ನವದೆಹಲಿ(ಜು.05): ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು, ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಕೊರೋನಾ ಉಬ್ಬರ ಕಂಡುಬರುತ್ತಿದ್ದು, ಅತಿ ಹೆಚ್ಚು ಸೋಂಕು ಪತ್ತೆಯಾಗಿರುವ ಟಾಪ್‌ 10 ರಾಜ್ಯಗಳ ಪಟ್ಟಿಯಲ್ಲಿ ಈ ನಾಲ್ಕೂ ಸ್ಥಾನ ಪಡೆದಿವೆ ಎಂದು ಅಂಕಿ-ಸಂಖ್ಯೆ ಉಲ್ಲೇಖಿಸಿ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ಮೊದಲಿನಿಂದಲೂ ಟಾಪ್‌10 ಪಟ್ಟಿಹೊರಗಿದ್ದ ಕರ್ನಾಟಕ, ಇದೀಗ ದೇಶದಲ್ಲೇ 8ನೇ ಸ್ಥಾನಕ್ಕೇರಿರುವುದು ಆತಂಕಕಾರಿಯಾಗಿ ಪರಿಣಮಿಸಿದೆ.

ಟಾಪ್‌-10ರ ಪಟ್ಟಿಯಲ್ಲಿರುವ ರಾಜ್ಯಗಳ ಪೈಕಿ, ದೇಶದ ಸರಾಸರಿಗಿಂತ ಹೆಚ್ಚು ವೇಗದಲ್ಲಿ ಸೋಂಕು ದಾಖಲಾಗುತ್ತಿರುವುದು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಮಾತ್ರ. ಇದರಿಂದಾಗಿ ತನ್ನಿಂತಾನೇ ದೇಶದ ಒಟ್ಟಾರೆ ಪ್ರಕರಣಗಳ ಸಂಖ್ಯೆಯೂ ಏರುಮುಖವಾಗಿದೆ ಎಂದು ವರದಿ ತಿಳಿಸಿದೆ.

ಸಿಎಂ ಮುಂದೆ ಮತ್ತೆ ಲಾಕ್‌ಡೌನ್‌ ಚರ್ಚೆ!

1 ವಾರದಲ್ಲಿ ಕೇಸು ಹೆಚ್ಚಳ:

ಕರ್ನಾಟಕ, ತಮಿಳುನಾಡು, ತೆಲಂಗಾಣ ಹಾಗೂ ಆಂಧ್ರಪ್ರದೇಶಗಳಲ್ಲಿ ಕಳೆದ 1 ವಾರದಲ್ಲಿ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿದೆ. 1 ವಾರದಲ್ಲಿ ತಮಿಳುನಾಡಿನಲ್ಲಿ 28 ಸಾವಿರ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ ಶುಕ್ರವಾರ 1 ಲಕ್ಷ ದಾಟಿದೆ. ಈ ಮೂಲಕ ದಿಲ್ಲಿಯನ್ನೂ ಮೀರಿಸಿ ದೇಶದಲ್ಲೇ 2ನೇ ಸ್ಥಾನಕ್ಕೇರಿದೆ. ಇನ್ನು ತೆಲಂಗಾಣ ಹಾಗೂ ಕರ್ನಾಟಕಗಳು ತಲಾ 8 ಸಾವಿರ ಪ್ರಕರಣಗಳ ಕೊಡುಗೆ ನೀಡಿವೆ. ಆಂಧ್ರಪ್ರದೇಶವು 7 ದಿನದಲ್ಲಿ 5,500 ಕೊರೋನಾ ಪ್ರಕರಣ ಕಂಡಿದೆ.

ಆದರೆ ದೇಶದಲ್ಲೇ ಮೊದಲ ಕೊರೋನಾ ಪ್ರಕರಣ ಕಂಡ ಹಾಗೂ ಮಧ್ಯದಲ್ಲಿ ಭಾರೀ ಏರುಗತಿ ಕಂಡಿದ್ದ ಕೇರಳದಲ್ಲಿ ಕೊರೋನಾ ಸೋಂಕು ಈಗ ಒಂದು ಹಂತದಲ್ಲಿ ನಿಯಂತ್ರಣದಲ್ಲಿದೆ. ಕಳೆದ 1 ವಾರದಲ್ಲಿ ಕೇವಲ 1 ಸಾವಿರ ಪಾಸಿಟಿವ್‌ ಪ್ರಕರಣಗಳು ಅಲ್ಲಿ ಪತ್ತೆಯಾಗಿವೆ ಎಂದು ವರದಿ ವಿವರಿಸಿದೆ.

ಮಾಚ್‌ರ್‍ನಲ್ಲಿ ದೇಶದಲ್ಲಿ ಕೊರೋನಾ ಬಾಧೆ ತೀವ್ರಗೊಂಡ ನಂತರ ದಕ್ಷಿಣ ರಾಜ್ಯಗಳು ಕೊರೋನಾಗೆ ಇಷ್ಟೊಂದು ಕೊಡುಗೆ ನೀಡುತ್ತಿರುವುದು ಇದೇ ಮೊದಲು.

ಮೃತರಾದ 3 ದಿನಗಳ ಬಳಿಕ ಸ್ವಾಬ್‌ ಸಂಗ್ರಹ: ಆಸ್ಪತ್ರೆ ಸಿಬ್ಬಂದಿ ಭಾರೀ ಎಡವಟ್ಟು!

4 ರಾಜ್ಯಗಳಲ್ಲಿ 1 ವಾರದ ಸೋಂಕು

ರಾಜ್ಯ ಪಾಸಿಟಿವ್‌ ಕೇಸು

ತಮಿಳುನಾಡು 28000

ತೆಲಂಗಾಣ 8000

ಕರ್ನಾಟಕ 8000

ಆಂಧ್ರ 5,500

ಮಹಾರಾಷ್ಟ್ರ ಈಗಲೂ ನಂ.1:

ಹಾಗಂತ ದೇಶದಲ್ಲೇ ಅತಿ ಹೆಚ್ಚು ಪ್ರಕರಣ ಕಂಡಿರುವ ಮಹಾರಾಷ್ಟ್ರದಲ್ಲೇನೂ ಸೋಂಕಿನ ತೀವ್ರತೆ ಇಳಿಕೆ ಆಗಿಲ್ಲ. ಶುಕ್ರವಾರ ಒಂದೇ ದಿನ 6,364 ಅಲ್ಲಿ ಪತ್ತೆಯಾಗಿದ್ದು, ಏರಿಕೆಯ ಸರಾಸರಿ ಶೇ.3.40 ಆಗಿದೆ.

ಇದರ ಜತೆಗೆ ದಿಲ್ಲಿ, ಉತ್ತರ ಪ್ರದೇಶ, ಪ.ಬಂಗಾಳ, ಛತ್ತೀಸ್‌ಗಢ. ಜಾರ್ಖಂಡ್‌ ಹಾಗೂ ಇನ್ನೂ ಅನೇಕ ಸಣ್ಣಪುಟ್ಟರಾಜ್ಯಗಳಲ್ಲೂ ಸೋಂಕು ತೀವ್ರವಾಗಿದೆ. ಆದರೆ ಕಳೆದ 1 ವಾರದಲ್ಲಿ ದಿಲ್ಲಿಯಲ್ಲಿ 17 ಸಾವಿರ ಕೇಸು ದಾಖಲಾಗಿದ್ದರೂ, ಸೋಂಕು ಏರಿಕೆಯ ಗತಿ ಶೇ.3ಕ್ಕಿಂತ ಕುಗ್ಗಿದೆ.

2.35 ಲಕ್ಷ ಸಕ್ರಿಯ ಕೇಸು:

ಶುಕ್ರವಾರ ಸುಮಾರು 23 ಸಾವಿರ ಹೊಸ ಸೋಂಕು ಪ್ರಕರಣಗಳು ದೃಢಪಡುವುದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 6.5 ಲಕ್ಷಕ್ಕೇರಿದೆ. ಈ ಪೈಕಿ 3.94 ಲಕ್ಷ ಜನ ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2.35 ಲಕ್ಷ ಇದೆ.

ನಂ.3 ಸ್ಥಾನಕ್ಕೆ ಭಾರತ?:

ಕೊರೋನಾ ಸೋಂಕಿತರ ದೇಶಗಳ ಸಾಲಿನಲ್ಲಿ ವಿಶ್ವದಲ್ಲೇ 4ನೇ ಸ್ಥಾನದಲ್ಲಿರುವ ಭಾರತ, ಕೇಸುಗಳ ಏರುಗತಿ ನೋಡಿದರೆ ಶೀಘ್ರ 3ನೇ ಸ್ಥಾನಕ್ಕೇರಬಹುದು ಎಂಬ ಭೀತಿ ಇದೆ. ಅಮರಿಕ 1, ಬ್ರೆಜಿಲ್‌ 2ನೇ ಸ್ಥಾನದಲ್ಲಿವೆ. 3ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ ಭಾರತಕ್ಕಿಂತ 18 ಸಾವಿರ ಹೆಚ್ಚು ಸೋಂಕಿತರಿದ್ದಾರೆ. ಈಗ ಪ್ರಕರಣಗಳ ಏರುಗತಿ ನೋಡಿದರೆ ರಷ್ಯಾವನ್ನು ಭಾರತ ಹಿಂದಿಕ್ಕಬಹುದು ಎಂಬ ಆತಂಕವಿದೆ.