ದೆಹಲಿಯಲ್ಲಿ ವೀಕೆಂಡ್ ಕರ್ಫ್ಯೂ, ಯುಪಿಯಲ್ಲಿ ನೈಟ್ ಕರ್ಫ್ಯೂ; ಕೊರೋನಾಗೆ ತತ್ತರಿಸುತ್ತಿದೆ ಭಾರತ!
ಕೊರೋನಾ ವೈರಸ್‌ಗೆ ಇಡೀ ದೇಶವೇ ತತ್ತರಿಸಿದೆ. ಒಂದೊಂದೆ ರಾಜ್ಯದಲ್ಲಿ ಸೆಮಿ ಲಾಕ್‌ಡೌನ್, ಕರ್ಫ್ಯೂ ಜಾರಿಗೊಳ್ಳುತ್ತಿದೆ. ಮತ್ತೆ ಕಳೆದ ವರ್ಷ ಅನುಭವಿಸಿದ ಕಠಿಣ ನಿರ್ಧಾರಗಳು ಮರಳುತ್ತಿದೆ. ಇದೀಗ ದೆಹಲಿಯಲ್ಲಿ ಸೆಮಿ ಲಾಕ್‌ಡೌನ್, ಉತ್ತರ ಪ್ರದೇಶದಲ್ಲಿ ಕರ್ಫ್ಯೂ ಜಾರಿಯಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿವೆ.
ನವದೆಹಲಿ(ಏ.15): ಕೊರೋನಾ ವೈರಸ್ 2ನೇ ಅಲೆಗೆ ಇಡೀ ಭಾರತವೇ ಅಪಾಯದಲ್ಲಿ ಸಿಲುಕಿದೆ. ಮಹಾರಗಳಲ್ಲಿ ಆಸ್ಪತ್ರೆಗಳು ಭರ್ತಿಯಾಗುತ್ತಿದೆ. ಬೆಡ್‌ಗಳು ಸಿಗುತ್ತಿಲ್ಲ. ಲಾಕ್‌ಡೌನ್ ಮಾತೇ ಇಲ್ಲ ಎಂದಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇದೀಗ ಕೊರೋನಾ ನಿಯಂತ್ರಣಕ್ಕೆ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ್ದಾರೆ.
'ಕೊರೋನಾ ನಿಯಂತ್ರಣಕ್ಕೆ ಜನತೆ ಸ್ವಯಂ ಕರ್ಫ್ಯೂ ವಿಧಿಸಿಕೊಳ್ಳಿ
ದೆಹಲಿಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿಮಾಡಿದ್ದರೆ, ಉತ್ತರ ಪ್ರದೇಶದ 10 ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ರಾತ್ರಿ 8 ಗಂಟೆಯಿಂದ ಬೆಳಗ್ಗೆ 7 ಗಂಟೆ ವರೆಗೆ ಕರ್ಫ್ಯೂ ಜಾರಿ ಮಾಡಲಾಗಿದೆ. ಮಹಾರಾಷ್ಟ್ರ ಬಳಿಕ ಇದೀಗ ದೆಹಲಿ ಹಾಗೂ ಉತ್ತರ ಪ್ರದೇಶದಲ್ಲೂ ಕಠಿಣ ನಿಯಮಗಳು ಜಾರಿಯಾಗಿದೆ.
ದೆಹಲಿ ವೀಕೆಂಡ್ ಕರ್ಫ್ಯೂ ವೇಳೆ ಕೇವಲ ಅಗತ್ಯ ವಸ್ತುಗಳು ಹಾಗೂ ತುರ್ತು ಸೇವೆ ಲಭ್ಯವಾಗಲಿದೆ. ಇನ್ನುಳಿದಂತೆ ಎಲ್ಲಾ ಸೇವೆಗಳು ಸ್ಥಗಿತಗೊಳ್ಳಲಿದೆ. ಶಾಪಿಂಗ್ ಮಾಲ್, ಜಿಮ್, ಆಡಿಟೋರಿಯಂ ಬಂದ್ ಆಗಲಿವೆ. ಸಿನಿಮಾ ಹಾಲ್‌ಗಳಲ್ಲೇ ಶೇಕಡಾ 30 ರಷ್ಟು ಮಾತ್ರ ಸೀಟಿಂಗ್ ಅವಕಾಶ ನೀಡಲಾಗಿದೆ.
ದೆಹಲಿಯಲ್ಲಿ ಆಸ್ಪತ್ರೆ ಬೆಡ್ ಖಾಲಿ ಇವೆ. ಸದ್ಯ 50,000 ಬೆಡ್ ಖಾಲಿ ಇದ್ದು, ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಇತ್ತ ಉತ್ತರ ಪ್ರದೇಶದಲ್ಲಿ ನೈಟ್ ಕರ್ಫ್ಯೂ ಹೇರಲಾಗಿದೆ. ಈ ನೈಟ್ ಕರ್ಫ್ಯೂ ವೇಳೆ ಕೊರೋನಾ ಪಾಸಿಟೀವ್ ಸಂಖ್ಯೆಗಳನ್ನು ಸೂಕ್ಷ್ಮವಾಗಿ ಗಮಿಸಲು ಸರ್ಕಾರ ಮುಂದಾಗಿದೆ. ಇಷ್ಟೇ ಅಲ್ಲ ಅಗತ್ಯಬಿದ್ದರೆ ವೀಕೆಂಡ್ ಲಾಕ್‌ಡೌನ್ ಕುರಿತ ಚಿಂತನೆ ನಡೆಸಲಾಗುವುದು ಎಂದು ಸರ್ಕಾರ ಹೇಳಿದೆ.