* ಕೋವಿಡ್‌ ಟೆಸ್ಟ್‌ ಹೆಚ್ಚಿಸಿ, - ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಸೂಚನೆ* ಯುರೋಪ್‌, ಪೂರ್ವ ಏಷ್ಯಾದಲ್ಲಿ ಒಮಿಕ್ರೋನ್‌ ಅಲೆ ತೀವ್ರಗೊಂಡ ಹಿನ್ನೆಲೆ* ದೇಶದಲ್ಲಿ ಮತ್ತೆ ಸೋಂಕು ಹೆಚ್ಚದಂತೆ ಮುನ್ನೆಚ್ಚರಿಕೆ ವಹಿಸಿ: ರಾಜ್ಯಗಳಿಗೆ ಸಲಹೆ*  ಯುರೋಪ್‌ನಲ್ಲಿ ಈಗ  ಒಮಿಕ್ರೋನ್‌ 2ನೇ ಅಲೆ

ನವದೆಹಲಿ (ಮಾ. 19) ದೇಶದಲ್ಲಿ(India) ಜೂನ್‌ ತಿಂಗಳಲ್ಲಿ 4ನೇ ಕೋವಿಡ್‌ ಅಲೆ ಏಳುವ ಸಾಧ್ಯತೆ ಇದೆ ಎಂಬ ಐಐಟಿ-ಕಾನ್ಪುರ ವಿಜ್ಞಾನಿಗಳು ಅಂದಾಜಿಸಿರುವ ಹೊತ್ತಲ್ಲೇ ರಾಜ್ಯಗಳಿಗೆ ಕೇಂದ್ರ ಸರ್ಕಾರ (Union Govt) ಮುನ್ನೆಚ್ಚರಿಕೆಯ ಸಂದೇಶ ರವಾನಿಸಿದೆ. ಅಲ್ಲದೆ, ಯುರೋಪ್‌ ಹಾಗೂ ಪೂರ್ವ ಏಷ್ಯಾದ ದೇಶಗಳಲ್ಲಿ ಒಮಿಕ್ರೋನ್‌ (omicron) ರೂಪಾಂತರಿಯಿಂದಾಗಿ ಕೋವಿಡ್‌ನ ಹೊಸ ಅಲೆ ಎದ್ದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ದೇಶದಲ್ಲಿ ಮತ್ತೆ ಸೋಂಕು ತೀವ್ರಗೊಳ್ಳುವುದನ್ನು ತಡೆಯಲು ಕೋವಿಡ್‌ ಪರೀಕ್ಷೆ ಹೆಚ್ಚಿಸುವಂತೆ ರಾಜ್ಯಗಳಿಗೆ ಸೂಚನೆ ನೀಡಿದೆ.

ಈಗ ಚೀನಾದ ಸ್ಥಿತಿ ಏನಾಗಿದೆ?

ಪರೀಕ್ಷೆಗಳನ್ನು ಕಡಿಮೆ ಮಾಡಿರುವ ಅಥವಾ ನಿಲ್ಲಿಸಿರುವ ರಾಜ್ಯಗಳು ತಕ್ಷಣ ಪುನಾರಂಭಿಸುವಂತೆ ಕಿವಿಮಾತು ಹೇಳಿದೆ. ಜೊತೆಗೆ, ಇನ್‌ಫ್ಲುಯೆಂಜಾ ರೀತಿಯ ಅನಾರೋಗ್ಯ (ಐಎಲ್‌ಐ) ಮತ್ತು ತೀವ್ರತರ ಶ್ವಾಸಕೋಶದ ಸೋಂಕು (ಸಾರಿ) ಪ್ರಕರಣಗಳ ಮೇಲೆ ತೀವ್ರ ನಿಗಾ ವಹಿಸುವಂತೆ ನಿರ್ದೇಶನ ನೀಡಿದೆ.

‘ಚೀನಾ(China) , ವಿಯೆಟ್ನಾಂ, ದಕ್ಷಿಣ ಕೊರಿಯಾ ಮುಂತಾದ ಏಷ್ಯನ್‌ ರಾಷ್ಟ್ರಗಳು ಹಾಗೂ ಕೆಲ ಯುರೋಪಿಯನ್‌ ರಾಷ್ಟ್ರಗಳಲ್ಲಿ ಕೊರೋನಾ ಪುನಃ ಏರಿಕೆಯಾಗುತ್ತಿದೆ. ಆದರೆ, ನಮ್ಮ ದೇಶದಲ್ಲಿ ಸಾಕಷ್ಟುಇಳಿಕೆಯಾಗಿದೆ. ಮತ್ತೆ ಇಲ್ಲಿ ಸೋಂಕು ಏರದಂತೆ ಎಚ್ಚರ ವಹಿಸಬೇಕು. ಯಾವುದೇ ಕಾರಣಕ್ಕೂ ಕೋವಿಡ್‌ ವಿರುದ್ಧದ ಮುನ್ನೆಚ್ಚರಿಕೆಯನ್ನು ಕೈಬಿಡಬಾರದು. ಟೆಸ್ಟ್‌, ಟ್ರ್ಯಾಕ್‌, ಟ್ರೀಟ್‌, ಲಸಿಕೆ ಮತ್ತು ಕೋವಿಡ್‌ ಸನ್ನಡತೆ ಎಂಬ ಐದು ಮಂತ್ರಗಳನ್ನು ಎಲ್ಲಾ ರಾಜ್ಯಗಳೂ ಅಳವಡಿಸಿಕೊಳ್ಳಬೇಕು’ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯ ಆರೋಗ್ಯ ಇಲಾಖೆಗಳಿಗೆ ಸುತ್ತೋಲೆ ರವಾನಿಸಿದೆ.

‘ಕೊರೋನಾ ಪರೀಕ್ಷೆ ನಿಲ್ಲಿಸಿದ್ದರೆ ಮತ್ತೆ ಆರಂಭಿಸಬೇಕು. ಆಸ್ಪತ್ರೆಗಳು ಐಎಲ್‌ಐ ಮತ್ತು ಸಾರಿ ರೋಗಿಗಳನ್ನು ಕಡ್ಡಾಯವಾಗಿ ಕೊರೋನಾ ಪರೀಕ್ಷೆಗೆ ಒಳಪಡಿಸಬೇಕು. ಇದು ಕೋವಿಡ್‌ ನಿರ್ವಹಣೆಯ ಆಧಾರಸ್ತಂಭ ಇದ್ದಂತೆ. ಜಿನೋಮ್‌ ಸೀಕ್ವೆನ್ಸಿಂಗ್‌ಗೆ ಸಾಕಷ್ಟುಮಾದರಿಗಳನ್ನು ಇನ್ಸಾಕಾಗ್‌ಗೆ ಕಾಲಕಾಲಕ್ಕೆ ಸಲ್ಲಿಸಬೇಕು’ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

ಇತ್ತೀಚೆಗೆ ಕೊರೋನಾ 3ನೇ ಅಲೆ ಕಡಿಮೆ ಆಗುತ್ತಿದ್ದಂತೆಯೇ ವಿವಿಧ ಸರ್ಕಾರಗಳು ಪರೀಕ್ಷೆ ತಗ್ಗಿಸಿದ್ದವು. ಈ ಹಿನ್ನೆಲೆಯಲ್ಲಿ ಕೇಂದ್ರದ ಈ ಸೂಚನೆ ಮಹತ್ವ ಪಡೆದಿದೆ.

ಕೋವಿಡ್‌ ಮತ್ತಷ್ಟುಇಳಿಕೆ: 2528 ಹೊಸ ಕೇಸು, 149 ಸಾವು: ನವದೆಹಲಿ: ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಮತ್ತಷ್ಟುಇಳಿಕೆಯಾಗಿದ್ದು, ಶುಕ್ರವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ಕೇವಲ 2,528 ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸುಮಾರು 22 ತಿಂಗಳುಗಳ ನಂತರ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 30,000ಕ್ಕಿಂತ ಕೆಳಗೆ (29,181ಕ್ಕೆ) ಕುಸಿದಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 3​​0 ಸಾವಿರಕ್ಕಿಂತ ಕೆಳಗೆ ಇಳಿದಿದ್ದು ಕಳೆದ 685 ದಿನಗಳಲ್ಲಿ ಇದೇ ಮೊದಲ ಬಾರಿ. ಇದೇ ವೇಳೆ 149 ಸೋಂಕಿತರು ಸಾವಿಗೀಡಾಗಿದ್ದಾರೆ. ದೇಶದಲ್ಲಿ ಕೋವಿಡ್‌ ಚೇತರಿಕೆ ದರವು ಶೇ. 98.73ಕ್ಕೆ ಏರಿಕೆಯಾಗಿದೆ. ದೈನಂದಿನ ಹಾಗೂ ವಾರದ ಪಾಸಿಟಿವಿಟಿ ದರವು ಶೇ. 0.40ಕ್ಕೆ ಇಳಿಕೆಯಾಗಿದೆ. ದೇಶದಲ್ಲಿ ಈವರೆಗೆ 180.97 ಕೋಟಿ ಡೋಸು ಕೋವಿಡ್‌ ಲಸಿಕೆಯನ್ನು ವಿತರಿಸಲಾಗಿದೆ.

ಇನ್ನೊಂದು ಕಡೆ ದಕ್ಷಿಣ ಕೊರಿಯಾದಲ್ಲಿ ದಾಖಲೆಮಟ್ಟದಲ್ಲಿ ಕೋವಿಡ್‌ ಕೇಸುಗಳು ದಾಖಲಾಗುತ್ತಿದ್ದು ಒಂದೇ ದಿನ 6 ಲಕ್ಷಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿದ್ದವು. ಬುಧವಾರದ 4 ಲಕ್ಷ ಕೇಸಿನ ದಾಖಲೆ ಮುರಿದಿದಿತ್ತು. ದಕ್ಷಿಣ ಕೊರಿಯಾದಲ್ಲಿ ಕಳೆದ 24 ಗಂಟೆಗಳಲ್ಲಿ 6,21,328 ಕೇಸುಗಳು ದಾಖಲಾಗಿದ್ದು, ಒಂದೇ ದಿನ 429 ಸೋಂಕಿತರು ಸಾವಿಗೀಡಾಗಿದ್ದರು. ವಿಜ್ಞಾನಿಗಳು ನಿರಂತರ ಅಧ್ಯಯನ ನಡೆಸುತ್ತಿದ್ದರೂ ಕೊರೋನಾದ ಅಸಲಿ ಮೂಲ ಪತ್ತೆ ಸಾಧ್ಯವಾಗುತ್ತಿಲ್ಲ. .