ಒಂದು ವೇಳೆ ಉದ್ಯೋಗಿಗಳು ಸ್ವದೇಶಕ್ಕೆ ತೆರಳಿ ವಾಪಾಸಾದರೆ ಅವರು 14 ದಿನ ಮನೆಯಿಂದಲೇ ಕೆಲಸ ಮಾಡಬೇಕು. ಆರೋಗ್ಯವಾಗಿರುವುದು ಧೃಡಪಟ್ಟ ಬಳಿಕವೇ ಕಂಪನಿಗಳಿಗೆ ಪ್ರವೇಶ ಕಲ್ಪಿಸಲಾಗುತ್ತದೆ.
ಅಶ್ವಿನ್ ಗಂಗಪ್ಪ, ವಿಪ್ರೋ ಉದ್ಯೋಗಿ| ಸಿಂಗಾಪುರ| ಮೂಲ: ಬೆಂಗಳೂರು
ಇಡೀ ಜಗತ್ತನ್ನೇ ವ್ಯಾಪಿಸಿರುವ ಕೊರೋನಾ ವೈರಸ್ ಭೀತಿ ಸಿಂಗಾಪುರದಲ್ಲೂ ಇದೆ. ಆದರೇ ಇಲ್ಲಿನ ಸರ್ಕಾರ ಸಮರೋಪಾದಿಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿರುವ ಪರಿಣಾಮ ಜನ ಆತಂಕಗೊಂಡಿಲ್ಲ. ಸರ್ಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದರಿಂದ ಈವರೆಗೂ ಕೊರೋನಾ ಸೋಂಕಿನಿಂದ ಒಂದೇ ಒಂದು ಸಾವು ಸಂಭವಿಸಿಲ್ಲ.
ನನ್ನದು ಮೂಲತಃ ಬೆಂಗಳೂರಿನ ರಾಜಾಜಿನಗರ. ಸಿಂಗಾಪುರದ ಕ್ಲೈಂಟ್ ಲೊಕೇಶನ್‌ನಲ್ಲಿರುವ ವಿಪ್ರೋ ಕಂಪನಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. ಸಿಂಗಾಪುರದಲ್ಲಿ ಈವರೆಗೂ 5ರಿಂದ 10 ಮಂದಿಗೆ ಮಾತ್ರ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ. ಸುಮಾರು ಇನ್ನೂರು ಮಂದಿಗೆ ಸೋಂಕು ತಗುಲಿರುವ ಶಂಕೆ ಹಿನ್ನೆಲೆಯಲ್ಲಿ ಆಸ್ಪತ್ರೆ ಹಾಗೂ ಮನೆಗಳಲ್ಲಿ ಪ್ರತ್ಯೇಕವಾಗಿ ಇರಿಸಿ ನಿಗಾವಹಿಸಲಾಗುತ್ತಿದೆ. ಸಿಂಗಾಪುರ ಸರ್ಕಾರ ಆರಂಭದಲ್ಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡ ಪರಿಣಾಮ ಸೋಂಕು ನಿಯಂತ್ರಣಕ್ಕೆ ಬಂದಿದೆ.
ಐದು ದಿನ ಕಡ್ಡಾಯ ರಜೆ
ಐಟಿ-ಬಿಟಿ ಕಂಪನಿಗಳಲ್ಲಿ ಉದ್ಯೋಗಿಗಳು ಅನಾರೋಗ್ಯಕ್ಕೆ ತುತ್ತಾದರೆ ಎರಡು ದಿನ ರಜೆ ನೀಡಲಾಗುತ್ತದೆ. ಕೊರೋನಾ ವೈರಸ್ ಭೀತಿ ಹೆಚ್ಚಾದ ಪರಿಣಾಮ ಸರ್ಕಾರ ಅನಾರೋಗ್ಯದಿಂದ ಬಳಲುವ ಉದ್ಯೋಗಿಗಳಿಗೆ ಐದು ದಿನ ಕಡ್ಡಾಯ ರಜೆ ನೀಡುವಂತೆ ಸೂಚಿಸಿದೆ. ಶೀತ, ಜ್ವರ ಇರುವ ಉದ್ಯೋಗಿಗಳನ್ನು 14 ದಿನಗಳ ಆಸ್ಪತ್ರೆಗಳಲ್ಲಿ ನಿಗಾವಹಿಸಿ ಸೋಂಕು ಕುರಿತು ದೃಢಪಡಿಸಿಕೊಂಡು ಬಳಿಕ ಮನೆಗಳಿಗೆ ಕಳುಹಿಸಲಾಗುತ್ತಿದೆ. ಸೋಂಕು ದೃಢಪಟ್ಟವರನ್ನು ಆಸ್ಪತ್ರೆಗಳಲ್ಲಿ ಇರಿಸಿಕೊಳ್ಳಲಾಗುತ್ತಿದೆ. ಸಿಂಗಾಪುರದಲ್ಲಿ ಅತ್ಯುತ್ತಮ ವೈದ್ಯಕೀಯ ಸೌಲಭ್ಯಗಳು ಇರುವುದರಿಂದ ಜನರಲ್ಲಿ ದೊಡ್ಡ ಆತಂಕವಿಲ್ಲ.
ಕೊರೋನಾ ವೈರಸ್ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿದೇಶ ಪ್ರವಾಸ ರದ್ದು
ಐಟಿ-ಬಿಟಿ ಕಂಪನಿಗಳು ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿವೆ. ಕಾರ್ಯ ನಿಮಿತ್ತ ಉದ್ಯೋಗಿಗಳು ವಿದೇಶಗಳಿಗೆ ಹೋಗುವುದನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ದೂರವಾಣಿ, ವಾಟ್ಸ್ ಆ್ಯಪ್‌ಗಳಲ್ಲಿ ವ್ಯವಹರಿಸುವಂತೆ ಸೂಚಿಸಿವೆ. ಇನ್ನು ಸದ್ಯದ ಪರಿಸ್ಥಿತಿಯಲ್ಲಿ ತುರ್ತು ಇಲ್ಲದಿದ್ದರೆ ಸ್ವದೇಶಗಳಿಗೂ ತೆರಳದಂತೆ ಸಲಹೆ ಮಾಡಿವೆ. ಸೋಂಕಿನ ಶಂಕೆ ಇರುವ ಪ್ರದೇಶಗಳಲ್ಲಿ ವರ್ಕ್ ಫ್ರಮ್ ಹೋಂಗೆ ಅವಕಾಶ ಕಲ್ಪಿಸಿವೆ.
ಅಂತೆಯೆ ಉದ್ಯೋಗಿಗಳಿಗೆ ರೊಟೇಶನ್ ಮಾದರಿಯಲ್ಲಿ ಕಂಪನಿಯ ಬೇರೆ ಬೇರೆ ಶಾಖೆಗಳಲ್ಲಿ ಕೆಲಸ ಮಾಡಲು ಅವಕಾಶ ನೀಡಿವೆ. ಒಂದು ವೇಳೆ ಉದ್ಯೋಗಿಗಳು ಸ್ವದೇಶಕ್ಕೆ ತೆರಳಿ ವಾಪಸಾದರೆ ಅವರು 14 ದಿನ ಮನೆಯಿಂದಲೇ ಕೆಲಸ ಮಾಡಬೇಕು. ಅರೋಗ್ಯವಾಗಿರುವುದು ದೃಢಪಟ್ಟಬಳಿಕವೇ ಕಂಪನಿಗಳಿಗೆ ಪ್ರವೇಶ ಕಲ್ಪಿಸಲಾಗುತ್ತಿದೆ. ಜೊತೆಗೆ ಉದ್ಯೋಗಿಗಳ ಮನೆಯ ಸದಸ್ಯರ ಮೇಲೂ ನಿಗಾವಹಿಸಲಾಗುತ್ತಿದೆ. ಅಂತೆಯೇ ಕಂಪನಿಗಳು ಆರೋಗ್ಯ ಇಲಾಖೆಯಿಂದ ಈ ಕೊರೋನಾ ವೈರಸ್ ಕುರಿತ ಮಾಹಿತಿ ಪಡೆದು ಕಂಪನಿಗಳ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತಿವೆ. ಹೀಗಾಗಿ ಉದ್ಯೋಗಿಗಳಿಗೆ ಪ್ರತಿ ದಿನ ಸಿಂಗಾಪುರದಲ್ಲಿನ ಕೊರೋನಾ ವೈರಸ್ ಪ್ರಕರಣಗಳ ಸ್ಥಿತಿಗತಿ, ಸರ್ಕಾರದ ಸೂಚನೆಗಳ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗುತ್ತಿದೆ.
ಶಾಲಾ-ಕಾಲೇಜಿಗೆ ರಜೆ ಇಲ್ಲ!
ಕೊರೋನಾ ವೈರಸ್ ಭೀತಿ ಇದ್ದರೂ ಸಿಂಗಾಪುರದಲ್ಲಿ ನರ್ಸರಿ ಸೇರಿದಂತೆ ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಮೊದಲಿನಿಂದಲೂ ಇಲ್ಲಿನ ಾಲಾ-ಕಾಲೇಜುಗಳಲ್ಲಿ ಪ್ರತಿ ದಿನ ವಿದ್ಯಾರ್ಥಿಗಳ ದೇಹದ ಉಷ್ಣಾಂಶ ಪರೀಕ್ಷಿಸಿ ತರಗತಿಗೆ ಪ್ರವೇಶ ಕಲ್ಪಿಸಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಅನಾರೋಗ್ಯದ ಲಕ್ಷಣ ಕಂಡು ಬಂದಲ್ಲಿ ಕೂಡಲೇ ಅವರನ್ನು ಮನೆಗೆ ಕಳುಹಿಸಲಾಗುತ್ತದೆ. ಈಗಲೂ ಸಹ ಪರೀಕ್ಷೆ ಮುಂದುವರಿದಿದೆ. ಸ್ವಚ್ಛತೆಗೆ ಗರಿಷ್ಠ ಆದ್ಯತೆ ನೀಡಲಾಗುತ್ತಿದೆ.
