Asianet Suvarna News Asianet Suvarna News

ಕರ್ನಾಟಕ ಸೇರಿದಂತೆ ಎಂಟು ರಾಜ್ಯದಲ್ಲಿ ‘ಆರ್‌’ ದರ ಏರಿಕೆ!

* ಕೋವಿಡ್‌ ಪ್ರಸರಣ ವೇಗ ರಾಜ್ಯದಲ್ಲಿ 1.2

* ಕರ್ನಾಟಕ ಸೇರಿದಂತೆ ಎಂಟು ರಾಜ್ಯದಲ್ಲಿ ‘ಆರ್‌’ ದರ ಏರಿಕೆ

* ಇದು 1ಕ್ಕಿಂತ ಅಧಿಕವಿದ್ದರೆ ತೀವ್ರ ಅಪಾಯ

Covid 19 8 states showing high Reproductive Number warns Health ministry pod
Author
Bangalore, First Published Aug 4, 2021, 9:41 AM IST
  • Facebook
  • Twitter
  • Whatsapp

ನವದೆಹಲಿ(ಆ.04): ಕರ್ನಾಟಕ ಸೇರಿದಂತೆ ದೇಶದ 8 ರಾಜ್ಯಗಳಲ್ಲಿ ಕೋವಿಡ್‌ ‘ಆರ್‌-ನಂಬರ್‌’ (ಒಬ್ಬರಿಗೆ ಇನ್ನೊಬ್ಬರಿಂದ ರೋಗ ಪ್ರಸರಣ) ಸಂಖ್ಯೆ ಹೆಚ್ಚಳ ಕಂಡಿದ್ದು, ಇದು ಈ ರಾಜ್ಯಗಳಲ್ಲಿ ಕೊರೋನಾ ಸೋಂಕು ಹೆಚ್ಚಳಗೊಳ್ಳುತ್ತಿರುವ ಸಂಕೇತ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. 3ನೇ ಕೋವಿಡ್‌ ಅಲೆ ದೇಶದಲ್ಲಿ ಏಳುತ್ತಿದೆ ಎಂಬ ಆತಂಕದ ನಡುವೆಯೇ ಕೇಂದ್ರವು ಈ ಎಚ್ಚರಿಕೆ ನೀಡಿದೆ.

ಒಬ್ಬ ಸೋಂಕಿತನು ಎಷ್ಟುಜನರಿಗೆ ರೋಗ ಹರಡಿಸುತ್ತಾನೆ ಎಂಬುದಕ್ಕೆ ‘ಆರ್‌-ನಂಬರ್‌’ ಎಂದು ಕರೆಯಲಾಗುತ್ತದೆ. ಆರ್‌ ನಂಬರ್‌ 1ಕ್ಕಿಂತ ಕಡಿಮೆ ಇದ್ದರೆ ಸೋಂಕು ಪ್ರಸರಣ ಕಮ್ಮಿ ಆಗುತ್ತಿದೆ ಹಾಗೂ ಆರ್‌ ನಂಬರ್‌ 1ಕ್ಕಿಂತ ಹೆಚ್ಚಿದ್ದರೆ ಪ್ರಸರಣ ಹೆಚ್ಚುತ್ತಿದೆ ಎಂದರ್ಥ. ಉದಾಹರಣೆಗೆ ಒಬ್ಬ ಸೋಂಕಿತ ಒಬ್ಬನಿಗಿಂತ ಹೆಚ್ಚು ವ್ಯಕ್ತಿಗಳಿಗೆ ಸೋಂಕು ಹರಡಿಸಿದರೆ ಅದು ಅಪಾಯಕರ ಎಂಬುದರ ಸಂಕೇತ.

ಹಿಮಾಚಲ ಪ್ರದೇಶ ಹಾಗೂ ಜಮ್ಮು-ಕಾಶ್ಮೀರದಲ್ಲಿ ಆರ್‌-ನಂಬರ್‌ 1.4 ಇದೆ. ಇವು ದೇಶದಲ್ಲೇ ನಂ.1. ಅಂದರೆ ಪ್ರತಿ 100 ಸೋಂಕಿತರು 140 ಜನರಿಗೆ ಸೋಂಕು ಹರಡಿಸುತ್ತಾರೆ. ನಂತರದ ಸ್ಥಾನದಲ್ಲಿ ಲಕ್ಷದ್ವೀಪ (1.3), ತಮಿಳುನಾಡು (1.2), ಮಿಜೋರಂ (1.2), ಕರ್ನಾಟಕ (1.2), ಪುದುಚೇರಿ (1.1) ಹಾಗೂ ಕೇರಳ (1.1) ಇವೆ. ಇದು ಆತಂಕಕರ ವಿಷಯ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಮಹಾರಾಷ್ಟ್ರ ಸೇರಿದಂತೆ ಉಳಿದ ರಾಜ್ಯಗಳಲ್ಲಿ ಆರ್‌-ನಂಬರ್‌ 1 ಅಥವಾ 1ಕ್ಕಿಂತ ಕಮ್ಮಿ ಇದೆ.

ಇದೇ ವೇಳೆ ದೇಶದ 12 ರಾಜ್ಯಗಳ 44 ಜಿಲ್ಲೆಗಳಲ್ಲಿ ಆಗಸ್ಟ್‌ 2ಕ್ಕೆ ಅಂತ್ಯಗೊಂಡ ವಾರದಲ್ಲಿ ಸೋಂಕು ಶೇ.10ಕ್ಕಿಂತ ಹೆಚ್ಚಿದೆ. ಕಳೆದ 4 ವಾರಗಳಲ್ಲಿ ಕೇರಳ, ಮಹಾರಾಷ್ಟ್ರ, ಮಣಿಪುರ ಹಾಗೂ ಮಹಾರಾಷ್ಟ್ರ ಸೇರಿದಂತೆ 6 ರಾಜ್ಯಗಳ 18 ಜಿಲ್ಲೆಗಳಲ್ಲಿ ಸೋಂಕು ಹೆಚ್ಚಳವಾಗಿದೆ. ಕೇರಳವೊಂದರಲ್ಲೇ ದೇಶದ 49.85ರಷ್ಟುಪ್ರಕರಣಗಳು ಕಳೆದ ವಾರ ದಾಖಲಾಗಿವೆ ಎಂದು ಸಚಿವಾಲಯ ಅಂಕಿ-ಅಂಶ ನೀಡಿದೆ. ಆದರೆ ಮೇಗಿಂತ ಜುಲೈನಲ್ಲಿ ದುಪ್ಪಟ್ಟು ಪ್ರಮಾಣದಲ್ಲಿ ಲಸಿಕೆ ನೀಡಲಾಗಿದೆ ಎಂದು ಅದು ಸ್ಪಷ್ಟಪಡಿಸಿದೆ.

ಏನಿದು ಆರ್‌ ದರ?

ಪ್ರತಿ 100 ಮಂದಿ ಕೋವಿಡ್‌ ಸೋಂಕಿತರು ಎಷ್ಟುಮಂದಿಗೆ ಸೋಂಕು ಹರಡುತ್ತಿದ್ದಾರೆ ಎಂಬುದನ್ನು ಅಳೆಯುವ ಮಾನದಂಡವೇ ಆರ್‌ ದರ. ಕರ್ನಾಟಕದಲ್ಲಿ ಇದು 1.2 ಇದೆ. ಅಂದರೆ ಇಲ್ಲಿ 100 ಜನರು 120 ಜನರಿಗೆ ಸೋಂಕು ಹರಡುತ್ತಿದ್ದಾರೆ. ಇದು 1ಕ್ಕಿಂತ ಕಡಿಮೆ ಇದ್ದರೆ ಸೋಂಕು ಇಳಿಯುತ್ತಾ ಹೋಗುತ್ತದೆ. 1ಕ್ಕಿಂತ ಹೆಚ್ಚಿದ್ದರೆ ಸೋಂಕು ಹೆಚ್ಚುತ್ತಾ ಹೋಗುತ್ತದೆ.

Follow Us:
Download App:
  • android
  • ios