ತಿರುವನಂತಪುರ[ಫೆ.04]: ಚೀನಾದಲ್ಲಿ 361 ಮಂದಿಯನ್ನು ಬಲಿ ಪಡೆದಿರುವ ಹಾಗೂ ವಿಶ್ವಾದ್ಯಂತ ಭೀತಿ ಮೂಡಿಸಿರುವ ಮಾರಕ ಕೊರೋನಾವೈರಸ್‌ ಮತ್ತೊಬ್ಬ ಭಾರತೀಯ ಪ್ರಜೆಗೆ ತಗುಲಿದೆ. ಇದರಿಂದಾಗಿ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಮೂರಕ್ಕೇರಿಕೆಯಾಗಿದೆ. ಮೂವರೂ ಸೋಂಕಿತರು ಕೇರಳದವರೇ ಆಗಿದ್ದಾರೆ.

ಕೊರೋನಾ ಸೋಂಕಿನ ಕೇಂದ್ರ ಬಿಂದುವಾಗಿರುವ ಚೀನಾದ ವುಹಾನ್‌ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯಲ್ಲಿ ಸೋಂಕು ದೃಢಪಟ್ಟಿದೆ. ಆ ವಿದ್ಯಾರ್ಥಿಯನ್ನು ಕಾಸರಗೋಡು ಜಿಲ್ಲೆಯ ಕಾಂಞಂಗಾಡ್‌ ಜಿಲ್ಲಾಸ್ಪತ್ರೆಯ ಪ್ರತ್ಯೇಕ ಕೊಠಡಿಯಲ್ಲಿ ಇಡಲಾಗಿದೆ. ದೇಹಸ್ಥಿತಿ ಸ್ಥಿರವಾಗಿದೆ ಎಂದು ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಅವರು ವಿಧಾನಸಭೆಗೆ ಸೋಮವಾರ ತಿಳಿಸಿದರು.

ಭಾನುವಾರದವರೆಗೆ 104 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಆ ಪೈಕಿ ಮೂವರಲ್ಲಿ ಸೋಂಕು ದೃಢಪಟ್ಟಿದೆ. ಮೂರೂ ಪ್ರಕರಣಗಳೂ ಕೇರಳದವೇ ಆಗಿವೆ. ಈ ಹಿಂದೆ ತ್ರಿಶ್ಶೂರು ಹಾಗೂ ಆಲಪ್ಪುಳದಲ್ಲಿ ಪ್ರಕರಣಗಳು ಪತ್ತೆಯಾಗಿದ್ದವು. ಆ ಸೋಂಕಿತರು ಕೂಡ ಚೀನಾದಿಂದಲೇ ಬಂದವರಾಗಿದ್ದರು.

ಚೀನಾ ಹಾಗೂ ಕೊರೋನಾ ಸೋಂಕಿನ ಇನ್ನಿತರೆ ದೇಶಗಳಿಗೆ ಹೋಗಿ ಬಂದಿರುವ ಇತಿಹಾಸವುಳ್ಳ 1999 ವ್ಯಕ್ತಿಗಳನ್ನು ಕೇರಳದಲ್ಲಿ ಪರಿಶೀಲನೆಯಲ್ಲಿಡಲಾಗಿದೆ. ಆ ಪೈಕಿ 75 ಮಂದಿಯನ್ನು ಆಸ್ಪತ್ರೆಗಳ ಪ್ರತ್ಯೇಕ ಕೊಠಡಿಯಲ್ಲಿಡಲಾಗಿದೆ. ಉಳಿಕೆ 1924 ಮಂದಿಗೆ ಅವರ ಮನೆಯಲ್ಲೇ ನಿಗಾ ವಹಿಸಲಾಗಿದೆ. ಸಾರ್ವಜನಿಕ ಸಮಾರಂಭ ಹಾಗೂ ಕಾರ್ಯಕ್ರಮದಲ್ಲಿ ಭಾಗಿಯಾಗದಂತೆ, ಮನೆಯಿಂದ ಹೊರಗಡೆ ಹೋಗದಂತೆ ಸೂಚಿಸಲಾಗಿದೆ. 28 ದಿನಗಳ ಕಾಲ ಇವರ ಮೇಲೆ ನಿಗಾ ಇಟ್ಟಿರಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.