ಶ್ವೇತಾ ಕೊಡದ, ಚೆಕ್‌ ಗಣರಾಜ್ಯ| ಮೂಲ: ಶಿವಮೊಗ್ಗ

ಮೂರ್ನಾಲ್ಕು ತಿಂಗಳಿಗೆ ಆಗುವಷ್ಟುಆಹಾರ ಸಂಗ್ರಹ, ಜೂನ್‌ವರೆಗೂ ಆನ್‌ಲೈನ್‌ ಶಾಪಿಂಗ್‌, ತುರ್ತು ಪರಿಸ್ಥಿತಿ ಘೋಷಣೆ ಹಿನ್ನೆ​ಲೆ ಹೊರಗೆ ಹೋಗಲಾರದ ಸ್ಥಿತಿ, ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ ಗ್ರೂಪ್‌ಗಳಲ್ಲೇ ಚರ್ಚೆ-ಮಾತುಕತೆ. ಯಾವಾಗಲು ಪಬ್‌, ಡ್ರಿಂಕ್ಸ್‌, ಶಾಪಿಂಗ್‌ ಅನ್ನೋ ಜನರೀಗ ಮನೆಯಲ್ಲೇ ಬಂಧಿಗಳು!

ಇದು ಕೊರೋನಾ ಭೀತಿಯಲ್ಲಿರುವ ಚೆಕ್‌ ಗಣರಾಜ್ಯ ಎಂಬ ಚಿಕ್ಕ ದೇಶದ ಸದ್ಯದ ಪರಿಸ್ಥಿತಿ. ಅಲ್ಲಿಯ ಜನರೊಂದಿಗೆ ಭಾರತೀಯರು ಕೂಡ ಇದೇ ರೀತಿಯ ಆತಂಕ​ವನ್ನು ಎದು​ರಿ​ಸು​ತ್ತಿ​ದ್ದಾರೆ. ಇಲ್ಲಿನ ಜನಸಂಖ್ಯೆ 1.15 ಕೋಟಿ ಅಷ್ಟೇ. ಆದರೆ ಕೊರೋನಾ ಪರಿಣಾಮ ಜೋರಾಗಿಯೇ ಇದೆ. ಬುಧ​ವಾರ ಬೆಳಿಗ್ಗೆಯ ನ್ಯೂಸ್‌ ಪ್ರಕಾರ 383 ಮಂದಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಇಲ್ಲಿ ಐದು ಸಾವಿರ ಭಾರತೀಯರು ಇದ್ದು ಅವರಲ್ಲಿ 150 ಮಂದಿ ಕನ್ನಡಿಗರು.

ಪ್ರವಾಸಿ ತಾಣ​ಗ​ಳೆಲ್ಲಾ ಖಾಲಿ ಖಾಲಿ

ನಾವಿರುವುದು ಚೆಕ್‌ ಗಣರಾಜ್ಯದ ರಾಜ್ಯಧಾನಿ ಪ್ರಾಗ್‌ನಲ್ಲಿ. ಪ್ರಾಗ್‌ ಅತ್ಯಂತ ಸುಂದರ ನಗರವಾಗಿದ್ದು, ಇಲ್ಲಿ ಪ್ರವಾಸಿಗರೇ ಹೆಚ್ಚು, ಎಲ್ಲರಿಗೂ ಕುಟುಂಬಗಳಿಲ್ಲ. ಹೀಗಾಗಿ ಪ್ರತಿದಿನ ಪಬ್‌, ಡ್ರಿಂಕ್ಸ್‌, ಶಾಪಿಂಗ್‌ ಅಂತ ಮಜಾ ಮಾಡುವವರೇ ಹೆಚ್ಚು. ಆದರೆ ಈಗ ಪರಿಸ್ಥಿತಿ ಹಿಂದಿನಂತಿಲ್ಲ. ಮಾ.12ರಿಂದ 30 ದಿನಗಳವರೆಗೆ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಲಾಗಿದೆ. ಕೆಲವು ಸೂಪರ್‌ ಮಾರ್ಕೆಟ್‌, ಮೆಡಿಕಲ್‌ ಸ್ಟೋ​ರ್‍ಸ್, ಪೆಟ್ರೋಲ್‌ ಬಂಕ್‌ಗಳನ್ನು ಹೊರತುಪಡಿಸಿ ಯಾವಾಗಲು ಜನರಿಂದ ತುಂಬಿರುತ್ತಿದ್ದ ಶಾಪಿಂಗ್‌ ಮಳಿಗೆಗಳು, ಪಬ್‌, ರೆಸ್ಟೋರೆಂಟ್‌ಗಳು, ಶಾಲೆ-ಕಾಲೇಜುಗಳು ಸಂಪೂರ್ಣವಾಗಿ ಮುಚ್ಚಿವೆ. ಉಳಿದವುಗಳನ್ನೂ ಕೂಡ ಕೆಲವೇ ದಿನಗಳಲ್ಲಿ ಮುಚ್ಚುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಹೀಗಾಗಿ ಮೂರ್ನಾಲ್ಕು ತಿಂಗಳಿಗೆ ಆಗುವಷ್ಟುಆಹಾರ ಪದಾರ್ಥಗಳನ್ನು ಪ್ರತಿಯೊಬ್ಬರೂ ಮನೆಗಳಲ್ಲಿ ಸಂಗ್ರಹಿಸಿಡಲು ಶುರು ಮಾಡಿದ್ದಾರೆ. ಅಕ್ಕಿ, ಪಾಸ್ತಾ, ಸೋಪ್‌ ಹೀಗೆ ಅನೇಕ ವಸ್ತುಗಳನ್ನು ಖರೀದಿ ಮಾಡಿಟ್ಟುಕೊಳ್ಳಲಾಗುತ್ತಿದೆ. ಆದಾ​ಗ್ಯೂ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ.

ಕೊರೋನಾ ವೈರಸ್: ಈವರೆಗೆ ಏನೇನಾಯ್ತು? ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟಾಯ್ಲೆಟ್‌ ಪೇಪ​ರ್‌ಗೆ ಬೇಡಿ​ಕೆ!

ಹ್ಯಾಂಡ್‌ಗ್ಲೌಸ್‌, ಮಾಸ್ಕ್‌ ಕಡ್ಡಾಯವಾದರೂ ಸೂಪರ್‌ ಮಾರ್ಕೆಟ್‌ಗಳು ಮುಚ್ಚಿರುವುದರಿಂದ ತುಂಬಾ ಕಷ್ಟಆಗುತ್ತಿದೆ. ತಮಾಷೆಯ ವಿಷಯ ಅಂದರೆ ಟಾಯ್ಲೆಟ್‌ ಪೇಪರ್‌ಗೆ ತುಂಬಾ ಬೇಡಿಕೆ ಇದೆ. ಆದರೆ ಯಾವುದೂ ಸಿಗದಂತ ಸ್ಥಿತಿ ಇದೆ. ಈ ಹಿಂದೆ ಚೆಕ್‌ಗಣರಾಜ್ಯದ ಭಾಷೆ ಅರ್ಥವಾಗದವರಿಗೆ ಯಾರಾದರು ಸಹಾಯಬೇಕೇ ಎಂದು ಕೇಳಿಕೊಂಡು ಬಂದು ಭಾಷೆ ಅನುವಾದ ಮಾಡಿ ಹೇಳುತ್ತಿದ್ದರು. ಈಗ ವಿದೇಶೀಯರನ್ನು ಕಂಡರೇ ಓಡಿ ಹೋಗುತ್ತಿದ್ದಾರೆ.

ನಮ್ಮದು ಜರ್ಮನಿಯಲ್ಲಿ ಮನೆ ಇದೆ. ಗಂಡ​ನಿ​ಗೆ ಚೆಕ್‌ ಗಣರಾಜ್ಯದಲ್ಲಿ ಕೆಲಸ ಇದ್ದ ಕಾರಣ ಇಲ್ಲಿಗೆ ಬಂದಿದ್ದೆವು. ಆದರೆ, ಈಗ ಜರ್ಮನಿ ಗಡಿಯನ್ನು ಬಂದ್‌ ಮಾಡಿದ್ದು, ಇಲ್ಲಿ ಇರಲೂ ಆಗದೆ, ಅಲ್ಲಿಗೆ ಹೋಗಲೂ ಆಗದಂತ ಪರಿಸ್ಥಿತಿ ಇದೆ. ವಾಪಸ್‌ ಭಾರತಕ್ಕೆ ಹೋಗೋಣವೆಂದರೆ ತುಂಬಾ ವಿಮಾನಗಳು ರದ್ದಾಗಿವೆ. ಹೊಸ ವೀಸಾವನ್ನು ತೆಗೆದುಕೊಳ್ಳುತ್ತಿಲ್ಲ. ಪ್ರತಿ ದಿನ 30 ನಿಮಿಷ ವ್ಯಾಯಾಮ, ವಿಟಮಿನ್‌ ಮಾತ್ರೆ, ಹೆಚ್ಚು ನೀರು ಕುಡಿಯುತ್ತಿದ್ದು ಗಾಬರಿ, ಒಂಟಿತನ, ಮುಂದೇನು ಅನ್ನುವ ಯೋಚನೆ ಉಂಟಾ​ಗಿದೆ. ಉಸಿರುಗಟ್ಟೋ ವಾತಾವರಣದಲ್ಲಿ ನಮ್ಮ ಸ್ವಾತಂತ್ರ್ಯವನ್ನು ನಾವೇ ಕಿತ್ತುಕೊಂಡಿರುವ ಅನುಭವವಾಗ​ತ್ತಿ​ದೆ. ಕೆಟ್ಟದು ಹೋಗಿ ಮುಂದೆ ಒಳ್ಳೆಯ ದಿನಗಳು ಬರುತ್ತವೆ ಎನ್ನುವ ನಿರೀಕ್ಷೆಯಲ್ಲಿ ಕಾಲ ಕಳೆಯುವಂತಾಗಿದೆ.