರು. ಅದು ನಿಜವಾಗಿತ್ತು.

ಈಗ ಮಣೀಂದ್ರ ಅಗರ್ವಾಲ್‌ ಅವರ ಅಧ್ಯಯನದ ಪ್ರಕಾರ, 2ನೇ ಅಲೆ ಬಹಳ ವೇಗವಾಗಿ ಗರಿಷ್ಠಕ್ಕೆ ಹೋಗಿ ಅಷ್ಟೇ ವೇಗವಾಗಿ ಕೆಳಕ್ಕಿಳಿಯಲಿದೆ. ದೇಶದಲ್ಲೇ ಮೊದಲು ಪಂಜಾಬ್‌ನಲ್ಲಿ ಪ್ರಕರಣಗಳ ಸಂಖ್ಯೆ ಗರಿಷ್ಠಕ್ಕೆ ತಲುಪಲಿದೆ. ನಂತರ ಮಹಾರಾಷ್ಟ್ರದಲ್ಲಿ ಗರಿಷ್ಠಕ್ಕೆ ತಲುಪಿ ಇಳಿಕೆಯಾಗಲು ಆರಂಭವಾಗಲಿದೆ. ಮೇ ಅಂತ್ಯದಲ್ಲಿ ಅತ್ಯಂತ ನಾಟಕೀಯವಾಗಿ ಕೊರೋನಾ ಸೋಂಕು ಇಳಿಕೆಯಾಗಲಿದೆ. ಸದ್ಯ ದೇಶದಲ್ಲಿ ನಿತ್ಯ ವರದಿಯಾಗುತ್ತಿರುವ ಪ್ರಕರಣಗಳ ಸಂಖ್ಯೆ 1 ಲಕ್ಷದ ಹತ್ತಿರ ಬರುತ್ತಿದೆ. ಇದು ಇನ್ನೂ ಹೆಚ್ಚಾಗಬಹುದು ಅಥವಾ ಇಳಿಕೆಯಾಗಲೂಬಹುದು. ಆದರೆ, ಕೊರೋನಾ ಎರಡನೇ ಅಲೆ ಗರಿಷ್ಠಕ್ಕೆ ತಲುಪುವ ಅವಧಿ ಮಾತ್ರ ಏ.15-20ರ ವೇಳೆಯೇ ಆಗಿರುತ್ತದೆ ಎಂದು ಹೇಳಲಾಗಿದೆ.

ಇನ್ನು, ಹರ್ಯಾಣದ ಅಶೋಕಾ ವಿಶ್ವವಿದ್ಯಾಲಯದ ಸ್ವತಂತ್ರ ವಿಜ್ಞಾನಿ ಗೌತಮ್‌ ಮೆನನ್‌ ಕೂಡ ಏಪ್ರಿಲ್‌ ಮಧ್ಯದಿಂದ ಮೇ ಮಧ್ಯದೊಳಗೆ ದೇಶದಲ್ಲಿ ಕೊರೋನಾ ಅಲೆ ಗರಿಷ್ಠಕ್ಕೆ ತಲುಪಲಿದೆ ಎಂದು ಹೇಳಿದ್ದಾರೆ.

3 ಮಾನದಂಡ ಬಳಸಿ ಲೆಕ್ಕಾಚಾರ

1. ಬೀಟಾ: ಈಗ ಒಬ್ಬ ಸೋಂಕಿತ ವ್ಯಕ್ತಿ ಒಂದು ದಿನಕ್ಕೆ ಎಷ್ಟುಮಂದಿಗೆ ಸೋಂಕು ಹರಡುತ್ತಿದ್ದಾನೆ.

2. ರೀಚ್‌: ದೇಶದ ಎಷ್ಟುಜನಸಂಖ್ಯೆ ಕೊರೋನಾದ 2ನೇ ಅಲೆಗೆ ತೆರೆದುಕೊಂಡಿದೆ.

3. ಎಪ್ಸಿಲನ್‌: ಪತ್ತೆಯಾದ ಸೋಂಕು ಹಾಗೂ ಪತ್ತೆಯಾಗದ ಸೋಂಕಿನ ನಡುವಿನ ಅನುಪಾತ.