ನವದೆಹಲಿ[ಮಾ.17]: ಮಾರಕ ಕೊರೋನಾ ವೈರಸ್‌ ದೇಶದಲ್ಲೂ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ವೈರಸ್‌ ಸೋಂಕಿತರು ಗುಣಮುಖರಾದಾಗ ಏನು ಮಾಡಬೇಕು, ಶಂಕಿತರಲ್ಲಿ ವೈರಸ್‌ ಇಲ್ಲ ಎಂದು ಸಾಬೀತಾದಾಗ ಯಾವ ಕ್ರಮ ಅನುಸರಿಸಬೇಕು ಎಂಬ ಬಗ್ಗೆ ಕೇಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಕೊರೋನಾ ಸೋಂಕಿಗೆ ಒಳಗಾಗಿರುವ ವ್ಯಕ್ತಿ ಬಳಿಕ ಚೇತರಿಸಿಕೊಂಡರೆ, ಆತನನ್ನು ಬಿಡುಗಡೆ ಮಾಡುವ ಮುನ್ನ 24 ತಾಸಿನಲ್ಲಿ ಎರಡು ಪರೀಕ್ಷೆ ನಡೆಸಬೇಕು. ಎರಡೂ ವರದಿಗಳು ನೆಗೆಟಿವ್‌ ಆಗಿರಬೇಕು. ಅಂದರೆ ಸೋಂಕು ಇರಬಾರದು. ಎದೆ ಭಾಗದ ಎಕ್ಸ್‌ರೇ ಹಾಗೂ ಉಸಿರಾಟದ ಮಾದರಿಯಲ್ಲಿ ವೈರಾಣು ಇಲ್ಲದಿರುವ ಕುರಿತು ಪುರಾವೆ ಇರಬೇಕು ಎಂಬ ಡಿಸ್ಚಾಜ್‌ರ್‍ ನೀತಿ ಹೇಳುತ್ತದೆ.

ಇದೇ ವೇಳೆ, ಶಂಕಿತ ಕೊರೋನಾ ರೋಗಿಯಲ್ಲಿ ಸೋಂಕು ಮೊದಲ ಹಂತದಲ್ಲಿ ದೃಢಪಡದಿದ್ದಾಗ ವೈದ್ಯರ ಸೂಚನೆಯಂತೆ ಆತ/ಆಕೆಯನ್ನು ಬಿಡುಗಡೆ ಮಾಡಬಹುದು. ಆದರೆ ಸೋಂಕಿತ ವ್ಯಕ್ತಿಯ ಜತೆ ಸಂಪರ್ಕ ಹೊಂದಿದ ಕೊನೆಯ ದಿನದಿಂದ 14 ದಿನಗಳವರೆಗೆ ನಿಗಾ ಇಟ್ಟಿರಬೇಕು ಎಂದು ನಿರ್ದೇಶಿಸಲಾಗಿದೆ.