Asianet Suvarna News Asianet Suvarna News

ಬೆಂಗಳೂರು ಟೆಕಿಗೆ ಮಾರಕ ಕೊರೋನಾ ಸೋಂಕು!

ದುಬೈನಿಂದ ಆಗಮಿಸಿದ್ದ ಬೆಂಗಳೂರು ಟೆಕಿಯಲ್ಲಿ ಮಾರಕ ಕೊರೋನಾ ಸೋಂಕು ದೃಢಪಟ್ಟಿದ್ದು ಇದೀಗ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

Coronavirus positive Bengaluru techie travelled to Hyderabad
Author
Bengaluru, First Published Mar 3, 2020, 7:31 AM IST

ನವದೆಹಲಿ [ಮಾ.03]: ಬೆಂಗಳೂರು ಮೂಲದ ಟೆಕ್ಕಿಯೊಬ್ಬರಿಗೆ ಮಾರಕ ಕೊರೋನಾ ಸೋಂಕು ತಗುಲಿರುವುದು ಸೋಮವಾರ ಖಚಿತಪಟ್ಟಿದೆ. ಇತ್ತೀಚೆಗಷ್ಟೇ ದುಬೈನಿಂದ ಬಂದಿದ್ದ 24 ವರ್ಷದ ಟೆಕ್ಕಿ ವಾರದ ಹಿಂದೆ ಹೈದರಾಬಾದ್‌ಗೆ ತೆರಳಿದ್ದ. ಅಲ್ಲಿ ಜ್ವರದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ರಕ್ತ ಪರೀಕ್ಷೆ ವೇಳೆ ಕೊರೋನಾ ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಪ್ರತ್ಯೇಕ ಕೋಣೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಆತನ ಆರೋಗ್ಯ ಸ್ಥಿರವಾಗಿದೆ ಎಂದು ತೆಲಂಗಾಣ ಸರ್ಕಾರ ಮಾಹಿತಿ ನೀಡಿದೆ.

ಆದರೆ ಸೋಂಕಿಗೆ ತುತ್ತಾಗಿರುವ ವ್ಯಕ್ತಿ ಮೂರು ದಿನ ಬೆಂಗಳೂರಿನಲ್ಲಿ ಇದ್ದ ಕಾರಣದಿಂದಾಗಿ ಮತ್ತು ಬಸ್‌ನಲ್ಲಿ ಹೈದ್ರಾಬಾದ್‌ಗೆ ತೆರಳಿದ ಕಾರಣ, ಈ ಅವಧಿಯಲ್ಲಿ ಆತನೊಂದಿಗೆ ಸಂಪರ್ಕ ಬೆಳೆಸಿದವರಿಗೂ ವೈರಸ್‌ ಹಬ್ಬಿರಬಹುದಾದ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಹೈದರಾಬಾದ್‌ ಮತ್ತು ಬೆಂಗಳೂರಿನಲ್ಲಿ ಆತನ ಸಂಪರ್ಕಕ್ಕೆ ಬಂದಿದ್ದ ವ್ಯಕ್ತಿಗಳ ಮೇಲೆ ತೀವ್ರ ನಿಗಾ ವಹಿಸಲು ಉಭಯ ರಾಜ್ಯಗಳ ಸರ್ಕಾರಗಳು ನಿರ್ಧರಿಸಿವೆ.

ದುಬೈನಿಂದ ಬಂದಿದ್ದ:

ತೆಲಂಗಾಣ ಮೂಲದ ಟೆಕ್ಕಿ ಕಾರ್ಯನಿಮಿತ್ತ ದುಬೈಗೆ ತೆರಳಿ ನಾಲ್ಕು ದಿನ ಅಲ್ಲಿ ತಂಗಿದ್ದ. ಅಲ್ಲಿ ಆತ ಹಾಂಕಾಂಗ್‌ ದೇಶದ ಸಿಬ್ಬಂದಿ ಜೊತೆ ಕಾರ್ಯನಿರ್ವಹಿಸಿದ್ದ. ಅಲ್ಲಿಂದ ಫೆ.19ರಂದು ಬೆಂಗಳೂರಿಗೆ ಬಂದಿದ್ದ ಆತ ಇಲ್ಲಿಯೂ ಮೂರು ದಿನ ಉಳಿದುಕೊಂಡಿದ್ದ. ಫೆ.22ರಂದು ಬಸ್‌ ಮೂಲಕ ಹೈದರಾಬಾದ್‌ಗೆ ತೆರಳಿದ್ದ. ಹೈದರಾಬಾದ್‌ಗೆ ಬಂದ ಬಳಿಕ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಲ್ಲಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ. ಬಳಿಕ ಕೊರೋನಾ ಸಂಶಯದ ಮೇಲೆ ಟೆಕ್ಕಿಯನ್ನು ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ರಕ್ತ ಪರೀಕ್ಷೆ ವರದಿಯಲ್ಲಿ ಆತನಿಗೆ ಕೊರೋನಾ ಸೋಂಕು ತಗುಲಿರುವುದು ಖಚಿತಪಟ್ಟಿದೆ. ಈ ಹಿನ್ನೆಲೆಯಲ್ಲಿ ಇದೀಗ ಪ್ರತ್ಯೇಕ ಕೋಣೆಯಲ್ಲಿರಿಸಿ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತೆಲಂಗಾಣ ಆರೋಗ್ಯ ಸಚಿವ ರಾಜೇಂದರ್‌ ತಿಳಿಸಿದ್ದಾರೆ.

ಕ್ರಿಕೆಟ್‌ಗೆ ತಟ್ಟಿದ ಕೊರೊನಾ ವೈರಸ್; ಸಂಕಷ್ಟದಲ್ಲಿ ಇಂಡೋ-ಪಾಕ್ ಏಷ್ಯಾಕಪ್ ಪಂದ್ಯ!...

80 ಜನರ ಮೇಲೆ ನಿಗಾ:

ಸೋಂಕು ಪೀಡಿತ ಟೆಕ್ಕಿ ಬಸ್‌ನಲ್ಲಿ ಬಂದ ಹಿನ್ನೆಲೆಯಲ್ಲಿ ಆತ ಬಂದಿದ್ದ ಬಸ್‌ನ 27 ಪ್ರಯಾಣಿಕರು, ಚಾಲಕ, ಕಂಡಕ್ಟರ್‌ ಮೇಲೂ ನಿಗಾ ವಹಿಸಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಬಸ್‌ನಲ್ಲಿ ಬಂದ ಪ್ರಯಾಣಿಕರ ಪತ್ತೆಗೆ ಸರ್ಕಾರ ಮುಂದಾಗಿದೆ. ಮತ್ತೊಂದೆಡೆ ಆತನ ಕುಟುಂಬ ಸದಸ್ಯರು ಮತ್ತು ಮೊದಲು ದಾಖಲಾಗಿದ್ದ ಅಪೋಲೋ ಆಸ್ಪತ್ರೆಯ ವೈದ್ಯರು, ನರ್ಸ್‌ಗಳ ಮೇಲೂ ನಿಗಾ ವಹಿಸಲು ಸರ್ಕಾರ ನಿರ್ಧರಿಸಿದೆ. ಈ ಎಲ್ಲರಿಗೂ 15 ದಿನ ಪ್ರತ್ಯೇಕವಾಗಿ ಇರಲು ರಾಜ್ಯ ಸರ್ಕಾರ ಸೂಚಿಸಿದೆ.

ಬೆಂಗಳೂರಿಗೂ ಮಾಹಿತಿ:

ಟೆಕ್ಕಿಗೆ ಸೋಂಕು ಹಬ್ಬಿರುವ ಬಗ್ಗೆ ಕರ್ನಾಟಕ ಸರ್ಕಾರ ಮತ್ತು ಆತ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಂಪನಿಗೂ ಮಾಹಿತಿ ನೀಡಲಾಗಿದೆ ಎಂದು ತೆಲಂಗಾಣ ಸರ್ಕಾರ ಮಾಹಿತಿ ನೀಡಿದೆ.

ಈವರೆಗೆ ಗೊತ್ತಾಗದೆ ಇದ್ದದ್ದು ಹೇಗೆ?

10ಕ್ಕೂ ಹೆಚ್ಚು ದೇಶಗಳಿಂದ ಆಗಮಿಸುವವರ ಮೇಲೆ ಕೇಂದ್ರ ಸರ್ಕಾರ ಈಗಾಗಲೇ ವಿಮಾನ ನಿಲ್ದಾಣ, ಬಂದರಿನಲ್ಲಿ ಕಣ್ಗಾವಲು ಇಟ್ಟಿದೆ. ಅವರನ್ನು ತಪಾಸಣೆಗೆ ಗುರಿಪಡಿಸಿಯೇ ದೇಶದೊಳಗೆ ಬಿಡಲಾಗುತ್ತಿದೆ. ಆದರೆ ಈ ಪಟ್ಟಿಯಲ್ಲಿ ದುಬೈ ಇರದ ಕಾರಣ, ಬೆಂಗಳೂರು ಟೆಕ್ಕಿ ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಪಟ್ಟಿರಲಿಲ್ಲ.

Follow Us:
Download App:
  • android
  • ios