ಜನರಲ್ಲಿ ಸಾಮೂಹಿಕ ರೋಗ ನಿರೋಧಕ ಶಕ್ತಿ ವೃದ್ಧಿಯಾಗಲು 2 ವರ್ಷಗಳು ಬೇಕಾಗುತ್ತದೆ ಎಂದು ತಜ್ಞರ ತಂಡವು ಹೇಳಿದೆ. ಸದ್ಯ ಕೊರೋನ ಮಹಾಮಾರಿ ಇದ್ದು ಇದು ಸಂಪೂರ್ಣ ನಿವಾರಣೆಯಾಗಲು ಸಾಮೂಹಿಕ ರೋಗ ನಿರೋಧಕ ಶಕ್ತಿ ವೃದ್ಧಿಯಾಗಬೇಕಾಗುತ್ತದೆ.
ನವದೆಹಲಿ (ಮಾ.12): ಭಾರತದಲ್ಲಿ ಕೊರೋನಾ ವೈರಸ್ ವಿರುದ್ಧ ಜನರಲ್ಲಿ ಸಾಮೂಹಿಕ ರೋಗನಿರೋಧಕ ಶಕ್ತಿ (ಹರ್ಡ್ ಇಮ್ಯುನಿಟಿ) ಅಭಿವೃದ್ಧಿಯಾಗಲು ಇನ್ನೂ ಎರಡು ವರ್ಷ ಬೇಕಾಗಬಹುದು ಎಂದು ತಜ್ಞರ ಲೆಕ್ಕಾಚಾರವೊಂದು ಹೇಳಿದೆ. ಸದ್ಯ ನಡೆಯುತ್ತಿರುವ ಕೊರೋನಾ ಲಸಿಕೆ ಅಭಿಯಾನದ ವೇಗವನ್ನು ಆಧರಿಸಿ ಈ ಅಂದಾಜು ಮಾಡಲಾಗಿದೆ.
2021ರ ಜನವರಿಯಿಂದ ಜುಲೈ ಒಳಗೆ ದೇಶದ 30 ಕೋಟಿ ಜನರಿಗೆ (ಆರೋಗ್ಯ ಕಾರ್ಯಕರ್ತರು, ಕೊರೋನಾ ವಾರಿಯರ್ಸ್, 60 ವರ್ಷ ಮೇಲ್ಪಟ್ಟವರು ಹಾಗೂ 45-59ರ ನಡುವಿನ ಪೂರ್ವರೋಗಪೀಡಿತರಿಗೆ) ಲಸಿಕೆ ನೀಡುವ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಆದರೆ, ಸದ್ಯ ಪ್ರತಿನಿತ್ಯ ದೇಶದಲ್ಲಿ ಒಟ್ಟು 17-18 ಲಕ್ಷ ಜನರಿಗಷ್ಟೇ ಲಸಿಕೆ ನೀಡಲಾಗುತ್ತಿದೆ. ನಮ್ಮ ದೇಶದಲ್ಲಿ ಸಾಮೂಹಿಕ ರೋಗನಿರೋಧಕ ಶಕ್ತಿ ಬೆಳೆಯಲು ಸುಮಾರು 80 ಕೋಟಿ ಜನರಿಗೆ ಲಸಿಕೆ ನೀಡಬೇಕು. ಈ ಲೆಕ್ಕದ ಪ್ರಕಾರ, ನಿತ್ಯ 20 ಲಕ್ಷ ಜನರಿಗೆ ಲಸಿಕೆ ನೀಡಿದರೂ 80 ಕೋಟಿ ಜನರಿಗೆ ಲಸಿಕೆ ನೀಡಲು ಸುಮಾರು 800 ದಿನಗಳು ಬೇಕಾಗುತ್ತವೆ. ಒಂದು ವೇಳೆ ಇದನ್ನು ದುಪ್ಪಟ್ಟುಗೊಳಿಸಿ ದಿನಕ್ಕೆ 40 ಲಕ್ಷ ಜನರಿಗೆ ಲಸಿಕೆ ನೀಡಿದರೂ 80 ಕೋಟಿ ಜನರಿಗೆ ಲಸಿಕೆ ನೀಡಲು ಒಂದು ವರ್ಷಕ್ಕಿಂತ ಹೆಚ್ಚು ಅವಧಿ ಬೇಕಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಲಸಿಕೆ ನೀಡಿಕೆ ವೇಗ ಸಾಲದು: ದೇಶದಲ್ಲಿ ಪ್ರತಿನಿತ್ಯ ನೀಡುವ ಲಸಿಕೆಗಳ ಸಂಖ್ಯೆ ನಿಧಾನವಾಗಿ ಏರಿಕೆಯಾಗುತ್ತಿದೆ. ಆದರೂ ಭಾರತದ ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡರೆ ಲಸಿಕೆ ನೀಡುತ್ತಿರುವ ವೇಗ ಯಾತಕ್ಕೂ ಸಾಲದು. ಅಮೆರಿಕದಲ್ಲಿ ಅಲ್ಲಿನ ಜನಸಂಖ್ಯೆಯ ಶೇ.17.6ರಷ್ಟುಜನರಿಗೆ, ಚೀನಾದಲ್ಲಿ ಶೇ.3.6ರಷ್ಟುಜನರಿಗೆ, ಯುರೋಪಿಯನ್ ಒಕ್ಕೂಟದಲ್ಲಿ ಶೇ.6.2ರಷ್ಟುಜನರಿಗೆ ಹಾಗೂ ಬ್ರಿಟನ್‌ನಲ್ಲಿ ಶೇ.32.7ರಷ್ಟುಜನರಿಗೆ ಇಲ್ಲಿಯವರೆಗೆ ಲಸಿಕೆ ನೀಡಲಾಗಿದೆ. ಆದರೆ, ಭಾರತದಲ್ಲಿ ಕೇವಲ ಶೇ.1.5ರಷ್ಟುಜನರಿಗೆ, ಅಂದರೆ ಸುಮಾರು 2.3 ಕೋಟಿ ಡೋಸ್ ಲಸಿಕೆ ಮಾತ್ರ ನೀಡಲಾಗಿದೆ.
ಕರ್ನಾಟಕ ಸೇರಿ 6 ರಾಜ್ಯಗಳಿಂದ ಭಾರತದಲ್ಲಿ 86% ಕೊರೋನಾ ಎಂದ ಇಲಾಖೆ; ಲಾಕ್‌ಡೌನ್ ಆತಂಕ! .
ಅಚ್ಚರಿಯ ಸಂಗತಿಯೆಂದರೆ ಬ್ರೆಜಿಲ್, ಬಾಂಗ್ಲಾದೇಶ ಮುಂತಾದವು ತಮ್ಮದೇ ಲಸಿಕೆಯನ್ನು ಹೊಂದಿಲ್ಲದಿದ್ದರೂ ಭಾರತಕ್ಕಿಂತ ಹೆಚ್ಚು ವೇಗವಾಗಿ ಲಸಿಕೆ ನೀಡುತ್ತಿವೆ. ಸದ್ಯ ಜಗತ್ತಿನಲ್ಲಿ ಅತಿಹೆಚ್ಚು ಪ್ರತಿಶತ ಜನರಿಗೆ ಲಸಿಕೆ ನೀಡಿರುವ ದೇಶವೆಂದರೆ ಇಸ್ರೇಲ್ ಆಗಿದೆ (ಶೇ.57.3).
ಕರ್ನಾಟಕ ಸಾಧಿಸಿದ ಗುರಿ ಶೇ.6.1: ದೇಶದಲ್ಲಿ ಈವರೆಗೆ ಯಾವ ರಾಜ್ಯವೂ ಲಸಿಕೆ ನೀಡಿಕೆಯ ವಿಷಯದಲ್ಲಿ ತಮ್ಮ ಗುರಿಯನ್ನು ತಲುಪಿಲ್ಲ. ಕೆಲವೇ ರಾಜ್ಯಗಳು ನಿಗದಿತ ಗುರಿಯಲ್ಲಿ ಶೇ.10ಕ್ಕಿಂತ ಹೆಚ್ಚು ಜನರಿಗೆ ಲಸಿಕೆ ಹಾಕಿವೆ. ರಾಜಸ್ಥಾನ ನಂ.1 ಸ್ಥಾನದಲ್ಲಿದ್ದು, ಶೇ.15.7ರಷ್ಟುಗುರಿ ತಲುಪಿದೆ. ನಂತರದ ಸ್ಥಾನದಲ್ಲಿ ಗುಜರಾತ್ ಹಾಗೂ ಜಮ್ಮು ಕಾಶ್ಮೀರ ಇವೆ. ಕರ್ನಾಟಕದಲ್ಲಿ ನಿಗದಿತ ಗುರಿಯಲ್ಲಿ ಶೇ.6.1ರಷ್ಟುಜನರಿಗೆ ಮಾತ್ರ ಲಸಿಕೆ ಹಾಕಲಾಗಿದೆ. ಜುಲೈ ಒಳಗೆ, ಅಂದರೆ ದೇಶದಲ್ಲಿ ಲಸಿಕೆ ಅಭಿಯಾನ ಆರಂಭವಾದ ಆರು ತಿಂಗಳಲ್ಲಿ, ಎಷ್ಟುಜನರಿಗೆ ಲಸಿಕೆ ನೀಡಬೇಕು ಎಂಬ ಗುರಿ ನಿಗದಿಪಡಿಸಿಕೊಳ್ಳಲಾಗಿತ್ತೋ ಆ ಗುರಿಯನ್ನು ಬಹುತೇಕ ರಾಜ್ಯಗಳು ತಲುಪುವುದಿಲ್ಲ ಎಂದು ಹೇಳಲಾಗುತ್ತಿದೆ.
