*  ಐಸಿಎಂಆರ್‌-ಭಾರತ್‌ ಬಯೋಟೆಕ್‌ ಜಂಟಿ ಅಧ್ಯಯನ* ಕೋವ್ಯಾಕ್ಸಿನ್‌ 3ನೇ ಡೋಸ್‌ ರೂಪಾಂತರಿಗೆ ರಾಮಬಾಣ

ನವದೆಹಲಿ(ಏ.10): ಕೋವ್ಯಾಕ್ಸಿನ್‌ ಬೂಸ್ಟರ್‌ ಡೋಸು ಒಮಿಕ್ರೋನ್‌ ಸೇರಿದಂತೆ ಕೊರೋನಾ ವೈರಸ್‌ನ ಎಲ್ಲ ರೂಪಾಂತರಿಗಳ ವಿರುದ್ಧ ಪರಿಣಾಮಕಾರಿಯಾಗಿದೆ ಎಂದು ಐಎಮ್‌ಆರ್‌ಸಿ ಹಾಗೂ ಭಾರತ ಬಯೋಟೆಕ್‌ ಜಂಟಿಯಾಗಿ ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ.

ಕೊರೋನಾ ವೈರಸ್‌ ಸತತ ರೂಪಾಂತರಕ್ಕೆ ಒಳಗಾಗಿ ಸೃಷ್ಟಿಯಾದ ಒಮಿಕ್ರೋನ್‌ ವಿರುದ್ಧ ಕೋವ್ಯಾಕ್ಸಿನ್‌ ಬೂಸ್ಟರ್‌ ಡೋಸಿನ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದನ್ನು ತಿಳಿಯಲು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಹಾಗೂ ಕೋವ್ಯಾಕ್ಸಿನ್‌ ಲಸಿಕೆ ಉತ್ಪಾದಿಸಿದ ಕಂಪನಿ ಭಾರತ ಬಯೋಟೆಕ್‌ ಜಂಟಿಯಾಗಿ ಅಧ್ಯಯನ ನಡೆಸಿತ್ತು.ಈ ಅಧ್ಯಯನದ ವರದಿಯನ್ನು ಜರ್ನಲ್‌ ಆಫ್‌ ಟ್ರಾವೆಲ್‌ ಮೆಡಿಸಿನ್‌ನಲ್ಲಿ ಮಾಚ್‌ರ್‍ 24 ರಂದು ಪ್ರಕಟಿಸಲಾಗಿದೆ.

ಅಧ್ಯಯನಕ್ಕಾಗಿ ಕೋವ್ಯಾಕ್ಸಿನ್‌ನ 2 ಡೋಸುಗಳನ್ನು ಸ್ವೀಕರಿಸಿದ 6 ತಿಂಗಳ ನಂತರದ 51 ವ್ಯಕ್ತಿಗಳ ಪ್ರತಿಕಾಯ ಮಾದರಿಗಳನ್ನು ಹಾಗೂ ಬೂಸ್ಟರ್‌ ಡೋಸನ್ನು ಪಡೆದುಕೊಂಡ 28 ದಿನಗಳ ನಂತರ ಆ ವ್ಯಕ್ತಿಗಳ ಪ್ರತಿಕಾಯ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪರೀಕ್ಷೆಯಲ್ಲಿ ಬೂಸ್ಟರ್‌ ಡೋಸುಗಳನ್ನು ಪಡೆದುಕೊಂಡವರ ದೇಹದಲ್ಲಿ ಪ್ರತಿಕಾಯಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ಸೃಷ್ಟಿಯಾದ ಪ್ರತಿಕಾಯಗಳು ಕೊರೋನಾ ವೈರಾಣುವಿನ ಡೆಲ್ಟಾ, ಬೀಟಾ ಹಾಗೂ ಒಮಿಕ್ರೋನ್‌ ರೂಪಾಂತರಿಯ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ಕೋವಿಡ್‌ನಿಂದಾಗಿ ಸಾವು, ರೋಗದ ತೀವ್ರತೆ ಹಾಗೂ ಆಸ್ಪತ್ರೆಗೆ ದಾಖಲಾಗುವುದರ ವಿರುದ್ಧ ಬೂಸ್ಟರ್‌ ಡೋಸು ರಕ್ಷಣೆಯನ್ನು ನೀಡುತ್ತದೆ ಎಂದು ಅಧ್ಯಯನದ ವರದಿಯಲ್ಲಿ ತಿಳಿಸಲಾಗಿದೆ