ನವದೆಹಲಿ(ಏ.11): ಲಾಕ್‌ಡೌನ್ ಮುಂದುವರೆಸುವುದಾ ಅಥವಾ ತೆರವು ಮಾಡೋದಾ ಎಂಬ ಕುರಿತಾಗಿ ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ನಡೆಸಿ ರಾಜ್ಯದ ಸ್ಥಿತಿಗತಿಗಳ ಕುರಿತು ಸಂವಾದ ಆರಂಭಿಸಿದ್ದಾರೆ. ಇದೇ ಮೊದಲ ಬಾರಿ ಪಿಎಂ ಮೋದಿ ಮಾಸ್ಕ್ ಧರಿಸಿದ್ದಾರೆ. ಇನ್ನು ಇದು ಹೋಂ ಮೇಡ್ ಮಾಸ್ಕ್ ಎನ್ನುವುದು ಮತ್ತೊಂದು ವಿಶೇಷ.

ಈವರೆಗೂ ದೇಶದ ಜನತೆಗೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂಬ ಎಚ್ಚರಿಕೆ ನೀಡುತ್ತಿದ್ದ ಪಿಎಂ ಮೋದಿ ಮೊದಲ ಬಾರಿ ಮಾಸ್ಕ್ ಧರಿಸಿದ್ದು, ಪರಿಸ್ಥಿತಿಯ ಗಂಭೀರತೆ ಎಷ್ಟಿದೆ ಎಂಬುವುದನ್ನು ಸೂಚಿಸಿದೆ. ಅಲ್ಲದೇ ಜನರಿಗೆ ಮತ್ತಷ್ಟು ಎಚ್ಚರಿಕೆಯಿಂದ ಇರುವಂತೆಯೂ ಈ ಮೂಲಕ ಸಂದೇಶ ರವಾನಿಸಿದ್ದಾರೆ.

ಲಾಕ್‌ಡೌನ್‌, ಇಂದು ತೀರ್ಮಾನ: ಎಲ್ಲಾ ಸಿಎಂಗಳ ಜತೆ ಮೋದಿ ಸಂವಾದ!

 

ಈ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿರುವ ಕರ್ನಾಟಕ ಸಿಎಂ ಬಿ. ಎಸ್. ಯಡಿಯೂರಪ್ಪ ಕೂಡಾ ಮಾಸ್ಕ್ ಧರಿಸಿದ್ದಾರೆಂಬುವುದು ಉಲ್ಲೇಖನೀಯ. ಇನ್ನು ಕರ್ನಾಟಕ ರಾಜ್ಯ ಲಾಕ್‌ಡೌನ್ ಏಪ್ರಿಲ್‌ 30ರವರೆಗೆ ಮುಂದುವರೆಸಲು ಬೆಂಬಲ ಸೂಚಿಸಿದ್ದು, ಅಕ್ಕ ಪಕ್ಕದ ರಾಜ್ಯಗಳೂ ಲಾಕ್‌ಡೌನ್ ಪರವಿದೆ. ಹೀಗಿರುವಾಗ ಲಾಕ್‌ಡೌನ್ ಮುಂದುವರೆಸುತ್ತಾರಾ? ಅಥವಾ ಬೇರೆ ಯಾವುದಾದರೂ ನಿರ್ಧಾರ ತೆಗೆದುಕೊಳ್ಳಲಾಗುತ್ತಾ ಕಾದು ನೋಡಬೇಕಿದೆ.

ಈಗಾಗಲೇ ಒಡಿಶಾ ಹಾಗೂ ಪಂಜಾಬ್‌ ಸರ್ಕಾರಗಳು ತಮ್ಮ ರಾಜ್ಯದಲ್ಲಿ ಏಪ್ರಿಲ್ 30ರವರೆಗೂ ಲಾಕ್‌ಡೌನ್ ವಿಸ್ತರಿಸಿವೆ. ಅಲ್ಲದೇ ಮೋದಿಗೂ ಇದೇ ಮನವಿಯನ್ನು ಮಾಡಿದ್ದಾರೆ. ಈಗಾಗಲೇ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರುತ್ತಿದ್ದು, ಆತಂಕ ಸೃಷ್ಟಿಸಿದೆ.