ಸ್ವದೇಶಿ ಕೋವ್ಯಾಕ್ಸಿನ್ ಲಸಿಕೆ ಶೇ.78ರಷ್ಟು ಪರಿಣಾಮಕಾರಿ!
ಸ್ವದೇಶಿ ಕೋವ್ಯಾಕ್ಸಿನ್ ಲಸಿಕೆ ಶೇ.78ರಷ್ಟು ಪರಿಣಾಮಕಾರಿ: ವರದಿ| ಆಸ್ಪತ್ರೆ ದಾಖಲು ಪ್ರಮಾಣ ಶೇ.100ರಷ್ಟುತಗ್ಗಿದೆ: ಭಾರತ್ ಬಯೋಟೆಕ್
ನವದೆಹಲಿ(ಏ.22): ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯ ಸ್ವದೇಶಿ ನಿರ್ಮಿತ ಕೋವ್ಯಾಕ್ಸಿನ್ ಲಸಿಕೆ ಕೊರೋನಾದ ಸೌಮ್ಯ, ಸಾಧಾರಣ ಹಾಗೂ ಗಂಭೀರ ಪ್ರಕರಣಗಳ ವಿರುದ್ಧ ಶೇ.78ರಷ್ಟುಪರಿಣಾಮಕಾರಿ ಆಗಿದೆ ಎಂಬುದು 3ನೇ ಹಂತದ ಅಧ್ಯಯನದಿಂದ ಸಾಬೀತಾಗಿದೆ.
ಕೋವ್ಯಾಕ್ಸಿನ್ ಲಸಿಕೆ ಪಡೆದ 18ರಿಂದ 98 ವರ್ಷ ವಯಸ್ಸಿನ 25,800 ಅಭ್ಯರ್ಥಿಗಳ ಮೇಲೆ ಲಸಿಕೆ ಉಂಟು ಮಾಡಿದ ಪರಿಣಾಮಗಳನ್ನು ವಿಶ್ಲೇಷಿಸಿ ಅಧ್ಯಯನ ವರದಿಯನ್ನು ಬುಧವಾರ ಪ್ರಕಟಿಸಲಾಗಿದೆ.
ಅಧ್ಯಯನ ವರದಿಯ ಪ್ರಕಾರ, ಕೋವ್ಯಾಕ್ಸಿನ್ ಲಸಿಕೆ ಪಡೆದ ಬಳಿಕ ಸೋಂಕಿಗೆ ತುತ್ತಾದವರು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಶೇ.100ರಷ್ಟುತಗ್ಗಿದೆ ಎಂದು ತಿಳಿಸಲಾಗಿದೆ.
ಇತ್ತೀಚಿನ ಕೊರೋನಾ ಪ್ರಕರಣಗಳ ಏರಿಕೆಯಿಂದಾಗಿ ಲಸಿಕೆ ಪಡೆದವರ ಪೈಕಿ 127 ಮಂದಿಯಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ. ಹೀಗಾಗಿ ಲಸಿಕೆ ಸೌಮ್ಯ, ಸಾಧಾರಣ ಮತ್ತು ಗಂಭೀರ ಪ್ರಕರಣಗಳ ವಿರುದ್ಧ ಶೇ.78ರಷ್ಟುಪರಿಣಾಮಕಾರಿ ಎನಿಸಿಕೊಂಡಿದೆ. ರೋಗ ಲಕ್ಷಣಗಳು ಇಲ್ಲದೆ ಇರುವ ಸೋಂಕಿನ ವಿರುದ್ಧ ಲಸಿಕೆ ಶೇ.70ರಷ್ಟುಪರಿಣಾಮಕಾರಿಯಾಗಿದೆ ಹಾಗೂ ಲಸಿಕೆ ಪಡೆದವರಲ್ಲಿ ಸೋಂಕು ಹರಡುವಿಕೆಯನ್ನು ತಗ್ಗಿಸಿದೆ ಎಂದು ಭಾರತ್ ಬಯೋಟೆಕ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.