ತಿರುಪುರ್(ಏ.25)‌: ಕೊರೋನಾ ಲಾಕ್‌ಡೌನ್‌ ಘೋಷಣೆಯಾಗಿದ್ದರೂ ಲೆಕ್ಕಿಸದೆ, ಮಾಸ್ಕ್‌ ಕೂಡ ಧರಿಸದೆ ಬೇಕಾಬಿಟ್ಟಿಯಾಗಿ ಜನರು ಓಡಾಡುತ್ತಿದ್ದಾರೆ. ಇಂಥವರಿಗೆ ಪಾಠ ಕಲಿಸಲು ತಮಿಳುನಾಡು ಪೊಲೀಸರು ಡಮ್ಮಿ ಕೊರೋನಾ ರೋಗಿ ಇದ್ದ ಆ್ಯಂಬುಲೆನ್ಸ್‌ಗೆ ಮೂವರು ಯುವಕರನ್ನು ಹತ್ತಿಸಿ ವಿನೂತನ ರೀತಿಯಲ್ಲಿ ಜಾಗೃತಿ ಮೂಡಿಸಿದ್ದಾರೆ.

ನೆರವು ನೀಡಿದ ಹೈದರಾಬಾದ್ ಪೊಲೀಸ್‌ಗೆ ಕಾದಿತ್ತು ಅಚ್ಚರಿ; ಅಭಿನಂದಿಸಿದ ಹಿಮಾಚಲ ರಾಜ್ಯಪಾಲ, ಮುಖ್ಯಮಂತ್ರಿ!

ಈ ವಿಡಿಯೋ ವೈರಲ್‌ ಆಗಿದೆ. ತಮಿಳುನಾಡಿನ ತಿರುಪುರ್‌ನಲ್ಲಿ ಮೂವರು ಯುವಕರು ಮಾಸ್ಕ್‌ ಧರಿಸದೇ ಒಂದೇ ಸ್ಕೂಟರ್‌ನಲ್ಲಿ ಆಗಮಿಸುತ್ತಾರೆ. ಆಗ ‘ಕೊರೋನಾ ಸೋಂಕಿತ’ ಇದ್ದ ಆ್ಯಂಬುಲೆನ್ಸ್‌ಗೆ ಮೂವರನ್ನೂ ಹತ್ತಿಸಲು ಪೊಲೀಸ್‌ ಅಧಿಕಾರಿಣಿ ಹೇಳುತ್ತಾರೆ. ಯುವಕರು ಆತಂಕಕ್ಕೆ ಒಳಗಾಗುತ್ತಾರೆ. ಆ್ಯಂಬುಲೆನ್ಸ್‌ಗೆ ಹತ್ತಿಸಬೇಡಿ ಎಂದು ಕೈಕಾಲು ಹಿಡಿದು ಬೇಡಿಕೊಳ್ಳುತ್ತಾರೆ.

3.35 ನಿಮಿಷ ಇರುವ ವಿಡಿಯೋದಲ್ಲಿ, ಸ್ಕೂಟರ್‌ನಲ್ಲಿ ಬಂದ ಮೂವರು ಯುವಕರು ಮಾಸ್ಕ್‌ ಕೂಡ ಧರಿಸದೆ ಯುವಕರು ಪೊಲೀಸರೆದುರು ಪೋಸು ಕೊಡುತ್ತಿದ್ದರು. ಆಗ ಅಲ್ಲೇ ನಿಂತಿದ್ದ, ಕೊರೋನಾ ಸೋಂಕಿತ ವ್ಯಕ್ತಿ ಇದ್ದ ಆ್ಯಂಬುಲೆನ್ಸ್‌ ಒಳಗೆ ಮೂವರನ್ನೂ ತುಂಬುವಂತೆ ಮಹಿಳಾ ಪೊಲೀಸ್‌ ಅಧಿಕಾರಿಯೊಬ್ಬರು ಹೇಳುತ್ತಾರೆ! ಆ್ಯಂಬುಲೆನ್ಸ್‌ ಒಳಗೆ ಇರುವ ವ್ಯಕ್ತಿ ಕೊರೊನಾ ಸೋಂಕಿತ ಎಂದು ಗೊತ್ತಾದ ತಕ್ಷಣ ಯುವಕರ ಜಂಘಾಬಲವೇ ಉಡುಗಿಹೋಗಿ, ಆಂಬುಲೆನ್ಸ್‌ ಒಳಗೆ ಹತ್ತೋದಿಲ್ಲ ಎಂದು ಕೈ, ಕಾಲು ಹಿಡಿದು ಬೇಡಿಕೊಳ್ಳುವ ದೃಶ್ಯವಿದೆ.

ಕೊರೋನಾ ವೈರಸ್‌ ಜಾಗೃತಿ ಮೂಡಿಸುವ ಸಲುವಾಗಿ ಈ ರೀತಿ ಅಣಕು ಪ್ರದರ್ಶನ ಮಾಡಲಾಗಿದೆ. ಆ್ಯಂಬುಲೆನ್ಸ್‌ ಒಳಗಿದ್ದವರು ಕೊರೋನಾ ರೋಗಿ ಅಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.