ಎಚ್‌ಐವಿ, ಡೆಂಘೀ ರೀತಿ ಕೊರೋನಾಗೂ ಲಸಿಕೆ ಇಲ್ಲ?| ಬೇಗ ಲಸಿಕೆ ಸಿಗುತ್ತದೆ ಎಂಬ ಭಾವನೆ ಬೇಡ: ತಜ್ಞರು

ನವದೆಹಲಿ(ಮೇ.05): ವಿಶ್ವಕ್ಕೆ ಮಾರಣಾಂತಿಕವಾಗಿ ಪರಿಣಮಿಸಿರುವ ಕೊರೋನಾ ವೈರಸ್‌ಗೆ ಶೀಘ್ರದಲ್ಲೇ ಲಸಿಕೆ ದೊರೆಯಬಹುದು ಎಂಬ ಭಾವನೆ ಇರುವಾಗಲೇ, ಎಚ್‌ಐವಿ ಹಾಗೂ ಡೆಂಘೀ ರೀತಿ ಕೊರೋನಾಗೂ ವಿಜ್ಞಾನಿಗಳು ಔಷಧ ಕಂಡುಹಿಡಿಯಲು ಸಾಧ್ಯವಾಗದೆ ಇರಬಹುದು ಎಂದು ಪರಿಣತ ಆರೋಗ್ಯ ತಜ್ಞರು ಹೇಳಿದ್ದಾರೆ. ಇದು ತೀವ್ರ ಆತಂಕಕ್ಕೆ ಕಾರಣವಾಗಿದೆ.

ಕೆಲವೊಂದು ವೈರಸ್‌ಗಳಿಗೆ ಇವತ್ತಿನವರೆಗೂ ನಮ್ಮ ಬಳಿ ಲಸಿಕೆಗಳು ಇಲ್ಲ. ಕೊರೋನಾಗೆ ಶೀಘ್ರದಲ್ಲೇ ಲಸಿಕೆ ಸಿಗಲಿದೆ ಎಂಬ ಸಂಪೂರ್ಣ ಕಲ್ಪನೆ ಬೇಡ. ಒಂದು ವೇಳೆ, ಲಸಿಕೆ ಲಭ್ಯವಾದರೂ, ಕ್ಷಮತೆ ಹಾಗೂ ಸುರಕ್ಷತೆಯಂತಹ ಎಲ್ಲ ಬಗೆಯ ಪರೀಕ್ಷೆಗಳಲ್ಲೂ ಅದು ಉತ್ತೀರ್ಣವಾಗಬೇಕಾಗಿದೆ ಎಂದು ಲಂಡನ್‌ನ ಇಂಪೀರಿಯಲ್‌ ಕಾಲೇಜಿನ ಜಾಗತಿಕ ಆರೋಗ್ಯ ವಿಭಾಗದ ಪ್ರಾಧ್ಯಾಪಕ ಡಾ| ಡೇವಿಡ್‌ ನಬರ್ರೋ ಅವರು ವಿಶ್ಲೇಷಿಸಿದ್ದಾರೆ.

ಕೊರೋನಾಗೆ ನಲುಗಿದ ವಿಶ್ವಕ್ಕೆ ಸಿಹಿಸುದ್ದಿ ಕೊಟ್ಟಿದೆ ಈ ಔಷಧಿ!

ಆದರೆ, ಎಚ್‌ಐವಿ ಹಾಗೂ ಮಲೇರಿಯಾ ಕಾಯಿಲೆಗಳ ರೀತಿ ಕೊರೋನಾ ವೈರಸ್‌ ಕ್ಷಿಪ್ರಗತಿಯಲ್ಲಿ ರೂಪಾಂತರ ಹೊಂದುತ್ತಿಲ್ಲ. ಹೀಗಾಗಿ ಲಸಿಕೆ ದೊರೆಯಲಿದೆ ಎಂಬ ವಿಶ್ವಾಸವನ್ನು ಇತರೆ ತಜ್ಞರು ವ್ಯಕ್ತಪಡಿಸಿದ್ದಾರೆ.

ಕೊರೋನಾ ವೈರಸ್‌ಗೆ ಲಸಿಕೆ ಕಂಡುಹಿಡಿಯುವ 100 ಪ್ರಯತ್ನಗಳು ವಿಶ್ವದಲ್ಲಿ ನಡೆಯುತ್ತಿವೆ. ಆ ಪೈಕಿ ಕೆಲವೊಂದಿಷ್ಟುಲಸಿಕೆಗಳು ಮಾನವ ಪ್ರಯೋಗ ಹಂತವನ್ನು ತಲುಪಿವೆ.