Asianet Suvarna News Asianet Suvarna News

ಗಡ್ಕರಿ ಸಂದರ್ಶನ: ಭಾರತಕ್ಕೆ ಈ ಸಂಕಷ್ಟ ತೆರೆಮರೆಯಲ್ಲಿ ಸಿಕ್ಕ ವರ!

ಎಲ್ಲ ಸಚಿವರೂ ಲಾಕ್‌ಡೌನ್‌ ವೇಳೆ ದೆಹಲಿಯಲ್ಲಿದ್ದು ಕೆಲಸ ಮಾಡುತ್ತಿದ್ದರೆ ನಿತಿನ್ ಗಡ್ಕರಿ ಮಾತ್ರ ತಮ್ಮೂರಾದ ಮಹಾರಾಷ್ಟ್ರದ ನಾಗಪುರದಿಂದಲೇ ಕೆಲಸ ಮಾಡುತ್ತಿದ್ದಾರೆ. ಅವರ ಜೊತೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸುವರ್ಣ ನ್ಯೂಸ್ ಸೋದರ ಸಂಸ್ಥೆ ‘ಕನ್ನಡಪ್ರಭ’ ನಡೆಸಿದ ಸಂದರ್ಶನ ಇಲ್ಲಿದೆ.

Coronavirus would be a boon for India Says Union Minister Nitin Gadkari
Author
Bengaluru, First Published May 23, 2020, 11:24 AM IST

ಪ್ರಶಾಂತ್‌ ನಾತು, ಸುವರ್ಣ ನ್ಯೂಸ್‌

ಭಾರತ ಸರ್ಕಾರದಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಬಿಟ್ಟರೆ ಅತಿ ಹೆಚ್ಚು ಪ್ರಭಾವಿ ಮಂತ್ರಿ ಎಂದರೆ ನಿತಿನ್‌ ಗಡ್ಕರಿ. ಇವರನ್ನು ಬಾಳ್‌ ಠಾಕ್ರೆ ಅಭಿಮಾನದಿಂದ ‘ರೋಡ್‌ ಕರಿ’ ಎಂದು ಕರೆಯುತ್ತಿದ್ದರಂತೆ. ಎಲ್ಲ ಸಚಿವರೂ ಲಾಕ್‌ಡೌನ್‌ ವೇಳೆ ದೆಹಲಿಯಲ್ಲಿದ್ದು ಕೆಲಸ ಮಾಡುತ್ತಿದ್ದರೆ ಗಡ್ಕರಿ ಮಾತ್ರ ತಮ್ಮೂರಾದ ಮಹಾರಾಷ್ಟ್ರದ ನಾಗಪುರದಿಂದಲೇ ಕೆಲಸ ಮಾಡುತ್ತಿದ್ದಾರೆ. ಅವರ ಜೊತೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ‘ಕನ್ನಡಪ್ರಭ’ ನಡೆಸಿದ ಸಂದರ್ಶನ ಇಲ್ಲಿದೆ.

ಕೇಂದ್ರ ಸರ್ಕಾರ ತರಾತುರಿಯಲ್ಲಿ ಲಾಕ್‌ಡೌನ್‌ ಹೇರಿತು ಎಂಬ ಟೀಕೆ ವಿಪಕ್ಷಗಳಿಂದ ಕೇಳಿ ಬರುತ್ತಿದೆಯಲ್ಲ?

ಲಾಕ್‌ಡೌನ್‌ ನಿರ್ಣಯ ನೇರವಾಗಿ ಪ್ರಧಾನಿ ಮೋದಿ ತೆಗೆದುಕೊಂಡಿದ್ದಲ್ಲ. ಈ ಕಠಿಣ ನಿರ್ಧಾರಕ್ಕೆ ಬರುವ ಮುಂಚೆ ಸ್ವತಃ ಮೋದಿ ಎಲ್ಲ ಮುಖ್ಯಮಂತ್ರಿಗಳೊಂದಿಗೆ, ಅಧಿ​ಕಾರಿಗಳೊಂದಿಗೆ, ಉದ್ಯಮಗಳ ಪ್ರತಿನಿಧಿ​ಗಳು ಮತ್ತು ಆರೋಗ್ಯ ಪರಿಣತರೊಂದಿಗೆ ಚರ್ಚೆ ಮಾಡಿದ್ದಾರೆ. ಸರ್ಕಾರದ ಮೊದಲ ಪ್ರಾತಿನಿಧ್ಯ ಜನರ ಆರೋಗ್ಯ ಕಾಪಾಡುವುದು. ಹೀಗಾಗಿ ಅನಿವಾರ್ಯವಾಗಿ ಲಾಕ್‌ಡೌನ್‌ ನಿರ್ಣಯಕ್ಕೆ ಬರಲಾಯಿತು. ಇವತ್ತು ವಿಶ್ವದ ಮುಂದುವರೆದ ರಾಷ್ಟ್ರಗಳಾದ ಅಮೆರಿಕ, ಬ್ರಿಟನ್‌, ಇಟಲಿ, ಫ್ರಾನ್ಸ್‌ಗಳಿಗಿಂತ ನಾವು ಸೋಂಕು ತಡೆಯುವಲ್ಲಿ ಯಶಸ್ಸು ಸಾ​ಧಿಸಿದ್ದೇವೆ. ಇದಕ್ಕೆ ಮುಖ್ಯ ಕಾರಣ ಮೋದಿ ಸರ್ಕಾರ ತೆಗೆದುಕೊಂಡ ಸಮಯೋಚಿತ ನಿರ್ಣಯ. ನಾನು, ಇವತ್ತು ಎಲ್ಲರಿಗೂ ಹೇಳುವುದು ಇಷ್ಟೇ; ಇದು ರಾಜಕೀಯ ಮಾಡುವ ಸಮಯ ಅಲ್ಲ. ಎಲ್ಲರೂ ಒಗ್ಗಟ್ಟಾಗಿ ಹೋರಾಡುವ ಕಾಲ.

ಲಾಕ್‌ಡೌನ್‌ ಯಶಸ್ವಿ ಎನ್ನುವುದೇ ಆದಲ್ಲಿ ಸೋಂಕು 500 ಇದ್ದಾಗ ದೇಶವನ್ನೆಲ್ಲ ಮುಚ್ಚಿಸಿದ ಕೇಂದ್ರ ಸರ್ಕಾರ, 1 ಲಕ್ಷ ಸೋಂಕುಗಳಿದ್ದಾಗ ಎಲ್ಲವನ್ನೂ ತೆರೆಯಲು ಅನುಮತಿ ಏಕೆ ನೀಡುತ್ತಿದೆ?

ಲಾಕ್‌ಡೌನ್‌ ಮಾಡಿದ್ದರಿಂದಲೇ ಸೋಂಕಿನ ತೀವ್ರತೆ ತಗ್ಗಿದೆ. ಇಲ್ಲವಾದಲ್ಲಿ ನಾವು ಈಗಾಗಲೇ 10 ಲಕ್ಷ ಸೋಂಕಿತರ ದೇಶವಾಗುತ್ತಿದ್ದೆವು. 500 ಸೋಂಕುಗಳಿದ್ದಾಗ ನಿಜಾಮುದ್ದೀನ್‌ ಮರ್ಕಜ್‌ನಂಥ ಘಟನೆ ನಡೆಯದೇ ಇದ್ದರೆ, ಕೆಲವರು ವೈದ್ಯರೊಂದಿಗೆ ಪೂರ್ಣ ಸಹಕರಿಸಿದ್ದರೆ ನಾವು ಒಂದು ಲಕ್ಷವೂ ತಲುಪುತ್ತಿರಲಿಲ್ಲ. ಕೊರೋನಾ ಒಂದು ಕೃತಕ ವೈರಸ್ಸಿನ ಸೋಂಕು. ಹೀಗಾಗಿ ಚುಚ್ಚುಮದ್ದು ಬೇಕೇ ಬೇಕು. ಇನ್ನೊಂದೆರಡು ತಿಂಗಳಲ್ಲಿ ಇದಕ್ಕೆ ಸಂಬಂಧಪಟ್ಟಸಂಶೋಧನೆ ಆಗಬಹುದು ಅನ್ನಿಸುತ್ತದೆ. ವ್ಯಾಕ್ಸೀನ್‌ ಸಿಗುವವರೆಗೆ ಇಂಥ ಕಷ್ಟಗಳನ್ನು ಎದುರಿಸಲು ಸಿದ್ಧರಾಗಲೇಬೇಕು.

ಕೊರೋನಾದಿಂದ ಭಾರತಕ್ಕೆ ಎಷ್ಟುನಷ್ಟವಾಗಿದೆ, ಮುಂದೆ ಎಷ್ಟುಆಗಬಹುದು ಎಂಬ ಅಂದಾಜು ಸರ್ಕಾರ ಮಾಡಿದೆಯಾ?

ದೊಡ್ಡ ನಷ್ಟಆಗಿದೆ. ಇದಕ್ಕಾಗಿಯೇ ನಾವು 20 ಲಕ್ಷ ಕೋಟಿ ಪ್ಯಾಕೇಜ್‌ ಕೊಟ್ಟಿದ್ದೇವೆ. ಇವತ್ತಿನ ಪರಿಸ್ಥಿತಿಯಲ್ಲಿ ಚೀನಾ ಜೊತೆ ವ್ಯಾಪಾರ ನಡೆಸಲಿಕ್ಕೆ ಯಾರೂ ತಯಾರಿಲ್ಲ. ಇಂಥ ಸ್ಥಿತಿಯಲ್ಲಿ ಭಾರತಕ್ಕೆ ಇದು ಚ್ಝಿಛಿssಜ್ಞಿಜ ಜ್ಞಿ dಜಿsಜ್ಠಜಿsಛಿ. ನಾವು ಆ ಕಂಪನಿಗಳನ್ನು ಗುರುತಿಸಿ, ಇಲ್ಲಿಗೆ ಬಂಡವಾಳ ತಂದರೆ ಉದ್ಯೋಗ ಸೃಷ್ಟಿಆಗುತ್ತದೆ. ಲಘು ಉದ್ಯೋಗಗಳಿಗೆ ಕೆಲಸ ಸಿಗುತ್ತದೆ. ಡಿಮ್ಯಾಂಡ್‌ ತನ್ನಿಂದ ತಾನೇ ಸೃಷ್ಟಿಆಗಿ ಆರ್ಥಿಕತೆ ಹಳಿಗೆ ಬರುತ್ತದೆ. ಆದರೆ ಇದಕ್ಕಾಗಿ ಉದ್ಯೋಗಿಗಳು, ಕಾರ್ಖಾನೆ ಮಾಲಿಕರು, ವ್ಯಾಪಾರಸ್ಥರು ಮತ್ತು ಸರ್ಕಾರ ಕೂಡಿ ಕೆಲಸ ಮಾಡಬೇಕು.

ಆದರೆ 20 ಲಕ್ಷ ಕೋಟಿ ಕೇವಲ ಹೆಸರಿಗೆ ಮಾತ್ರ ಪ್ಯಾಕೇಜ್‌ ಅಷ್ಟೆ. ಜನರ ಕೈಗೆ ದುಡ್ಡೇ ಬರುತ್ತಿಲ್ಲ, ಇದರಿಂದ ಲಾಭ ಯಾರಿಗೆ?

ಇಷ್ಟಕ್ಕೂ ಸರ್ಕಾರದ ಬಳಿಗೆ ದುಡ್ಡು ಎಲ್ಲಿಂದ ಬರುತ್ತದೆ, ಅದೇನು ಭಗವಂತ ಕೊಡೋದಲ್ಲ. ಜನರಿಂದಲೇ ಸರ್ಕಾರ ನಡೆಯೋದು. ನೀವು ಅಮೆರಿಕ, ಜಪಾನ್‌ ಜೊತೆ ಭಾರತವನ್ನು ಹೋಲಿಸಬೇಡಿ. ಅವರ ಮತ್ತು ನಮ್ಮ ಆರ್ಥಿಕತೆ ಏಕ್‌ದಂ ಬೇರೆಯೇ ಇದೆ. ಇವತ್ತು ಕೇಂದ್ರದ ತೆರಿಗೆ ಸಂಗ್ರಹ ಕಡಿಮೆ ಆಗಿದೆ. ರಾಜ್ಯ ಸರ್ಕಾರಗಳ ಬಳಿ ಮುಂದಿನ ತಿಂಗಳಿನಿಂದ ಸಂಬಳಕ್ಕೆ ದುಡ್ಡಿಲ್ಲ. ವ್ಯಾಪಾರಿಗಳು, ಕಾರ್ಖಾನೆ ಮಾಲಿಕರು ಹೊಸ ಆರ್ಡರ್‌ಗಳಿಲ್ಲದೆ ಸಮಸ್ಯೆಯಲ್ಲಿದ್ದಾರೆ. ನೌಕರಿ ಮಾಡುವವನು ಉದ್ಯೋಗ ಕಳೆದುಕೊಂಡು ಊರಿಗೆ ಹೋಗುತ್ತಿದ್ದಾನೆ. ಬೇರೆ ಯಾಕೆ, ಪತ್ರಿಕೆಗಳೇ ದೊಡ್ಡ ಸಂಕಷ್ಟದಲ್ಲಿವೆ. ಜಾಹೀರಾತುಗಳಿಲ್ಲ. ಹೀಗೆ ಎಲ್ಲರೂ ಸಮಾನ ದುಃಖಿಗಳೇ. ಇದು ಅತೀವ ಸಂಕಷ್ಟದ ಕಾಲ. ಹೀಗಿರುವಾಗ ಕೇಂದ್ರ ಸರ್ಕಾರ ತನ್ನ ಜಿಡಿಪಿಯ ಶೇ.10ರಷ್ಟುಹಣವನ್ನು ಬ್ಯಾಂಕ್‌ಗಳ ಮೂಲಕ ಮಾರ್ಕೆಟ್‌ಗೆ ಪಂಪ್‌ ಮಾಡುತ್ತಿದೆ. ಇದಕ್ಕಾಗಿ ಸರ್ಕಾರ ಗ್ಯಾರಂಟಿ ಕೊಡುತ್ತಿದೆ. ಇವತ್ತಿನ ಪರಿಸ್ಥಿತಿಯಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಹೇಳಿದಂತೆ ‘ಕದಂ ಕದಂ ಬಡಾಯೇ ಜಾ ಕೋಶಿಷ್‌ ಕರನೇ ವಾಲೊಂಕಿ ಕಭೀ ಹಾರ್‌ ನಹೀ ಹೋತಿ’ ಎಂಬುದೊಂದೆ ಮಾರ್ಗ.

ನೋಟು ರದ್ದತಿಯಿಂದಲೇ ಸಣ್ಣ, ಮಧ್ಯಮ ಕೈಗಾರಿಕೆಗಳು ನೆಲ ಕಚ್ಚಿದ್ದವು. ಈಗಂತೂ ಕೊರೋನಾ ಕಾಲದಲ್ಲಿ 25 ಪ್ರತಿಶತ ಸಣ್ಣ ಕೈಗಾರಿಕೆಗಳು ಬಾಗಿಲು ಹಾಕಬಹುದು ಎಂಬ ಅಂದಾಜಿದೆ ಅಲ್ಲವೇ?

ನಿಮ್ಮ ಮಾತನ್ನು ಒಪ್ಪುತ್ತೇನೆ. ಕೊರೋನಾಗಿಂತ ಮೊದಲೇ ಸಣ್ಣ ಕೈಗಾರಿಕೆಗಳು ಸಮಸ್ಯೆಯಲ್ಲಿದ್ದವು. ಇದಕ್ಕಾಗಿ ಎಂದೇ ಈಗ ಯಾವುದೇ ಗ್ಯಾರಂಟಿ ಇಲ್ಲದೆಯೇ 3 ಲಕ್ಷ ಕೋಟಿ ಹಣ ಸಾಲದ ರೂಪದಲ್ಲಿ ಕೊಡುತ್ತಿದ್ದೇವೆ. ಮೊದಲೇ ಸುಸ್ತಿದಾರ ಆದವರಿಗೆ 20 ಸಾವಿರ ಕೋಟಿ ಪುನರ್‌ ಬಂಡವಾಳ ಕೊಡಲಿದ್ದೇವೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳಿಂದ ಸಣ್ಣ ಕೈಗಾರಿಕೆಗಳಿಗೆ 5 ಲಕ್ಷ ಕೋಟಿ ಹಣ ಬರುವುದು ಬಾಕಿ ಇದೆ. ಇದನ್ನು ಮುಂದಿನ 45 ದಿನದಲ್ಲಿ ಬಿಡುಗಡೆ ಮಾಡಲು ಹೇಳಿದ್ದೇನೆ. ರಾಷ್ಟ್ರೀಕೃತ ಬ್ಯಾಂಕ್‌ಗಳ ಜೊತೆಜೊತೆಗೆ ಅರ್ಬನ್‌ ಬ್ಯಾಂಕ್‌ಗಳು, ಜಿಲ್ಲಾ ಕೋ-ಆಪರೇಟಿವ್‌ ಬ್ಯಾಂಕ್‌ಗಳಿಗೂ ಕೂಡ ಎಂಎಸ್‌ಎಂಇ ಸಾಲ ಶುರು ಮಾಡುವ ಅ​ಧಿಕಾರ ಕೊಟ್ಟಿದ್ದೇವೆ. ಸಣ್ಣ ಕೈಗಾರಿಕೆಗಳಿಗೆ ಬೇಕಾದಷ್ಟುಸಾಲ ಕೊಟ್ಟು, ಆರ್ಥಿಕ ಚಕ್ರ ತಿರುಗುವಂತೆ ಮಾಡಬೇಕು. ನೋಡಿ, ನನ್ನ ಕಂಪನಿಯೇ ಸ್ವತಃ ಟೈಟಾನ್‌ ಕಂಪನಿಗೆ ಖಾದಿ ಬೆಲ್ಟ್‌ ಮತ್ತು ಡೈಲ್‌ ತಯಾರಿಸಿ ಕೊಡುತ್ತಿದೆ. ಇದು ಎಷ್ಟುಹಿಟ್‌ ಆಗಿದೆ ಎಂದರೆ, ಜನ ಕೇಳಿದರೂ ಕೊಡಲು ಸ್ಟಾಕ್‌ ಇಲ್ಲ. ಹುಮ್ಮಸ್ಸು ಇರುವವರಿಗೆ ಸಾಲ ಕೊಟ್ಟು, ಹೊಸ ತಂತ್ರಜ್ಞಾನದಿಂದ ಸ್ಪರ್ಧೆ ಮಾಡುವುದೇ ಇಂದಿನ ಅವಶ್ಯಕತೆ. ನನ್ನ ಬಳಿ ಗುಡಿ ಕೈಗಾರಿಕೆ ಇಲಾಖೆ ಬಂದಾಗ ಟರ್ನ್‌ ಓವರ್‌ 88 ಸಾವಿರ ಕೋಟಿ ಇತ್ತು. ಇದನ್ನು 2 ವರ್ಷದಲ್ಲಿ 5 ಲಕ್ಷ ಕೋಟಿಗೆ ಒಯ್ಯುತ್ತೇನೆ ನೋಡುತ್ತೀರಿ. ನೀವು ಕರ್ನಾಟಕದವರು ಎಂದು ಹೇಳುತ್ತೇನೆ. ನಿಮ್ಮ ಮಂಗಳೂರಿನ ಮೀನುಗಾರರು ತಮ್ಮ ಬೋಟ್‌ಗಳಿಂದ ಸಮುದ್ರದಲ್ಲಿ ಕೇವಲ 7 ನಾಟಿಕಲ್‌ ಮೈಲು ಮಾತ್ರ ಒಳಗಡೆ ಹೋಗಬಹುದಿತ್ತು. ಈಗ ಕೊಚ್ಚಿನ್‌ ಶಿಪ್‌ಯಾರ್ಡ್‌ನಲ್ಲಿ ನಾವೇ ಹೊಸ ಟ್ರಾಲರ್‌ ತಯಾರಿಸಿಕೊಟ್ಟಿದ್ದೇವೆ. ಇದರಲ್ಲಿ 100 ನಾಟಿಕಲ್‌ ಮೈಲ್‌ವರೆಗೆ ಹೋಗಬಹುದು. ಇದರರ್ಥ ಏನೆಂದರೆ, ನಮ್ಮ ಮೀನುಗಾರಿಕೆ ಉದ್ಯಮ 5 ಪಟ್ಟು ಬೆಳೆಯಲಿದೆ. ನಿಮ್ಮ ಕರ್ನಾಟಕದಲ್ಲೇ ಜೇನು ಸಾಕಾಣಿಕೆ ಬೆಳೆಯುತ್ತಿದೆ. ಮೈಸೂರಿನ ಕೇಂದ್ರ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದೆ. ಇವರಿಗೆ ಸಾಲ, ತಂತ್ರಜ್ಞಾನ, ಮಾರುಕಟ್ಟೆಒದಗಿಸಿಕೊಡೋದು ಸರ್ಕಾರವಾಗಿ ನಮ್ಮ ಜವಾಬ್ದಾರಿ. ಇದನ್ನು ನಾವು ಸ್ವತಃ ಮಾನಿಟರ್‌ ಮಾಡುತ್ತೇವೆ.

ನೀವು ಸಣ್ಣ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ಹೊಸ ಸಾಲ ಕೊಡುವುದಾಗಿ ಹೇಳಿದ್ದೀರಿ. ಇದರಿಂದ ಮೊದಲೇ ಸಾಲ ತೆಗೆದುಕೊಂಡು ಕಾರ್ಖಾನೆ ನಡೆಸುವವನಿಗೇನು ಲಾಭ ಮತ್ತು ನಿಜಕ್ಕೂ ಆಧಾರ ಇಲ್ಲದೆ ಬ್ಯಾಂಕ್‌ಗಳು ಸಾಲ ಕೊಟ್ಟಾವೆಯೇ?

ಇದು ಒಳ್ಳೆಯ ಪ್ರಶ್ನೆ. ನೋಡಿ, ಮೊದಲ ಸಾಲ ತೆಗೆದುಕೊಂಡವರಿಗೆ ಕಚ್ಚಾ ಸಾಮಗ್ರಿ ಖರೀದಿ ಮಾಡಲು ಹಣವಿಲ್ಲ. ನಾವು 20 ಪೆರ್ಸೆಂಟ್‌ ಹಣ ಯಾವುದೇ ಗ್ಯಾರಂಟಿ ಇಲ್ಲದೆ ಕೊಡುತ್ತೇವೆ ಮತ್ತು ಬ್ಯಾಂಕ್‌ಗಳು ನಮ್ಮ ಯೋಜನೆ ಜಾರಿಗೊಳಿಸುವಂತೆ ನೋಡಿಕೊಳ್ಳಲು ಪ್ರಧಾನಿ ಮೋದಿ, ರಾಜನಾಥ ಸಿಂಗ್‌ ಅಧ್ಯಕ್ಷತೆಯ ಸಮಿತಿಗೆ ಸೂಚನೆ ಕೊಟ್ಟಿದ್ದಾರೆ. ಈ ಸಾಲ ಕೊಡಲು ಬ್ಯಾಂಕ್‌ಗಳಿಗೆ ಯಾವುದೇ ರಿಸ್ಕ್‌ ಇಲ್ಲ. ಕೇಂದ್ರ ಸರ್ಕಾರ ಇದಕ್ಕೆ ಗ್ಯಾರಂಟಿ ಕೊಡುತ್ತಿದೆ.

ನೀವು ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲು ಒಂದು ಲಕ್ಷ ಕೋಟಿ ಹಣ ಮೀಸಲಿಟ್ಟಿದ್ದೀರಿ. ಆದರೆ ಈಗ ಕೊರೋನಾ ಭಯದಿಂದ ಕಾರ್ಮಿಕರು ಹಳ್ಳಿಗಳಿಗೆ ವಾಪಸ್‌ ಹೋಗುತ್ತಿದ್ದಾರೆ. ಇದರಿಂದ ಹೆದ್ದಾರಿ ನಿರ್ಮಾಣ ಕಾರ್ಯ ನಿಲ್ಲಬಹುದು ಅಲ್ಲವೇ?

ಹೆದ್ದಾರಿ ನಿರ್ಮಾಣದಲ್ಲಿ ವಲಸೆ ಕಾರ್ಮಿಕರು 20ರಿಂದ 25 ಪ್ರತಿಶತ ಇರಬಹುದು ಅಷ್ಟೇ. ಹೀಗಾಗಿ ಎಲ್ಲಿಯೂ ಕೆಲಸ ನಿಂತಿಲ್ಲ. ಆದರೆ ಕಾರ್ಮಿಕರಲ್ಲಿ ಭಯ ಇದೆ. ನಮ್ಮ ಕೆಲಸ ಆ ಭಯ ದೂರ ಮಾಡಿ ಪಾಸಿಟಿವಿಟಿ ತರುವುದು ಅಷ್ಟೇ. ಜನ ಇವತ್ತಲ್ಲಾ ನಾಳೆ ಕೆಲಸಕ್ಕೆ ಮರಳಲೇ ಬೇಕು. 3ನೇ ಹಂತದ ಲಾಕ್‌ಡೌನ್‌ ನಂತರ ನಮ್ಮ 80 ಪ್ರತಿಶತ ಹೆದ್ದಾರಿ ನಿರ್ಮಾಣ ಕೆಲಸ ಪುನಾರಂಭವಾಗಿದೆ.

ಕರ್ನಾಟಕದಲ್ಲಿ ಒಂದೆರಡು ಹೆದ್ದಾರಿ ಬಿಟ್ಟರೆ ಬಹುತೇಕ ಹೈವೆಗಳಲ್ಲಿ ಕೆಲಸ ನಡೆಯುತ್ತಲೇ ಇದೆ. ಯಾವಾಗ ಮುಗಿಸುತ್ತೀರಿ?

ಕರ್ನಾಟಕದ ಬಗ್ಗೆ ನಾನೇ ಹೇಳುವವನಿದ್ದೆ. ನಿಮ್ಮ ಶಿರಾಡಿ ಘಾಟ್‌ ಹೆದ್ದಾರಿ ನಿರ್ಮಾಣ ಕಾರ್ಯ ತಡವಾಗಿದ್ದು ಏಕೆ ಗೊತ್ತಾ? ಕರ್ನಾಟಕದ ಅರಣ್ಯ ಮತ್ತು ಪರಿಸರ ಇಲಾಖೆ ಅ​ಧಿಕಾರಿಗಳು ಫೈಲ್‌ 4 ವರ್ಷ ಹಿಡಿದುಕೊಂಡು ಕುಳಿತಿದ್ದರು. ಹೀಗಾಗಿ ಎಲ್‌ ಅಂಡ್‌ ಟಿ ಅಂಥ ನಿರ್ಮಾಣ ಕಾಮಗಾರಿ ಕಂಪನಿ ಓಡಿ ಹೋಯಿತು. ಈಗ ಯಡಿಯೂರಪ್ಪ ಮುಖ್ಯಮಂತ್ರಿ ಆದ ಮೇಲೆ ಎಲ್ಲ ಅನುಮತಿ ತ್ವರಿತವಾಗಿ ಸಿಗುತ್ತಿದೆ. ನಾನು ಕಳೆದ 8 ತಿಂಗಳಲ್ಲಿ ಎರಡು ಬಾರಿ ಬೆಂಗಳೂರಿಗೆ ಬಂದು ಕಾಮಗಾರಿ ರಿವ್ಯೂ ಸ್ವತಃ ಮಾಡಿದ್ದೇನೆ. ಇನ್ನು ಸಿಆರ್‌ಎಫ್‌ ಕೆಲಸ ಸಾಕಷ್ಟು ಕರ್ನಾಟಕಕ್ಕೆ ಮಂಜೂರು ಮಾಡಿದ್ದೇನೆ. ಆದರೆ, 1000 ಮಂದಿಯ ಊಟ ತಯಾರಿದ್ದರೆ, 10 ಸಾವಿರ ಮಂದಿ ಊಟಕ್ಕೆ ಕುಳಿತ ಹಾಗೆ ಆಗುತ್ತಿದೆ. ಹೊಸ ರಸ್ತೆ ನಿರ್ಮಾಣ ಸಿಆರ್‌ ಎಫ್‌ ಅಡಿಯಲ್ಲಿ ಮಂಜೂರು ಮಾಡುತ್ತಿಲ್ಲ. ಹಳೆಯ ಪ್ರಾಜೆಕ್ಟ್ಗಳನ್ನು ಮುಗಿಸುತ್ತಿದ್ದೇವೆ ಅಷ್ಟೇ. ಪೆಟ್ರೋಲ್‌, ಡೀಸೆಲ್‌ ಮೇಲೆ ಸೆಸ್‌ ಹಾಕಿ ಬಂದ ಹಣ ಸಿಆರ್‌ಎಫ್‌ನಲ್ಲಿ ಕೊಡುತ್ತಿದ್ದೇವೆ.

ಖರ್ಗೆ, ಡಿ.ಕೆ ಸುರೇಶ್‌ರಂಥ ಕಾಂಗ್ರೆಸ್‌ ಸಂಸದರೂ ಕೂಡ ನೀವು 48 ಗಂಟೆಯಲ್ಲಿ ಫೈಲ್‌ ಕ್ಲಿಯರ್‌ ಮಾಡಿಕೊಡುತ್ತೀರಿ ಎಂದು ಪ್ರಶಂಸೆ ಮಾಡುತ್ತಾರೆ, ಇದು ಹೇಗೆ?

ನಾನು ಚುನಾವಣೆಯಲ್ಲಿ ಮಾತ್ರ ಪಕ್ಷ ರಾಜಕೀಯ ಮಾಡುತ್ತೇನೆ. ಅಭಿವೃದ್ಧಿ ಕೆಲಸದಲ್ಲಿ ಪಕ್ಷ ಏಕೆ ನೋಡಬೇಕು. ನನ್ನ ಹತ್ತಿರ ಬರುವ ಯಾವುದೇ ಸಂಸದ 5 ಮಜಲು ಹತ್ತಿ, ಆಯಾಸಗೊಂಡು ಜನರಿಗೋಸ್ಕರ ಕೆಲಸ ಮಾಡಿಸಲು ಬಂದಿರುತ್ತಾರೆ. ಕೆಲಸ ಆಗೋದಾದರೆ ‘ಆಗುತ್ತದೆ’ ಎನ್ನುತ್ತೇನೆ, ಇಲ್ಲವಾದರೆ ‘ಇಲ್ಲ’ ಎನ್ನುತ್ತೇನೆ. ಸುಮ್ಮನೆ ಓಡಾಡಿಸೋದು ನನಗೆ ಇಷ್ಟವಿಲ್ಲ. ನೀವು ಕಾಂಗ್ರೆಸ್‌ನ ಸಿದ್ದರಾಮಯ್ಯ, ಎಚ್‌.ಸಿ. ಮಹದೇವಪ್ಪ, ಕುಮಾರಸ್ವಾಮಿ, ರೇವಣ್ಣರನ್ನು ಕೇಳಿ ಬೇಕಾದರೆ, ಮಾಜಿ ಪ್ರಧಾನಿ ದೇವೇಗೌಡರನ್ನೂ ಕೇಳಿ. ಅವರು ತಂದ ಬಹುತೇಕ ಕೆಲಸ ಮಾಡಿಕೊಟ್ಟಿದ್ದೇನೆ. ಸ್ವತಃ ದೇವೇಗೌಡರು ನನಗೆ ಹೇಳಿದ್ದಾರೆ, ‘ನಾನು ಆಗಿದ್ದರೂ ಇಷ್ಟುಫೈಲ್‌ ಕ್ಲಿಯರ್‌ ಮಾಡುತ್ತಿರಲಿಲ್ಲ. ನೀವು ಬೇಗನೆ ಮಾಡಿಕೊಡುತ್ತೀರಿ’ ಎಂದು. ಕೆಲಸ ಅಗತ್ಯ ಇದ್ದರೆ, ಕಾನೂನಾತ್ಮಕವಾಗಿ ಇದ್ದರೆ ನಾನು ಪಾರ್ಟಿ ಯಾವುದು ಎಂದು ನೋಡೋದಿಲ್ಲ.

ಎಲ್ಲ ಗಂಡಸರಂತೆ ಲಾಕ್‌ಡೌನ್‌ನಲ್ಲಿ ನೀವೂ ಅಡುಗೆ ಮಾಡಿದ್ದೀರಾ?

ಇಲ್ಲ, ನಾನು ಯಾವುದೇ ಪದಾರ್ಥ ತಯಾರು ಮಾಡಿಲ್ಲ. ಆದರೆ ಈಗ ಸಮಯ ಹೆಚ್ಚು ಸಿಗುತ್ತದೆ. ಅಡುಗೆ ಮನೆಗೆ ಹೋಗಿ ಕೂತಿರುತ್ತೇನೆ. ಹೆಂಡತಿ, ಸೊಸೆಗೆ ಸಲಹೆ ಕೊಡುತ್ತೇನೆ. ನಾನು ಎಷ್ಟೆಂದರೂ ಆಹಾರ ಪ್ರಿಯ ನೋಡಿ, ಗ್ಲೂಟನ್‌ ಮುಕ್ತ ಗೋದಿ​ ನಮ್ಮಲ್ಲಿ ಸಿಗುತ್ತದೆ. ಅದರಿಂದ ಪಿಜ್ಜಾದ ಬೇಸ್‌ ತಯಾರಿ ಮಾಡಿ ಮನೆಯಲ್ಲೇ ತಿನ್ನುತ್ತೇವೆ. ನಾನು ಸಸ್ಯಾಹಾರಿ, ಆದರೆ ಹೊಸ ಹೊಸ ತಿಂಡಿ ಪ್ರಕಾರಗಳು ನನಗಿಷ್ಟ. ಈಗ ಸ್ವತಃ ಅಡುಗೆ ಮಾಡುವುದಿಲ್ಲ. ಅದು ಮಾಡಿ, ಇದು ಮಾಡಿ ಎಂದು ಸಲಹೆ ಕೊಡುತ್ತೇನೆ.

ಲಾಕ್‌ಡೌನ್‌ನಲ್ಲಿ ನೀವು ನಾಗಪುರದಲ್ಲಿ ಇದ್ದೀರಿ. ನಿಮ್ಮ ತೂಕ ಕಡಿಮೆ ಆಗಿದೆ, ಮುಖ ಹೊಳೆಯುತ್ತಿದೆ? ಏನೆಲ್ಲ ಮಾಡುತ್ತಿದ್ದೀರಿ?

ದಿನಕ್ಕೆ 2 ಗಂಟೆ ಆಯುರ್ವೇದ ಪಂಚಕರ್ಮ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದೇನೆ. ಅಕ್ಯುಪ್ರೆಶರ್‌, ವ್ಯಾಯಾಮ, ಪ್ರಾಣಾಯಾಮ ಮಾಡುತ್ತೇನೆ. ದಿನಾ ಮನೆಯ 20 ರೌಂಡ್‌ ಚಕ್ಕರ್‌ ಹೊಡೆಯುತ್ತೇನೆ. ಸ್ವಲ್ಪ ತೂಕ ಕಡಿಮೆ ಆಗಿದೆ. ಮಧುಮೇಹ ಕಂಟ್ರೋಲ್‌ಗೆ ಬಂದಿದೆ. 8 ತಾಸು ಇಲಾಖೆ ಕೆಲಸ ಮಾಡುತ್ತೇನೆ. ಮೊಮ್ಮಕ್ಕಳೊಂದಿಗೆ ಹರಟೆ ಹೊಡೆಯುತ್ತೇನೆ. ಇವತ್ತು ನೋಡಿ, ನಮ್ಮ ಮನೆಯ ಟೆರೇಸ್‌ನಲ್ಲಿ ಮೊಮ್ಮಕ್ಕಳು ಪಾರ್ಟಿ ಇಟ್ಟಿದ್ದಾರೆ. ಮೊನ್ನೆ ಶೇವ್‌ಪುರಿ ಮಾಡಿದ್ದರು, ಇವತ್ತು ನಿಮ್ಮ ಇಂಟರ್‌ವ್ಯೂ ಮುಗಿಸಿ ಪಾನಿಪುರಿ ತಿನ್ನುವವನಿದ್ದೇನೆ. ಜೀವನ ಸ್ವಲ್ಪ ನಿಯಮಿತವಾಗಿ ಸಾಗುತ್ತಿದೆ.

2011ರಲ್ಲಿ ನೀವು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ ಕರ್ನಾಟಕ ಬಿಜೆಪಿ ಬಿಕ್ಕಟ್ಟು ನಿಮಗೆ ಹೆಚ್ಚು ತಲೆನೋವು ತಂದಿತ್ತು. ಈಗಲೂ ಕರ್ನಾಟಕ ಬಿಜೆಪಿ ನಾಯಕರು ಸಮಸ್ಯೆ ಹಿಡಿದುಕೊಂಡು ಬರುತ್ತಾರಾ?

ಇಲ್ಲ, ಆಗ ಬಿಜೆಪಿ ಅಧ್ಯಕ್ಷನಿದ್ದೆ. ಹೀಗಾಗಿ ಜಗಳ ಆಡಿ ದಿಲ್ಲಿಗೆ ಬರುತ್ತಿದ್ದರು. ರಾತ್ರಿಯಿಡೀ ಕುಳಿತು ಬಗೆಹರಿಸುವ ಪ್ರಯತ್ನ ಮಾಡುತ್ತಿದ್ದೆ. ಆದರೆ ಈಗ ಆ ಜವಾಬ್ದಾರಿ ನನಗಿಲ್ಲ. ಇಲಾಖೆ ಕೆಲಸ ಇದ್ದರೆ ಯಡಿಯೂರಪ್ಪನವರು ಬರುತ್ತಾರೆ. ಅವರು ಒಳ್ಳೆ ಕೆಲಸ ಮಾಡುತ್ತಿದ್ದಾರೆ. ನನ್ನಿಂದ ಆದಷ್ಟು ಸಹಾಯ ಮಾಡುತ್ತೇನೆ.

Follow Us:
Download App:
  • android
  • ios