ಇವಿಎಂ ಹ್ಯಾಕ್‌ ಮಾಡಲಾಗದು ಎಂದು 42 ಸಲ ಕೋರ್ಟು ತೀರ್ಪು ನೀಡಿದೆ: ಚುನಾವಣಾ ಆಯುಕ್ತ

ಇವಿಎಂ ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದು 42 ಬಾರಿ ನ್ಯಾಯಾಲಯಗಳು ತೀರ್ಪು ನೀಡಿವೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ. 

Court verdict 42 times that EVMs cannot be hacked delhi Election Commissioner

ನವದೆಹಲಿ : ಇವಿಎಂಗಳನ್ನು ತಿರುಚಲಾಗುತ್ತಿದೆ, ಮತದಾನದ ಅಂಕಿಸಂಖ್ಯೆಗಳಲ್ಲಿ ಆಯೋಗ ಬೇಕೆಂದೇ ಏರುಪೇರು ಮಾಡುತ್ತಿದೆ, ಚುನಾವಣೆ ವೇಳೆ ನಿಷ್ಪಕ್ಷಪಾತ ಕಾರ್ಯನಿರ್ವಹಣೆ ಮಾಡಲ್ಲ ಎಂಬ ಆರೋಪಗಳಿಗೆ ಮುಖ್ಯ ಚುನಾಚಣಾ ಆಯುಕ್ತ ರಾಜೀವ್‌ ಕುಮಾರ್‌ ತಿರುಗೇಟು ನೀಡಿದ್ದಾರೆ. ‘ಇವಿಎಂಗಳನ್ನು ಹ್ಯಾಕ್‌ ಮಾಡಲು ಬರಲ್ಲ ಎಂದು 42 ಸಲ ಕೋರ್ಟುಗಳು ತೀರ್ಪು ನೀಡಿವೆ. ಮತದಾನದ ಅಂಕಿ ಅಂಶಗಳನ್ನು ಏರುಪೇರು ಮಾಡುವ ಪ್ರಶ್ನೆಯೇ ಇಲ್ಲ. ನಮ್ಮಿಂದ ನಿಷ್ಪಕ್ಷಪಾಯ ಕೆಲಸ ನಡೆಯುತ್ತಿದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ದಿಲ್ಲಿ ಚುಣಾವಣೆ ಘೋಷಣೆಗೆ ಸುದ್ದಿಗೋಷ್ಠಿ ನಡೆಸಿದ ಅವರು, ‘ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ದುರ್ಬಳಕೆ ಆರೋಪ ಸುಳ್ಳು. ಇವಿಎಂಗಳು ಟ್ಯಾಂಪರ್ ಪ್ರೂಫ್ ಆಗಿದ್ದು, ಅವುಗಳನ್ನು ಹ್ಯಾಕ್ ಮಾಡುವುದು ಅಸಾಧ್ಯ. ಹೀಗಂತ 42 ಬಾರಿ ಕೋರ್ಟುಗಳು ತೀರ್ಪು ನೀಡಿವೆ .ಪ್ರತಿ ಸಲ ದೂರು ಬಂದಾಗಲೂ ಪರಿಶೀಲನೆ ವೇಳೆ ಆರೋಪ ಸುಳ್ಳೆಂದು ಸಾಬೀತಾಗಿದೆ. ಇವಿಎ ತಂತ್ರಜ್ಞಾನವು ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳ ತತ್ವಗಳನ್ನು ನಿರಂತರವಾಗಿ ಎತ್ತಿಹಿಡಿದಿದೆ’ ಎಂದರು.

ಮತದಾರರ ಪಟ್ಟಿಯಲ್ಲಿ ಕೆಲವು ಹೆಸರು ಬೇಕೆಂದೇ ತೆಗೆಯಲಾಗಿದೆ ಎಂಬ ಆಪ್‌ ಆರೋಪ ಸುಳ್ಳು. ಮತದಾರರ ಪಟ್ಟಿಗಳಲ್ಲಿನ ಯಾವುದೇ ಬದಲಾವಣೆಗೆ ಚುನಾವಣಾ ಆಯೋಗವು ಕಟ್ಟುನಿಟ್ಟಾಗಿ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸುತ್ತದೆ ಎಂದರು.  ಅಲ್ಲದೆ, ಮತದಾನದ ಅಂಕಿ-ಅಂಶಗಳಲ್ಲಿ ಆಯೋಗ ಅಕ್ರಮ ಎಸಗುತ್ತಿದೆ ಎಂಬ ಆರೋಪವೂ ಸುಳ್ಳು ಎಂದು ಅವರು ಸ್ಪಷ್ಟಪಡಿಸಿದರು. ಇನ್ನು ಚುನಾವಣೆ ವೇಳೆ ಎಲ್ಲ ಪಕ್ಷಗಳ ನಾಯಕರ ತಪಾಸಣೆ ನಡೆಯುವುದು ಸಹಜ. ಇದರಲ್ಲಿ ಯಾವುದೇ ತಾರತಮ್ಯ ಮಾಡಲ್ಲ ಎಂದು ಅವರು ಸ್ಪಷ್ಟಪಡಿಸಿದರು.  ಇದೇ ವೇಳೆ, ಚುನಾವಣೆಯಲ್ಲಿ ಪುಕ್ಕಟೆ ಭರವಸೆಗಳನ್ನು ತಡೆಯುವುದು ಅಯೋಗಕ್ಕೆ ಅಸಾಧ್ಯ ಎಂದು ಅವರು ನುಡಿದರು.

ದಿಲ್ಲಿ ವಿಧಾನಸಭೆಯಲ್ಲಿ ತ್ರಿಕೋನ ಕದನ

ನವದೆಹಲಿ: ದಿಲ್ಲಿ ವಿಧಾನಸಭೆಯಲ್ಲಿ ತ್ರಿಕೋನ ಕದನ ಏರ್ಪಟ್ಟಿದೆ. ಕಾಂಗ್ರೆಸ್‌, ಬಿಜೆಪಿ ಹಾಗೂ ಆಪ್‌- ಈ ಮೂರೂ ಪಕ್ಷಗಳು ಅಧಿಕಾರಕ್ಕೆ ಹೋರಾಡುತ್ತಿವೆ. ದಿಲ್ಲಿಯಲ್ಲಿ ಆಪ್‌ ಈ ಸಲ ಗೆದ್ದರೆ ಹ್ಯಾಟ್ರಿಕ್‌ ಗೆಲುವಾಗಲಿದೆ. ಈ ಹಿಂದೆ ಸತತ 2 ಬಾರಿ ಅರವಿಂದ ಕೇಜ್ರಿವಾಲ್‌ ನೇತೃತ್ವದಲ್ಲಿ ಆಪ್‌ ಜಯಿಸಿ ಅವರೇ ಮುಖ್ಯಮಂತ್ರಿಯಾಗಿದ್ದರು. ಆದರೆ ಈ ಸಲ ಅವರು ಮದ್ಯ ಹಗರಣದ ಕಾರಣ ಇತ್ತೀಚೆಗೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಆತಿಶಿ ಅವರಿಗೆ ಸಿಎಂ ಪಟ್ಟ ಕಟ್ಟಿದರು. ಆದರೆ ಈ ಸಲ ಗೆದ್ದರೆ ಮತ್ತೆ ತಾವೇ ಸಿಎಂ ಎಂದು ಅವರು ಘೋಷಿಸಿಕೊಂಡಿದ್ದಾರೆ.

ಇನ್ನು ಆಪ್‌ ನಡೆಸಿದೆ ಎನ್ನಲಾದ ಮದ್ಯ ಹಗರಣ ಹಾಗೂ ವಿವಿಧ ಹಗರಣಗಳು, ಕೇಜ್ರಿವಾಲ್‌, ಮನೀಶ ಸಿಸೋಡಿಯಾರಂಥ ನಾಯಕರ ಬಂಧನವನ್ನೇ ಗುರಿಯಾಗಿಸಿಕೊಂಡು ಬಿಜೆಪಿ ಕಣಕ್ಕಿಳಿದಿದೆ. ಆಪ್‌ನ ಹ್ಯಾಟ್ರಿಕ್‌ ಗೆಲುವಿಗೆ ಭಂಗ ತರುವ ಉದ್ದೇಶ ಬಿಜೆಪಿಗೆ ಇದೆ. ಆದರೆ ಇಲ್ಲಿ ಕೇಜ್ರಿವಾಲ್‌ಗೆ ಸರಿಸಮನಾಗಿ ನಿಲ್ಲುವ ಬಲಶಾಲಿ ನಾಯಕ ಇಲ್ಲ. ಸಿಎಂ ಅಭ್ಯರ್ಥಿಯನ್ನೂ ಬಿಜೆಪಿ ಘೋಷಿಸಿಲ್ಲ. ಇದು ಬಿಜೆಪಿ ಮೈನಸ್‌ ಪಾಯಿಂಟ್‌.

ಕಾಂಗ್ರೆಸ್‌ ಈ ಸಲ ಇಂಡಿಯಾ ಕೂಟದ ಮಿತ್ರಪಕ್ಷ ಆಪ್‌ ಜತೆ ಮೈತ್ರಿ ಮಾಡಿಕೊಳ್ಳದೇ ಏಕಾಂಗಿಯಾಗಿ ಸ್ಪರ್ಧಿಸಿದೆ. ಶೀಲಾ ದೀಕ್ಷಿತ್‌ ಅಧಿಕಾರ ಪತನದ ನಂತರ ರಾಜ್ಯದಲ್ಲಿ ಕಾಂಗ್ರೆಸ್‌ ಸತತ 2 ಸಲ ಸೋತು ಸುಣ್ಣವಾಗಿದೆ. ಹೀಗಾಗಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಲಕಾ ಲಾಂಬಾ, ಶೀಲಾ ದೀಕ್ಷಿತ್‌ ಪುತ್ರ ಸಂದೀಪ್‌ ದೀಕ್ಷಿತ್‌ ಸೇರಿ ಅನೇಕರನ್ನು ಕಣಕ್ಕೆ ಇಳಿಸಿದ್ದು, ಅಧಿಕಾರದ ಬರವನ್ನು ದೂರ ಮಾಡಿಕೊಳ್ಳಲು ಯತ್ನಿಸುತ್ತಿದೆ.

Latest Videos
Follow Us:
Download App:
  • android
  • ios