ಬ್ರಿಟನ್‌ನಲ್ಲಿ ಒಂದೇ ದಿನ 1564 ಮಂದಿ ಕೊರೋನಾಗೆ ಬಲಿ, ಬಯಲಾಯ್ತು ಶಾಕಿಂಗ್ ವಿಚಾರ!
ಮುಂದುವರೆದಿದೆ ಕೊರೋನಾ ಅಬ್ಬರ| ಒಂದೇ ದಿನ 1564 ಮಂದಿ ಕೊರೋನಾಗೆ ಬಲಿ| ಬಯಲಾಯ್ತು ಶಾಕಿಂಗ್ ಮಾಹಿತಿ
ಲಂಡನ್(ಜ.14): ಬ್ರಿಟನ್‌ನಲ್ಲಿ ಕೊರೋನಾ ವೈರಸ್ ಮಹಾಮಾರಿ ಕ್ಷೀಣಿಸುವ ಲಕ್ಷಣ ಕಾಣುತ್ತಿಲ್ಲ. ಬುಧವಾರ ಕೊರೋನಾ ವೈರಸ್‌ನ 1564 ರೋಗಿಗಳು ಮೃತಪಟ್ಟಿದ್ದಾರೆ. ಈ ಮೂಲಕ ಇಲ್ಲಿ ಒಟ್ಟು 84,767 ಮಂದಿ ಮೃತಪಟ್ಟಂತಾಗಿದೆ. ಇನ್ನು ಮೃತಪಟ್ಟ 1564 ಮಂದಿ ಸೋಂಕು ತಗುಲಿದ 28 ದಿನದೊಳಗೇ ಮೃತಪಟ್ಟಿದ್ದಾರೆಂಬುವುದು ಉಲ್ಲೇಖನೀಯ. ಇದು ಕಳೆದ ವರ್ಷ ದೇಶಕ್ಕೆ ಕೊರೋನಾ ಎಂಟ್ರಿ ನೀಡಿದ ಬಳಿಕ ದಾಖಲಾದ ಅತಿ ಹೆಚ್ಚು ಪ್ರಕರಣಗಳಾಗಿದೆ.
ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳ ಸಂಖ್ಯೆ ಇಳಿಮುಖ
ಲಂಡನ್‌ನಲ್ಲಿ ಕೊರೋನಾ ಆರಂಭವಾದಾಗಿನಿಂದ ಇದೇ ಮೊದಲ ಬಾರಿ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ಆದರೆ ಈ ನಡುವೆ ರೂಪಾಂತರಿ ವೈರಸ್ ದಾಳಿ ಇಟ್ಟಿದ್ದು, ಇದು ಅತ್ಯಂತ ವೇಗವಾಗಿ ಜನರ ಮಧ್ಯೆ ಹಬ್ಬುತ್ತಿದೆ. ಹೀಗಿದ್ದರೂ ಈ ರೂಪಾಂತರಿ ವೈರಸ್ ಮೊದಲಿನಷ್ಟು ಮಾರಕವಲ್ಲ ಎಂಬುವುದು ತಜ್ಞರ ಮಾತಾಗಿದೆ.
ಹದಗೆಟ್ಟ ಪರಿಸ್ಥಿತಿ ನಡುವೆ ಲಸಿಕೆ
ಈ ವೈರಸ್ ವೇಗವಾಗಿ ಹಬ್ಬುತ್ತಿರುವ ನಡುವೆ ದೇಶಾದ್ಯಂತ ಲಾಕ್‌ಡೌನ್ ಹೇರಲಾಗಿದೆ. ಅಲ್ಲದೇ ಅಲರ್ಟ್ ಕೂಡಾ ಜಾರಿಗೊಳಿಸಲಾಗಿದೆ. ಅಲ್ಲದೇ ಪರಿಸ್ಥಿತಿ ಗಂಭೀರವಾಗಿರುವುದರಿಂದ ಪಿಎಂ ಬೋರಿಸ್ ಜಾನ್ಸನ್ ಭಾರತದ ಪ್ರವಾಸವನ್ನೂ ರದ್ದುಗೊಳಿಸಿದ್ದಾರೆ. ಇವೆಲ್ಲಾ ಬೆಳವಣಿಗೆಗಳ ನಡುವೆ ಲಸಿಕೆ ಅಭಿಯಾನವೂ ಆರಂಭವಾಗಿದೆ.