Asianet Suvarna News Asianet Suvarna News

ಕೊರೋನಾ ಅಬ್ಬರದ ನಡುವೆ ಆಕ್ಸಿಜನ್ ಕೊರತೆ: ನಾವು ನೀವು ಕಾಣದ ತೆರೆ ಹಿಂದಿನ ವಾಸ್ತವ!

ಕೊರೋನಾ ಆತಂಕದ ನಡುವೆ ಆಕ್ಸಿಜನ್ ಕೊರತೆ ಅನುಭವಿಸುತ್ತಿರುವ ಆಸ್ಪತ್ರೆಗಳು| ಆಕ್ಸಿಜನ್ ಕೊರತೆಗೆ ಕಾರಣವೇನು?| ಸರ್ಕಾರವನ್ನು ಗುರಿಯಾಗಿಸುವ ಮುನ್ನ ಕೆಲವೊಂದು ಅಂಶ ತಿಳಿದರೆ ಚೆನ್ನ

COVID 19 Missing facts misdirected discourse of the crisis India is dealing with pod
Author
Bangalore, First Published Apr 28, 2021, 5:29 PM IST

ನವದೆಹಲಿ(ಏ.28) ಕಳೆದೆರಡು ತಿಂಗಳ ಹಿಂದೆ, ಫೆಬ್ರವರಿಯಲ್ಲಿ ದೇಶದಲ್ಲಿದ್ದ ಕೊರೋನಾ ಪರಿಸ್ಥಿತಿಯನ್ನು ಅವಲೋಕಿಸಿದ್ದ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್, ಭಾರತದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಕುಸಿತಗೊಂಡಿದ್ದು, ಕಳೆದ ಏಳು ದಿನಗಳಲ್ಲಿ 146 ಜಿಲ್ಲೆಗಳಲ್ಲಿ ಒಂದೇ ಒಂದು ಕೊರೋನಾ ಪ್ರಕರಣ ದಾಖಲಾಗಿಲ್ಲ. ಈ ಮೂಲಕ ಕಳೆದ ವರ್ಷ ದಾಖಲೆಯ 90,000 ಪ್ರಕರಣಗಳು ಕುಸಿತಗೊಂಡು ಪ್ರತಿದಿನ 9,000 ಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗುತ್ತಿವೆ ಎಂದು ಸಂತಸ ವ್ಯಕ್ತಪಡಿಸಿದ್ದರು.

ಆದರೆ ಎಲ್ಲವೂ ಸರಿಯಾಯ್ತು ಎನ್ನುವಷ್ಟರಲ್ಲೇ, ಎಲ್ಲವೂ ಬದಲಾಯ್ತು. ಏಪ್ರಿಲ್‌ನಲ್ಲಿ ಮತ್ತೆ ಕಠೋರ ಪರಿಸ್ಥಿತಿ ಎದುರಾಗಿದೆ. ಏಕಾಏಕಿ ಪ್ರಕರಣಗಳ ಸಂಖ್ಯೆ ಏರಿದ ಪರಿಣಾಮ ಆರೋಗ್ಯ ತುರ್ತು ಪರಿಸ್ಥಿತಿಯಂತಹ ವಾತಾವರಣ ನಿರ್ಮಾಣವಾಗಿದೆ. ಇವೆಲ್ಲದರ ನಡುವೆ ದೆಹಲಿಯಲ್ಲಿ ತಲೆದೋರಿದ ಆಮ್ಲಜನಕ ಕೊರತೆಯಿಂದಾಗಿ ಸಾವುಗಳು ಸಂಭವಿಸಿದವು. ನೋಡ ನೋಡುತ್ತಿದ್ದಂತೆಯೇ ಅನೇಕ ರಾಜ್ಯಗಳಲ್ಲಿ ಆಮ್ಲಜನಕ ಸೇರಿ ವೈದ್ಯಕೀಯ ಸೌಲಭ್ಯಗಳ ಕೊರತೆ ಎದುರಾಗಿದೆ. 

ಇನ್ನು ಇಂಡಿಯನ್‌ ಎಕ್ಸ್‌ಪ್ರೆಸ್‌ನ ಅಂಕಣಕಾರ ಎಸ್‌. ಗುರುಮೂರ್ತಿಯವರ ಲೇಖನ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಜನರು ಹೇಗೆ ಹಾದಿ ತಪ್ಪಿದರು? ಕೊರೋನಾ ಕುರಿತಾದ ತಪ್ಪು ಮಾಹಿತಿ ಹೇಗೆ ದೇಶದ ಆತ್ಮವಿಶ್ವಾಸ ಕುಗ್ಗಿಸಿತು. ಕೊರೋನಾ ಎದುರಿಸುವಲ್ಲಿ ನಾವು ಎಡವಿದ್ದೆಲ್ಲಿ ಎಂಬುವುದನ್ನು ವಿವರಿಸಿದೆ. ಲೇಖನದಲ್ಲಿರುವ ಪ್ರಮುಖ ಅಂಶಗಳು ಹೀಗಿವೆ. ಇಂಗ್ಲೀಷ್‌ ಸುದ್ದಿ ಲಿಂಕ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಲಾಭ ಪಡೆಯುತ್ತಿದ್ದವರ ಆಟ

ಆಕ್ಸಿಜನ್‌ ಕೊರತೆಯಿಂದ ಸಂಭವಿಸಿದ ಸಾವುಗಳು ಮೊದಲು ವರದಿಯಾಗಿದ್ದು ದೆಹಲಿಯ ಕಾರ್ಪೋರೇಟ್‌ ಆಸ್ಪತ್ರೆಗಳಲ್ಲಿ. ಕಳೆದ ವರ್ಷ ಇದೇ ಆಸ್ಪತ್ರೆಗಳು ಕೊರೋನಾ ಪರಿಸ್ಥಿತಿಯ ಲಾಭ ಪಡೆದು ಭಾರೀ ಲಾಭ ಗಳಿಸಿದ್ದವೆಂಬುವುದು ಉಲ್ಲೇಖನೀಯ. ಇದೇ ವಿಚಚಾರವನ್ನು ಮುಂದಿಟ್ಟುಕೊಂಡು ನ್ಯಾಷನಲ್ ಹೆರಾಲ್ಡ್ ಸೈಟ್‌ನಲ್ಲಿ COVID-19 ರ ಸಮಯದಲ್ಲಿ ಲಾಭ: ಖಾಸಗಿ ಆಸ್ಪತ್ರೆಗಳನ್ನು ಸ್ವಾಧೀನಪಡಿಸಿಕೊಳ್ಳುವ ಸಮಯವೇ? ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಈ ವರದಿಯಲ್ಲಿ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರಿಗೆ ನೀಡುತ್ತಿರುವ ಚಿಕಿತ್ಸೆ, ಬಿಲ್ ವಿವರದೊಂದಿಗೆ ನಡೆಯುತ್ತಿದ್ದ ಹಗರಣವನ್ನು ಬಹಿರಂಗಪಡಿಸಿತ್ತು. ಈ ವಿಚಾರ ಸುಪ್ರೀಂ ಮೆಟ್ಟಿಲೇರಿತ್ತು. ರಿಟ್‌ ಅರ್ಜಿಯಿಂದ ಎಚ್ಚೆತ್ತಿದ್ದ AHP ಹಾಗೂ FICCI ಸದಸ್ಯರು ಸ್ವಯಂ ನಿಯಂತ್ರಣಕ್ಕೆ ಒಪ್ಪಿಕೊಂಡಿದ್ದವಾದರೂ, ಇವುಗಳು ನಡೆಸುತ್ತಿದ್ದ ಲೂಟಿಗೆ ಕಡಿವಾಣ ಬಿದ್ದಿರಲಿಲ್ಲ. ದೆಹಲಿ ಹೊರತುಪಡಿಸಿ ಮುಂಬೈ ಹಾಗೂ ಚೆನ್ನೈನ ಆಸ್ಪತ್ರೆಗಳಲ್ಲೂ ಇಂತಹ ಪರಿಸ್ಥಿತಿ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

"

ಆದರೀಗ ಇದೇ ಆಸ್ಪತ್ರೆಗಳು ಸಂವಿಧಾನ ಕಲ್ಪಿಸುವ ಜೀವಿಸುವ ಹಕ್ಕಿನಡಿ ರಿಟ್‌ ಅರ್ಜಿ ಸಲ್ಲಿಸಿ ಸರ್ಕಾರದ ಆಮ್ಲಜನಕ ಪೂರೈಕೆ ಮಾಡಬೇಕೆಂಬ ಬೇಡಿಕೆ ಇಟ್ಟಿವೆ. ಇದೇ ಆಕ್ಸಿಜನ್‌ಗಾಗಿ ಈ ಆಸ್ಪತ್ರೆಗಳು ಪ್ರತಿ ರೋಗಿಗೆ 5,000 ರೂ., ಚಾರ್ಜ್ ಮಾಡುತ್ತವೆ ಎಂಬುವುದು ಮತ್ತೊಂದು ವಿಚಾರ.

ನಿಯಂತ್ರಣಕ್ಕೆ ಸಿಗದ ಖಾಸಗಿ ಆಸ್ಪತ್ರೆಗಳ ಆಟ

ಆಮ್ಲಜನಕದ ಉತ್ಪಾದನೆ, ವ್ಯಾಪಾರ, ದಾಸ್ತಾನು ಮತ್ತು ಬಳಕೆಯನ್ನು ಖಾಸಗೀಕರಣಗೊಳಿಸಲಾಗಿದೆ ಎಂದು ವರದಿ ಹೇಳಿದೆ. ಇನ್ನು ಮೆಡಿಕಲ್ ಆಕ್ಸಿಜನ್  ವ್ಯಾಪಾರವನ್ನು ಭಾರತದಲ್ಲಿ ನಿಯಂತ್ರಿಸಲಾಗುವುದಿಲ್ಲವಾದರೂ ಅದರ ಬೆಲೆಯನ್ನು ರಾಸಾಯನಿಕಗಳು ಮತ್ತು ರಸಗೊಬ್ಬರ ಸಚಿವಾಲಯದ ನ್ಯಾಷನಲ್ ಫಾರ್ಮಾ ಪ್ರೈಸಿಂಗ್ ಅಥಾರಿಟಿ (ಎನ್‌ಪಿಪಿಎ) ನಿಯಂತ್ರಿಸುತ್ತದೆ ಎಂಬುವುದು ಉಲ್ಲೇಖನೀಯ.

ಹೀಗಿರುವಾಗ ಉತ್ಪಾದಕರು ಕೈಗಾರಿಕೆ, ಆಸ್ಪತ್ರೆ ಹಾಗೂ ಸರ್ಕಾರದ ಜೊತೆ ಖಾಸಗಿ ಒಪ್ಪಂದ ಮಾಡಿಕೊಂಡು ಆಮ್ಲಜನಕ ಪೂರೈಸಲಾರಂಭಿಸುತ್ತವೆ. ಇದರ ಅನ್ವಯ ಆಸ್ಪತ್ರೆಗಳು ತುರ್ತಾಗಿ ಎಷ್ಟು ಆಕ್ಸಿಜನ್ ಬೇಕು, ಇದು ತಲುಪಲು ಎಷ್ಟು ಸಮಯ ಬೇಕೆಂದು ಅಂದಾಜಿಸಿ ಅದರಂತೆ ಆರ್ಡರ್ ಮಾಡುತ್ತವೆ. ಆದರೆ ಪೂರೈಕೆದಾರರು ಕಿಲೋ ಮೀಟರ್‌ಗಟ್ಟಲೇ ದೂರವಿದ್ದಾರೆ. ಅದರಲ್ಲೂ ವಿಶೇಷವಾಗಿ ದೆಹಲಿ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಸುವ ಘಟಕಗಳು ಬಹಳ ದೂರ, ವಿವಿಧ ರಾಜ್ಯಗಳಲ್ಲಿವೆ. 

ಇನ್ನು ಭಾರತದ ಪೂರ್ವ ಭಾಗದಲ್ಲಿ ಈ ಆಕ್ಸಿಜನ್ ಟ್ರಕ್‌ಗಳ ಮೂಲಕ ಸಾಗಿಸಲಾಗುತ್ತದೆ. ಸಾಮಾನ್ಯ ಪರಿಸ್ಥಿತಿಯಲ್ಲೂ ಆಕ್ಸಿಜನ್ ಸರಿಯಾದ ಸಮಯದಲ್ಲಿ ಪೂರೈಕೆಯಾಗಬೇಕಾದರೆ ಸರಿಯಾದ ಪ್ಲಾನಿಂಗ್ ಇರಬೇಕಲಾಗುತ್ತದೆ. ಆದರೆ ಆಸ್ಪತ್ರೆಗಳು ಇಂತಹ ತುರ್ತು ಪರಿಸ್ಥಿತಿ ಬಗ್ಗೆ ಯೋಚಿಸಲೇ ಇಲ್ಲ, ಹಣವನ್ನಷ್ಟೇ ಉಳಿಸಿಕೊಂಡವು. ಆದರೆ ದೇಶಾದ್ಯಂತ ಆಕ್ಸಿಜನ್ ಕೊರತೆಯ ಮಾತುಗಳು ಕೇಳಿ ಬಂದಾಗ, ಯಾರಾದರೂ ಈ ವಿಚಾರದ ಬಗ್ಗೆ ಮಾತನಾಡಿದ್ದು ಇದೆಯೇ?

ತಮ್ಮ ವೈಫಲ್ಯಕ್ಕೆ ಬೇರೆಯವರನ್ನು ಹೊಣೆಯಾಗಿಸಿದರು

ದೇಶದಲ್ಲಿ ಕಳೆದ ವರ್ಷ ಮೊದಲ ಕೊರೋನಾ ಅಲೆ ದಾಳಿ ಇಟ್ಟಾಗಲೇ ಎಲ್ಲಾ, ಅದರಲ್ಲೂ ವಿಶೇಷವಾಗಿ ದೆಹಲಿಯ ಆಸ್ಪತ್ರೆಗಳು ತಮ್ಮದೇ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಬೇಕಿತ್ತು. ಇನ್ನು ವರದಿಯೊಂದರ ಅನ್ವಯ ಸಾಮಾನ್ಯ ಪರಿಸ್ಥಿತಿಯಲ್ಲಿ  40 ಐಸಿಯು ಬೆಡ್‌ ಇರುವ 240 ಬೆಡ್‌ಗಳ ಆಸ್ಪತ್ರೆಯೊಂದು ತಿಂಗಳೊಂದಕ್ಕೆ ಐದು ಲಕ್ಷ ಮೌಲ್ಯದ ಆಕ್ಸಿಜನ್ ಬಳಸುತ್ತದೆ. ಆದರೆ PSA ಆಕ್ಸಿಜನ್ ಉತ್ಪಾದನಾ ಘಟಕಕ್ಕೆ ಸುಮಾರು ಐವತ್ತು ಲಕ್ಷ ತಗುಲುತ್ತದೆ. ಒಂದು ವೇಳೆ ಈ ಘಟಕ ಸ್ಥಾಪಿಸಿದ್ದರೆ ಏನಿಲ್ಲವೆಡಂದರೂ ಕೇವಲ ಹದಿನೆಂಟು ತಿಂಗಳಲ್ಲಿ ಈ ಹಣವನ್ನು ಮತ್ತೆ ಹೊಂದಿಸಬಹುದಿತ್ತು. ಆದರೆ ಯಾವೊಂದೂ ಆಸ್ಪತ್ರೆಗಳು ಇದಕ್ಕೆ ಸಿದ್ಧವಿರಲಿಲ್ಲ. ಬದಲಾಗಿ ಸಾವಿರಾರು ಕಿಲೋ ಮೀಟರ್‌ ದೂರವಿರುವ ಘಟಕದೊಂದಲೇ ಆಕ್ಸಿಜನ್ ತರಲು ಒಲವು ತೋರಿಸಿವೆ. 

ಇಂತಹ ಒಂದು ಯೋಚನೆಯನ್ನೇ ಇಟ್ಟುಕೊಳ್ಳದ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ಆಕ್ಸಿಜನ್ ಕೊರತೆಯುಂಟಾದಾಗ ನೇರವಾಗಿ ಸರ್ಕಾರದೆಡೆ ಬೊಟ್ಟು ಮಾಡಿದವು. ಸಂವಿಧಾನ ಕಲ್ಪಿಸುವ ಜೀವಿಸುವ ಹಕ್ಕನ್ನು ಮುಂದಿಟ್ಟುಕೊಂಡು ಸರ್ಕಾರವೇ ಆಕ್ಸಿಜನ್ ಪೂರೈಸಬೇಕೆಂಬ ಬೇಡಿಕೆ ಇಟ್ಟವು. ಸಾಲದೆಂಬಂತೆ ನ್ಯಾಯಾಲಯದ ಭಾವನಾತ್ಮಕ ಮಾತುಗಳು ಆಸ್ಪತ್ರೆಗಳು ಈ ದೂರು ಸರ್ಕಾರದ ಮೇಲೆ ಹೊರಿಸಲು ಮತ್ತಷ್ಟು ಸಹಾಯಕವಾಯ್ತು. ಆದರೆ ನೋಡ ನೋಡುತ್ತಿದ್ದಂತೆಯೇ ಇದು ಜನರ ಮನಸ್ಸಿನ ಮೇಲೂ ಪರಿಣಾಮ ಬೀರಿತು, ಈ ಎಲ್ಲಾ ಸೂಕ್ಷ್ಮಗಳನ್ನರಿದ ಜನರು ಸರ್ಕಾರವವೇ ಇದಕ್ಕೆಲ್ಲಾ ಕಾರಣ ಎನ್ನತೊಡಗಿದವು. 

ಆಕ್ಸಿಜನ್ ಘಟಕಗಳ ಬಗ್ಗೆ ಅಸಡ್ಡೆ

ಇಂತಹ ತುರ್ತು ಪರಿಸ್ಥಿತಿ ನಿರ್ಮಾಣವಾಗಬಹುದೆಂದು ಅಂದಾಜಿಸಿದ್ದ ಮೋದಿ ಸರ್ಕಾರ ದೇಶಾದ್ಯಂತ ಇರುವ ಸರ್ಕಾರಿ ಆಸ್ಪತ್ರೆಗಳಿಗೆ ಕಳೆದ ಅಕ್ಟೋಬರ್‌ನಲ್ಲಿ 200 ಕೋಟಿ ಮೊತ್ತದ  162 PSA ಪ್ಲಾಂಟ್‌ಗಳನ್ನು ಆರ್ಡರ್‌ ಮಾಡಿತ್ತು. ಇದು ಯಾವ ಕೊರತೆಯೂ ಎದುರಾಗದಂತೆ ಆಕ್ಸಿಜನ್ ಉತ್ಪಾದಿಸುತ್ತಿತ್ತು. ಆದರೆ 162 ಆಸ್ಪತ್ರೆಗಳಿಗೆಂದು ಆರ್ಡರ್ ಮಾಡಿದ ಈ ಪ್ಲಾಂಟ್‌ಗಳಲ್ಲಿ ಈವರೆಗೆ ಸ್ಥಾಪನೆಯಾಗಿದ್ದು ಕೇವಲ 33 ರ್ಘಟಕಗಳಷ್ಟೇ. ಇದಕ್ಕೆ ಕಾರಣ ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ. ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯನ್ವಯ ಇವೆಲ್ಲವೂ ಡಿಸೆಂಬರ್‌ನಲ್ಲೇ ಆರ್ಡರ್‌ ಆಗಿತ್ತು,. ಆದರೆ ಗುತ್ತಿಗೆದಾರರು ಆಸ್ಪತ್ರೆಗಳಿಗೆ ತಲುಪಿದಾಗ ಬೇಕಾದಷ್ಟು ಸ್ಥಳವಿಲ್ಲ ಎಂಬ ಕಾರಣ ನೀಡಿ ಇವುಗಳ ಸ್ಥಾಪನೆಗೆ ಅಡ್ಡಿಪಡಿಸಲಾಯ್ತು ಎಂದು ವರದಿ ಮಾಡಿದೆ. 

ಮೊದಲನೇ ಅಲೆಯಂತಲ್ಲ

ಇನ್ನು ಮೊದಲನೇ ಅಲೆ ಬಂದ ಬಳಿಕ ಎಚ್ಚರ ವಹಿಸಬೇಕಿತ್ತು ಎಂಬ ಮಾತುಗಳನ್ನಾಡುವವರು ಈ ಅಲೆ ಹಿಂದಿನಂತಲ್ಲ ಎಂಬುವುದನ್ನು ತಿಳಿದುಕೊಳ್ಳಲೇಬೇಕು. ಹಿಂದಿನ ಅಲೆಗಿಂತಲೂ ಭೀಕರ ಹಾಗೂ ಗಂಭೀರವಾಗಿರುವ ಎರಡನೇ ಅಲೆ, ಬಿರುಗಾಳಿಯಂತಿದೆ. ಸಿಕ್ಕ ಸಿಕ್ಕವರನ್ನೆಲ್ಲಾ ತನ್ನ ಗುರಿಯಾಗಿಸಿಕೊಳ್ಳುತ್ತಿದೆ. ಅಲ್ಲದೇ ಇದು ಹರಡುತ್ತಿರುವ ವೇಗವೂ ಅತೀ ಹೆಚ್ಚಿದೆ. 

ಸದ್ಯ ಇಂತಹ ಪರಿಸ್ಥಿತಿಯಲ್ಲಿ ದೇಶವನ್ನು ಮತ್ತೆ ಮೊದಲಿನಂತಾಗ್ಇಸಲು ಬೇಕಾಗಿರುವುದು ನಮ್ಮೆಲ್ಲರ ಆತ್ಮ ವಿಶ್ವಾಸ. ಮಾಸ್ಕ್, ಸಾಮಾಜಿಕ ಅಂತರವನ್ನು ತಪ್ಪದೇ ಪಾಲಿಸುವುದರೊಂದಿಗೆ ಲಸಿಕೆಯನ್ನೂ ತಪ್ಪದೇ ಪಡೆದುಕೊಳ್ಳಬೇಕಾಗಿದೆ. ಒಗ್ಗಟ್ಟು ಪ್ರದರ್ಶಿಸಿ ಕೊರೋನಾ ಮಹಾಮಾರಿ ಎಂಬ ಸರಪಳಿ ಮುರಿಯಬೇಕಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios