ಬೀಜಿಂಗ್‌/ಟೋಕಿಯೋ/ಸೋಲ್‌[ಫೆ.24]: ಕಾರವಾರ ಮೂಲದ ಅಭಿಷೇಕ್‌ ಸೇರಿದಂತೆ ಒಟ್ಟು 138 ಭಾರತೀಯರು ಇರುವ ‘ಡೈಮಂಡ್‌ ಪ್ರಿನ್ಸೆಸ್‌’ ಹಡಗಿನಲ್ಲಿ ಮತ್ತೆ ನಾಲ್ವರು ಭಾರತೀಯ ಸಿಬ್ಬಂದಿಗೆ ಕೊರೋನಾ ವ್ಯಾಪಿಸಿದೆ. ಈ ಮೂಲಕ ಈ ಹಡಗಿನಲ್ಲಿ 12 ಭಾರತೀಯರಿಗೆ ಈ ವೈರಸ್‌ ಹಬ್ಬಿದಂತಾಗಿದೆ.

ಜಪಾನ್‌ನ ಯೊಕೊಹಾಮಾದಲ್ಲಿ ಲಂಗರು ಹಾಕಿರುವ ಡೈಮಂಡ್‌ ಪ್ರಿನ್ಸೆಸ್‌ ಹಡಗಿನಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರುವ ಯತ್ನಗಳು ನಡೆದಿರುವಾಗಲೇ, ಮತ್ತೆ ನಾಲ್ವರಲ್ಲಿ ಈ ಸೋಂಕು ಪತ್ತೆಯಾಗಿದೆ. ಮತ್ತೊಂದೆಡೆ, ಕೊರೋನಾಕ್ಕೆ ತುತ್ತಾಗದಿರುವ ಭಾರತೀಯರನ್ನು ವಾಪಸ್‌ ಕರೆತರುವ ಕಾರ್ಯದಲ್ಲಿ ಭಾರತ ಸರ್ಕಾರ ಸಕ್ರಿಯವಾಗಿದ್ದು, ಈ ಪ್ರಕ್ರಿಯೆಗಳು ಫೆ.25 ಅಥವಾ 26ರಂದು ಪೂರ್ಣವಾಗುವ ಸಾಧ್ಯತೆಯಿದೆ ಎಂದು ಜಪಾನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ.

ಮತ್ತೋರ್ವ ವೈದ್ಯ ಕೊರೋನಾಕ್ಕೆ ಬಲಿ:

ಚೀನಾದ ಮರಣ ಮೃದಂಗ ಎಂದೇ ಕುಖ್ಯಾತಿ ಪಡೆದಿರುವ ಕೊರೋನಾ ಸೋಂಕು ಇದೀಗ ಚೀನಾದಲ್ಲಿ ಓರ್ವ ವೈದ್ಯ ಸೇರಿ 97ಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದಿದೆ. ತನ್ಮೂಲಕ ಕೊರೋನಾದಿಂದ ಸಾವನ್ನಪ್ಪಿದ ಜನಸಾಮಾನ್ಯರ ಸಂಖ್ಯೆ 2442ಕ್ಕೆ ಏರಿಕೆಯಾದರೆ, ವೈದ್ಯರ ಸಾವಿನ ಸಂಖ್ಯೆ 10ಕ್ಕೆ ಏರಿದೆ. ಈ ಮಾರಣಾಂತಿಕ ಸೋಂಕಿನ ಕೇಂದ್ರವಾದ ವುಹಾನ್‌ ನಗರದಲ್ಲಿ ರೋಗಿಗಳ ಚಿಕಿತ್ಸಾ ಕಾರ್ಯದಲ್ಲಿ ತೊಡಗಿದ್ದ 29 ವರ್ಷದ ಮಹಿಳಾ ವೈದ್ಯೆ ಕ್ಸಿಯಾ ಸಿಸಿ ಎಂಬುವರೇ ಸಾವನ್ನಪ್ಪಿದವರು.

ಜಾಗತಿಕ ಪಿಡುಗಾದ ಕೊರೋನಾ ಪರಿವರ್ತನೆ:

ಇನ್ನು ಇಟಲಿ, ಇರಾನ್‌, ದಕ್ಷಿಣ ಕೊರಿಯಾ, ಆಫ್ರಿಕಾ ಸೇರಿದಂತೆ ಇನ್ನಿತರ ದೇಶಗಳಲ್ಲೂ ಕೊರೋನಾ ಪೀಡಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ದಕ್ಷಿಣ ಕೊರಿಯಾದಲ್ಲಿ ಇದುವರೆಗೂ 556 ಮಂದಿಯಲ್ಲಿ ಈ ವೈರಸ್‌ ಪತ್ತೆಯಾಗಿದ್ದು, ಈ ಸಂಬಂಧ ಮುಂದಿನ ದಿನಗಳಲ್ಲಿ ಏನೆಲ್ಲಾ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಅಲ್ಲಿನ ಸರ್ಕಾರ ಸಭೆ ಕರೆದಿದೆ. ಮತ್ತೊಂದೆಡೆ, ದೇಶದ ಇನ್ನಿತರ ಭಾಗಗಳಿಗೆ ಕೊರೋನಾ ಹಬ್ಬದಂತೆ ತಡೆಯಲು ಚೀನಾ ಸರ್ಕಾರ ಹುಬೇ ಪ್ರಾಂತ್ಯದ ಸಂಪರ್ಕವನ್ನೇ ಕಡಿದು ಹಾಕಿತ್ತು. ಇದೇ ರೀತಿಯ ಕ್ರಮಗಳಿಗೆ ಇಟಲಿ ಮತ್ತು ಇರಾನ್‌ ಸರ್ಕಾರಗಳು ಮುಂದಾಗಿವೆ. ಈ ಪ್ರಕಾರ, ಉದ್ಯಮದ ಹಬ್‌ ಎಂದೇ ಪರಿಗಣಿಸಲಾಗಿದ್ದ ಇಟಲಿಯ ಮಿಲಾನ್‌ ನಗರ ಮತ್ತು ಕೊರೋನಾ ಪತ್ತೆಯಾದ ಇನ್ನಿತರ ಪ್ರದೇಶಗಳ ಜನರು ಯಾವುದೇ ಕಾರಣಕ್ಕೂ ಮನೆಗಳಿಂದ ಹೊರಬಾರದಂತೆ ಸೂಚನೆ ನೀಡಲಾಗಿದೆ.