ನವದೆಹಲಿ(ಮಾ.21): ದೇಶದಲ್ಲಿ ಕೊರೋನಾ ವೈರಸ್‌ ಹರಡುವಿಕೆ ತಡೆಯಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನಾನಾ ಕ್ರಮಗಳನ್ನು ಜರುಗಿಸುತ್ತಿರುವ ನಡುವೆಯೇ ಆತಂಕಕಾರಿ ವಿದ್ಯಮಾನಗಳು ಘಟಿಸಿವೆ. ಬಾಲಿವುಡ್‌ ಗಾಯಕಿ ಕನಿಕಾ ಕಪೂರ್‌ ಅವರಿಗೆ ಕೊರೋನಾ ವೈರಸ್‌ ದೃಢಪಟ್ಟಿದೆ. ಇವರ ಸಂಪರ್ಕಕ್ಕೆ ಹಲವು ಸಂಸದರು, ಪ್ರಮುಖ ರಾಜಕಾರಣಿಗಳು, ಗಣ್ಯರು ಬಂದಿದ್ದು, ಸಂಸತ್ತಿಗೇ ಕೊರೋನಾ ಆತಂಕ ಎದುರಾಗಿದೆ. ಇದರ ಬೆನ್ನಲ್ಲೇ ಕನಿಕಾ ವಿರುದ್ಧ ಉತ್ತರಪ್ರದೇಶ ಸರ್ಕಾರ ಪ್ರಕರಣ ದಾಖಲಿಸಿದೆ.

ಕೊರೋನಾ ಸೋಂಕಿತೆ ಕನಿಕಾ ಅವರ ಜತೆ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ, ಅವರ ಪುತ್ರ ದುಷ್ಯಂತ್‌ ಸಿಂಗ್‌, ಮಧ್ಯಪ್ರದೇಶದ ಸಚಿವ ಸಿದ್ಧಾರ್ಥನಾಥ ಸಿಂಗ್‌, ಕಾಂಗ್ರೆಸ್‌ ಮುಖಂಡ ಜಿತಿನ್‌ ಪ್ರಸಾದ್‌ ಅವರ ಕುಟುಂಬ ಸೇರಿದಂತೆ ಸುಮಾರು 200 ಗಣ್ಯ ವ್ಯಕ್ತಿಗಳು ಲಖನೌನಲ್ಲಿ ನಡೆದ ಪಾರ್ಟಿಯೊಂದರಲ್ಲಿ ಪಾಲ್ಗೊಂಡಿದ್ದಾರೆ. ಈ ಪೈಕಿ ದುಷ್ಯಂತ ಸಿಂಗ್‌ ಅವರು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಹಾಗೂ ಹಲವು ಸಚಿವ-ಸಂಸದರ ಜತೆ ರಾಷ್ಟ್ರಪತಿ ಭವನದ ಉಪಾಹಾರ ಕೂಟದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ದುಷ್ಯಂತ್‌ ಅವರು ಸಂಸತ್ತಿನಲ್ಲಿ ಲೋಕಸಭಾ ಸದಸ್ಯರಾದ ಟಿಎಂಸಿಯ ಡೆರಿಕ್‌ ಓಬ್ರಿಯಾನ್‌, ಕಾಂಗ್ರೆಸ್‌ನ ದೀಪೇಂದರ್‌ ಹೂಡಾ, ಅಪ್ನಾ ದಳದ ಅನುಪ್ರಿಯಾ ಪಟೇಲ್‌ ಅವರ ಅಕ್ಕಪಕ್ಕ ಆಸೀನರಾಗಿದ್ದಾರೆ. ಹೀಗಾಗಿ ಈ ಎಲ್ಲರಿಗೂ ಕೊರೋನಾ ಭೀತಿ ಸೃಷ್ಟಿಯಾಗಿದೆ.

ಹೀಗಾಗಿ ವಸುಂಧರಾ ರಾಜೇ, ದುಷ್ಯಂತ್‌, ಸಿದ್ಧಾರ್ಥನಾಥ ಸಿಂಗ್‌, ಜಿತಿನ್‌ ಪ್ರಸಾದ, ಓಬ್ರಿಯಾನ್‌, ಹೂಡಾ ಹಾಗೂ ಅನುಪ್ರಿಯಾ ಅವರು ಸೋಂಕು ಹರಡುವಿಕೆ ತಡೆಯಲು ‘ಸ್ವಯಂ ಪ್ರತ್ಯೇಕ ವಾಸ’ (ಸೆಲ್‌್ಫ ಕ್ವಾರಂಟೈನ್‌) ಘೋಷಿಸಿಕೊಂಡಿದ್ದಾರೆ.

‘ಸಂಸದರಿಗೂ ಕೊರೋನಾ ಹರಡುವ ಭೀತಿ ಸೃಷ್ಟಿಆಗಿರುವ ಕಾರಣ ಸಂಸತ್‌ ಅಧಿವೇಶನ ಮುಂದೂಡಬೇಕು’ ಎಂದು ಡೆರಿಕ್‌ ಓಬ್ರಿಯಾನ್‌ ಆಗ್ರಹಿಸಿದ್ದಾರೆ.

ಆಗಿದ್ದೇನು?:

‘ಬೇಬಿ ಡಾಲ್‌’ ಹಾಡಿನ ಖ್ಯಾತಿಯ 41 ವರ್ಷದ ಕನಿಕಾ ಅವರು ಮಾಚ್‌ರ್‍ 9ರಂದು ಲಂಡನ್‌ನಿಂದ ಮುಂಬೈಗೆ ಮರಳಿದ್ದರು. ಅಲ್ಲಿಂದ 2 ದಿನದ ಬಳಿಕ ತಮ್ಮ ಊರಾದ ಲಖನೌಗೆ ವಾಪಸಾಗಿದ್ದರು. ಲಖನೌಗೆ ಮರಳಿದ ನಂತರ ಅವರು ಹೋಳಿ ಹಬ್ಬದ ಪಾರ್ಟಿ ಸೇರಿದಂತೆ ಅತಿಗಣ್ಯರು ಭಾಗಿಯಾಗಿದ್ದ 3 ಪಾರ್ಟಿಗಳಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಲಾಗಿದೆ.

ಈ ನಡುವೆ, ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿರುವ ಕನಿಕಾ, ‘ನಾನು 10 ದಿನದ ಹಿಂದೆ ಲಂಡನ್‌ನಿಂದ ಮುಂಬೈ ಮಾರ್ಗವಾಗಿ ಲಖನೌಗೆ ಬಂದೆ. ನನ್ನನ್ನು ಆಗ ಮುಂಬೈ ವಿಮಾನ ನಿಲ್ದಾಣದಲ್ಲಿ ಕೊರೋನಾ ಪರೀಕ್ಷೆಗೆ ಒಳಪಡಿಸಲಾಯಿತು. ಆಗ ನನಗೆ ಕೊರೋನಾದ ಯಾವ ಲಕ್ಷಣವೂ ಕಂಡುಬರಲಿಲ್ಲ. ಅಲ್ಲಿಂದ ನಾನು ಲಖನೌಗೆ ಬಂದೆ. ಆದರೆ ನಂತರ ನನಗೆ ಕೆಮ್ಮು, ನೆಗಡಿ, ಫä್ಲ ರೀತಿಯ ಲಕ್ಷಣ ಕಂಡುಬಂದಾಗ ತಪಾಸಣೆಗೆ ಒಳಗಾದೆ. 4 ದಿನದ ಹಿಂದೆ ಕೊರೋನಾ ದೃಢಪಟ್ಟಿದೆ. ಈಗ ಚಿಕಿತ್ಸೆ ಪಡೆಯುತ್ತಿದ್ದೇನೆ’ ಎಂದು ತಿಳಿಸಿದ್ದಾರೆ.

ಇದಾದ ನಂತರ ಕನಿಕಾ ಅವರು 200 ಗಣ್ಯರು ಭಾಗಿಯಾಗಿದ್ದರು ಎನ್ನಲಾದ ಲಖನೌನ ಅತಿಗಣ್ಯರ ಔತಣಕೂಟದ ಚಿತ್ರಗಳು ಬಹಿರಂಗಗೊಂಡಿವೆ. ಇದರಲ್ಲಿ ಕನಿಕಾ ಅವರ ಜತೆ ವಸುಂಧರಾ, ದುಷ್ಯಂತ್‌ ಇರುವುದು ಕಂಡುಬಂದಿದೆ. ಔತಣ ಸಮಾರಂಭದಲ್ಲಿ ಉತ್ತರಪ್ರದೇಶ ಸಚಿವ ಸಿದ್ಧಾರ್ಥನಾಥ ಸಿಂಗ್‌ ಹಾಗೂ ಕಾಂಗ್ರೆಸ್‌ ಮುಖಂಡ ಜಿತಿನ್‌ ಪ್ರಸಾದ ಅವರ ಕುಟುಂಬದವರೂ ಪಾಲ್ಗೊಂಡಿದ್ದರು.

ಈ ಪಾರ್ಟಿ ನಡೆದಿದ್ದು, ಮಾಚ್‌ರ್‍ 15ರಂದು ಎನ್ನಲಾಗಿದೆ. ಕನಿಕಾಗೆ ಕೊರೋನಾ ದೃಢಪಟ್ಟಿದ್ದು ಮಾಚ್‌ರ್‍ 16ರಂದು ಎಂದು ಮೂಲಗಳು ಹೇಳಿವೆ. ಇದರ ನಡುವೆ, ಕನಿಕಾ ಅವರು ಕುಟುಂಬದ ಜತೆ ಕಾನ್ಪುರಕ್ಕೂ ಹೋಗಿ ಬಂದಿದ್ದರು ಎಂದು ವರದಿಗಳು ಹೇಳಿವೆ.

ಓಬ್ರಿಯಾನ್‌ ಆಕ್ರೋಶ:

‘ಕನಿಕಾ ಜತೆ ಕಾಣಿಸಿಕೊಂಡಿದ್ದ ದುಷ್ಯಂತ್‌ ಅವರು ನನ್ನ ಜತೆ 2 ದಿನದ ಹಿಂದೆ ಲೋಕಸಭೆಯಲ್ಲಿ ಎರಡೂವರೆ ತಾಸು ಕುಳಿತಿದ್ದರು. ಹೀಗಾಗಿ ಕೊರೋನಾ ಆತಂಕದ ಕಾರಣ ನಾನು ಸ್ವಯಂ ಏಕಾಂತ ವಾಸ ಆರಂಭಿಸಿದ್ದೇನೆ. ಸಂಸದರಿಗೂ ಕೊರೋನಾ ಹರಡುವ ಭೀತಿ ಇರುವ ಕಾರಣ ಸಂಸತ್‌ ಕಲಾಪ ಮುಂದೂಡಿಕೆ ಆಗಬೇಕು. ಕೊರೋನಾ ಕಫä್ರ್ಯ ಘೋಷಿಸಿರುವ ಮೋದಿ ಅವರು ಸಂಸತ್‌ ಅಧಿವೇಶನ ನಡೆಸುತ್ತಿರುವುದು ಏಕೆ’ ಎಂದು ಟಿಎಂಸಿ ಸಂಸದ ಡೆರಿಕ್‌ ಓಬ್ರಿಯಾನ್‌ ಕಿಡಿಕಾರಿದ್ದಾರೆ.

ವಸುಂಧರಾ ರಾಜೇ ಕೂಡ ಹೇಳಿಕೆ ಬಿಡುಗಡೆ ಮಾಡಿ, ‘ಕನಿಕಾ ಜತೆ ಸಮಾರಂಭದಲ್ಲಿ ಭಾಗಿಯಾದ ಕಾರಣ ನಾನು ಹಾಗೂ ನನ್ನ ಪುತ್ರ ದುಷ್ಯಂತ್‌ ಸ್ವಯಂ ಏಕಾಂತ ವಾಸ ಆರಂಭಿಸಿದ್ದೇವೆ’ ಎಂದು ಟ್ವೀಟ್‌ ಮಾಡಿದ್ದಾರೆ. ‘ದುಷ್ಯಂತ್‌ ಜತೆ ಸಭೆಯಲ್ಲಿ ಭಾಗಿಯಾದ ಕಾರಣ ನಾನೂ ಸ್ವಯಂ ಏಕಾಂತವಾಸದಲ್ಲಿದ್ದೇನೆ’ ಎಂದು ಅಪ್ನಾದಳ ಸಂಸದೆ ಅನುಪ್ರಿಯಾ ಪಟೇಲ್‌ ತಿಳಿಸಿದ್ದಾರೆ.

ಇನ್ನು ಮಾಚ್‌ರ್‍ 18ರಂದು ಉತ್ತರಪ್ರದೇಶ ಹಾಗೂ ರಾಜಸ್ಥಾನದ ಸಂಸದರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ರಾಷ್ಟ್ರಪತಿ ಭವನದಲ್ಲಿ ಉಪಾಹಾರಕೂಟ ಹಮ್ಮಿಕೊಂಡಿದ್ದರು. ಈ ಔತಣಕೂಟದಲ್ಲಿ ದುಷ್ಯಂತ್‌ ಭಾಗಿಯಾಗಿದ್ದರು ಎಂದು ಮಾ.18ರಂದು ಕೋವಿಂದ್‌ ಮಾಡಿದ ಟ್ವೀಟ್‌ಗಳು ಚಿತ್ರಸಮೇತ ವಿವರಿಸುತ್ತವೆ. ಹೀಗಾಗಿ ಈ ಕೂಟದಲ್ಲಿ ಪಾಲ್ಗೊಂಡ ರಾಷ್ಟ್ರಪತಿಗಳು ಹಾಗೂ ಸಚಿವ, ಸಂಸದರಿಗೂ ಆತಂಕ ಎದುರಾಗಿದೆ ಎಂದು ವರದಿಗಳು ಹೇಳಿವೆ.

ಆದರೆ ‘ಕೋವಿಂದ್‌ ಹಾಗೂ ದುಷ್ಯಂತ್‌ ಹಸ್ತಲಾಘವ ಮಾಡಲಿಲ್ಲ. ಕೇವಲ ನಮಸ್ಕರಿಸಿದರು ಅಷ್ಟೇ’ ಎಂದು ರಾಷ್ಟ್ರಪತಿ ಭವನದ ಮೂಲಗಳು ಹೇಳಿವೆ.

ಈ ನಡುವೆ, ‘ಕೊರೋನಾ ಭೀತಿ ಇದ್ದರೂ ವಿದೇಶದಿಂದ ಮರಳಿದ ನಂತರ ಕೆಲವು ದಿನ ಜನರಿಂದ ಅಂತರ ಕಾಯ್ದುಕೊಳ್ಳದೇ ಪಾರ್ಟಿಗಳಲ್ಲಿ ಭಾಗಿಯಾದ ಕನಿಕಾ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಆಗ್ರಹ ಕೇಳಿಬಂದಿವೆ.