ಮಹಾರಾಷ್ಟ್ರ ಲಾಕ್‌ಡೌನ್‌ಗೆ ಸಿದ್ಧತೆ| ಏ.14ರ ನಂತರ ನಿರ್ಧಾರ| ನಿನ್ನೆಯ ಟಾಸ್ಕ್‌ಫೋರ್ಸ್‌ ಸಭೆಯಲ್ಲಿ ಸಿದ್ಧತೆ ಬಗ್ಗೆ ಚರ್ಚೆ| ಪ್ಯಾಕೇಜ್‌ ಬಗ್ಗೆ ನಿರ್ಣಯಿಸಿ ನಂತರ ಲಾಕ್‌ಡೌನ್‌ ಸಾಧ್ಯತೆ

ಮುಂಬೈ(ಏ.12): ಕೊರೋನಾ 2ನೇ ಅಲೆ ನಿಯಂತ್ರಣಕ್ಕಾಗಿ ಮಹಾರಾಷ್ಟ್ರದಲ್ಲಿ ಕಠಿಣ ಲಾಕ್‌ಡೌನ್‌ ಜಾರಿಯಾಗುವ ಸಾಧ್ಯತೆ ಇದ್ದು, ಇದಕ್ಕಾಗಿ ಸಿದ್ಧತೆಗಳನ್ನು ಆರಂಭಿಸಲಾಗಿದೆ. ಭಾನುವಾರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅಧ್ಯಕ್ಷತೆಯಲ್ಲಿ ನಡೆದ ಟಾಸ್ಕ್‌ಫೋರ್ಸ್‌ ಸಭೆಯಲ್ಲಿ ಸಿದ್ಧತೆಗಳ ಬಗ್ಗೆ ಚರ್ಚಿಸಲಾಗಿದೆ. ‘ಏಪ್ರಿಲ್‌ 14ರ ನಂತರ ಲಾಕ್‌ಡೌನ್‌ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗುವುದು’ ಎಂದು ಆರೋಗ್ಯ ಸಚಿವ ರಾಜೇಶ್‌ ಟೋಪೆ ಸಭೆಯ ಬಳಿಕ ತಿಳಿಸಿದ್ದಾರೆ.

ಭಾನುವಾರವೇ 15 ದಿನಗಳ ಲಾಕ್‌ಡೌನ್‌ ಘೋಷಣೆ ಹೊರಬೀಳಬಹುದು ಎನ್ನಲಾಗಿತ್ತು. ಆದರೆ ಸಾಧಕ-ಬಾಧಕ ಹಾಗೂ ಹಣಕಾಸು ಪ್ಯಾಕೇಜ್‌ ಬಗ್ಗೆ ಮತ್ತೊಮ್ಮೆ ಎಲ್ಲಾ ಇಲಾಖೆಗಳೊಂದಿಗೆ ಚರ್ಚಿಸಿ, ಕೊರೋನಾ ಕಾರ‍್ಯಪಡೆಗಳೊಂದಿಗೆ ಇನ್ನೊಂದು ಸುತ್ತಿನ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲು ನಿರ್ಧರಿಸಲಾಗಿದೆ.

ಏಕಾಏಕಿ ಲಾಕ್‌ಡೌನ್‌ನಿಂದ ಜನರ ಜೀವನಕ್ಕೆ ತೊಂದರೆ ಆಗುತ್ತದೆ. ಹೀಗಾಗಿ ವಿವಿಧ ವರ್ಗಗಳಿಗೆ ಹಣಕಾಸು ಪ್ಯಾಕೇಜ್‌ ಘೋಷಣೆಯ ಬಗ್ಗೆ ನಿರ್ಧಾರ ಆಗಬೇಕು. ಈ ಬಗ್ಗೆ ಠಾಕ್ರೆ ಅವರು ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಮತ್ತು ಹಣಕಾಸು ಇಲಾಖೆ ಕಾರ‍್ಯದರ್ಶಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಜನರಿಗೆ ಪೂರ್ವ ಸಿದ್ಧತೆಗೆ ಅವಕಾಶ ನೀಡುವ ಇಂಗಿತ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ರಾಜ್ಯದಲ್ಲಿ ಸೋಂಕಿತರ ಚಿಕಿತ್ಸೆಗೆ ಆಮ್ಲಜನಕ ಪೂರೈಕೆ ಹೆಚ್ಚಿಸಬೇಕು ಎಂದು ಠಾಕ್ರೆ ಸೂಚಿಸಿದ್ದಾರೆ. ಮತ್ತು ಕೊರೋನಾ ಲಸಿಕೆಯನ್ನು ಹೆಚ್ಚೆಚ್ಚು ಪೂರೈಸಬೇಕು ಎಂದು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದಾರೆ.