ನವದೆಹಲಿ(ಜೂ.23): ದೇಶದಲ್ಲಿ ಕೊರೋನಾ ವೈರಸ್‌ ಪ್ರಕರಣಗಳು ದಿನದಿಂದ ದಿನಕ್ಕೆ ದಾಖಲೆಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿವೆ. ಮಂಗಳವಾರ ದಾಖಲೆಯ 19,402 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಒಟ್ಟಾರೆ ವೈರಸ್‌ಪೀಡಿತರ ಸಂಖ್ಯೆ 4,32,092ಕ್ಕೆ ಏರಿಕೆ ಕಂಡಿದೆ. 

ಇದು ಇದುವರೆಗಿನ ಗರಿಷ್ಠ ದೈನಂದಿನ ಏರಿಕೆ ಎನಿಸಿಕೊಂಡಿದೆ. ಭಾನುವಾರ 18 ಸಾವಿರಕ್ಕೂ ಅಧಿಕ ಪ್ರಕರಣ ದಾಖಲಾಗಿದ್ದೇ, ಈ ವರೆಗಿನ ದೈನಂದಿನ ಗರಿಷ್ಠ ಏರಿಕೆ ಆಗಿತ್ತು. ಇದೇ ವೇಳೆ ಒಂದೇ ದಿನ ದೇಶದಲ್ಲಿ ಕೊರೋನಾಕ್ಕೆ 503 ಮಂದಿ ಬಲಿಯಾಗಿದ್ದಾರೆ. ದೈನಂದಿನ ಸಾವಿನ ಸಂಖ್ಯೆಯಲ್ಲಿ ಇದು ಕೂಡ ದಾಖಲೆಯೇ. ಈ ಮುನ್ನ ಜೂ.17ರಂದು 454 ಸಾವು ಸಂಭವಿಸಿದ್ದು ಅತ್ಯಧಿಕವಾಗಿತ್ತು. ಈ ಮೂಲಕ ದೇಶದಲ್ಲಿ ಕೊರೋನಾಕ್ಕೆ ಈವರೆಗೆ 14007 ಮಂದಿ ಸಾವಿಗೀಡಾದಂತಾಗಿದೆ. ಇನ್ನು 12,737 ಮಂದಿ ಕೊರೋನಾದಿಂದ ಸೋಮವಾರ ಚೇತರಿಸಿಕೊಳ್ಳುವುದರೊಂದಿಗೆ ಈವರೆಗೆ ಗುಣಮುಖರಾದವರ ಸಂಖ್ಯೆ 2,47,612ಕ್ಕೆ ಏರಿಕೆ ಕಂಡಿರುವುದು ಸಮಾಧಾನಕರ ಸಂಗತಿಯಾಗಿದೆ.

ಕೊರೋನಾ ಸೋಂಕು ಮಾಹಿತಿ ಗೌಪ್ಯವಾಗಿಟ್ಟರೆ ಕೇಸ್!

ಸತತ 11ನೇ ದಿನವೂ 10 ಸಾವಿರಕ್ಕಿಂತ ಹೆಚ್ಚು ಕೇಸ್‌

ಭಾರತದಲ್ಲಿ ಸತತ 11 ದಿನಗಳಿಂದ 10 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಜೂ.1ರಿಂದ ಜೂ.11ರ ಅವಧಿಯಲ್ಲಿ ಒಟ್ಟು 2,34,747 ಕೊರೋನಾ ವೈರಸ್‌ ಪ್ರಕರಣಗಳು ದಾಖಲಾಗಿವೆ. ಇದೇ ವೇಳೆ ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿತರು 1,35,796ಕ್ಕೆ ಏರಿಕೆಯಾಗಿದ್ದು, 6,283 ಮಂದಿ ಸಾವಿಗೀಡಾಗಿದ್ದಾರೆ. ಅದೇ ರೀತಿ ದೆಹಲಿಯಲ್ಲಿ ಸೋಂಕಿತರು 62,655ಕ್ಕೆ ತಲುಪಿದ್ದು 2,233 ಮಂದಿ ಸಾವಿಗೀಡಾಗಿದ್ದಾರೆ.