ನವದೆಹಲಿ(ಜ.11): ಕೊರೋನಾ ಕಾಣಿಸಿಕೊಂಡ ಆರಂಭಿಕ ದಿನಗಳಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದ ರೋಗಿಗಳಲ್ಲಿ ಉಸಿರಾಟ ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದವರಿಗಿಂತ ಹೆಚ್ಚಿನ ಪ್ರಮಾಣದ ಮತಿ ವಿಕಲ್ಪ ಹಾಗೂ ಕೋಮಾ ಕಂಡುಬಂದಿದೆ ಎಂದು ಅಧ್ಯಯನವೊಂದು ತಿಳಿಸಿದೆ.

2020ರ ಏ.28ಕ್ಕೂ ಮುನ್ನ 14 ದೇಶಗಳ ಆಸ್ಪತ್ರೆಗೆ ದಾಖಲಾಗಿದ್ದ 2000ಕ್ಕೂ ಅಧಿಕ ಕೋವಿಡ್‌ ರೋಗಿಗಳನ್ನು ಅಧ್ಯಯನ ಮಾಡಿ ಈ ವರದಿ ಸಿದ್ಧಪಡಿಸಲಾಗಿದ್ದು, ದ ಲ್ಯಾನ್ಸೆಟ್‌ ರೆಸ್ಪಿರೇಟರಿ ಮೆಡಿಸಿನ್‌ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಔಷಧ ಬಳಕೆ, ಕುಟುಂಬದ ಭೇಟಿಗೆ ಮಿತಿಯಂತಹ ಬೆಳವಣಿಗೆಗಳು ಮೆದುಳಿನ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿವೆ.

ಈ ರೀತಿಯ ಸಮಸ್ಯೆಯಿಂದ ಚಿಕಿತ್ಸಾ ವೆಚ್ಚ ಹೆಚ್ಚುವುದಲ್ಲದೆ ಸಾವು ಹಾಗೂ ದೀರ್ಘಕಾಲದಲ್ಲಿ ಮರೆವಿನ ಸಮಸ್ಯೆ ಕಾಣಿಸಿಕೊಳ್ಳುವ ಅಪಾಯವೂ ಇದೆ ಎಂದು ವರದಿ ವಿವರಿಸಿದೆ.