ನವ​ದೆ​ಹ​ಲಿ(ಫೆ.23): ಕೇರ​ಳ​ದಲ್ಲಿ ಕೊರೋನಾ ಸೋಂಕಿ​ತರ ಸಂಖ್ಯೆ ಭಾರೀ ಪ್ರಮಾ​ಣ​ದಲ್ಲಿ ಏರಿ​ಕೆ​ಯಾ​ಗು​ತ್ತಿ​ರುವ ಬೆನ್ನಲ್ಲೇ, ಆ ರಾಜ್ಯ​ದಿಂದ ಕರ್ನಾ​ಟ​ಕಕ್ಕೆ ಬರು​ವ​ವರ ಮೇಲಿನ ನಿಯಂತ್ರ​ಣ​ಕ್ಕಾಗಿ ಕರ್ನಾ​ಟಕ ಸರ್ಕಾ​ರವು ಕೆಲವು ಗಡಿ​ ರಸ್ತೆಗ​ಳನ್ನು ಬಂದ್‌ ಮಾಡಿದೆ. ಇದಕ್ಕೆ ಕೇರಳ ಮುಖ್ಯಮಂತ್ರಿ ಪಿಣ​ರಾ​ಯಿ ವಿಜ​ಯನ್‌ ಅವರು ಅಸ​ಮಾ​ಧಾನ ವ್ಯಕ್ತ​ಪ​ಡಿ​ಸಿ​ದ್ದಾರೆ.

ಸೋಮವಾರ ಸಂಜೆ ಮಾತನಾಡಿದ ಪಿಣರಾಯಿ, ‘ಈ ಸಂಬಂಧ ಕರ್ನಾ​ಟಕ ಸರ್ಕಾ​ರದ ವಿರುದ್ಧ ಕೇಂದ್ರ ಸರ್ಕಾ​ರಕ್ಕೆ ದೂರು ನೀಡುತ್ತೇವೆ’ ಎಂದಿದ್ದಾರೆ.

‘ಕೇರ​ಳ​ದಿಂದ ಕರ್ನಾ​ಟ​ಕಕ್ಕೆ ಪ್ರವೇಶ ಬಯ​ಸುವ ವ್ಯಕ್ತಿ​ಗಳ ಪೈಕಿ ಆರ್‌​ಟಿ-ಪಿಸಿ​ಆರ್‌ ಪರೀ​ಕ್ಷೆ​ಯಲ್ಲಿ ನೆಗೆ​ಟಿವ್‌ ಬಂದ ವ್ಯಕ್ತಿ​ಗ​ಳನ್ನು ಮಾತ್ರವೇ ರಾಜ್ಯ ಪ್ರವೇ​ಶಕ್ಕೆ ಮುಖ್ಯ​ಮಂತ್ರಿ ಬಿ.ಎಸ್‌ ಯಡಿ​ಯೂ​ರಪ್ಪ ಸರ್ಕಾರ ಅವ​ಕಾಶ ಕಲ್ಪಿ​ಸಿದೆ. ಆದರೆ ಅಗತ್ಯ ವಸ್ತು​ಗಳ ಸಾಗ​ಣೆಯ ವಾಹ​ನ​ಗ​ಳಿಗೆ ಗಡಿ ಮಾರ್ಗ​ಗಳ ಬಂದ್‌​ನಿಂದ ವಿನಾಯ್ತಿ ನೀಡ​ಲಾ​ಗಿದೆ ಎಂದು ಕರ್ನಾ​ಟ​ಕದ ಡಿಜಿಪಿ ತಿಳಿ​ಸಿ​ದ್ದಾರೆ’ ಪಿಣರಾಯಿ ಹೇಳಿದ್ದಾರೆ.

ಕಳೆದ ವರ್ಷದ ಮಾಚ್‌ರ್‍ನಲ್ಲಿ ಕೊರೋನಾ ಸೋಂಕು ಉತ್ತುಂಗ ಸ್ಥಿತಿ​ಯ​ಲ್ಲಿ​ದ್ದಾ​ಗಲೂ ಕರ್ನಾ​ಟಕ ಸರ್ಕಾ​ರ​ವು ಕೇರ​ಳಕ್ಕೆ ಸಂಪರ್ಕ ಕಲ್ಪಿ​ಸುವ ಗಡಿಯನ್ನು ಬಂದ್‌ ಮಾಡಿತ್ತು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ​ಸ್ಥಿಕೆ ವಹಿ​ಸ​ಬೇ​ಕೆಂದು ಪಿಣ​ರಾಯಿ ವಿಜ​ಯನ್‌ ಒತ್ತಾ​ಯಿ​ಸಿ​ದ್ದರು.