2018ರಲ್ಲಿ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರಿಗೆ ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಇದ್ದ ನಿರ್ಬಂಧವನ್ನು ತೆಗೆದು ಹಾಕಿದ್ದ ಸರ್ವೋಚ್ಚ ನ್ಯಾಯಾಲಯ 

ಪಟ್ಟಣಾಂತಿಟ್ಟ(ಕೇರಳ)(ನ.18): ಈ ಸಲದ ಶಬರಿಮಲೆ ಯಾತ್ರೆಗೆ ಚಾಲನೆ ಸಿಗುತ್ತಿದ್ದಂತೆಯೇ ಪೊಲೀಸರ ಕೈಪಿಡಿಯೊಂದು ವಿವಾದ ಹುಟ್ಟುಹಾಕಿದೆ. ಶಬರಿಮಲೆ ದೇಗುಲದ ಭದ್ರತೆಗೆ ನಿಯೋಜಿಸಲ್ಪಟ್ಟ ಪೊಲೀಸ್‌ ಸಿಬ್ಬಂದಿಗೆ ವಿತರಿಸಿರುವ ಕೈಪಿಡಿಯಲ್ಲಿ, ‘2018ರ ಸುಪ್ರೀಂಕೋರ್ಟ್‌ ತೀರ್ಪಿನ ಅನುಸಾರ ಎಲ್ಲ ಭಕ್ತರಿಗೆ ಪ್ರವೇಶಕ್ಕೆ ಅವಕಾಶವಿದೆ’ ಎಂದು ಬರೆಯಲಾಗಿದೆ. ಇದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆಯೇ ರಾಜ್ಯದ ಎಲ್‌ಡಿಎಫ್‌ ಸರ್ಕಾರವು ಕೈಪಿಡಿ ಹಿಂದಕ್ಕೆ ಪಡೆದಿದೆ.

2018ರಲ್ಲಿ ಸರ್ವೋಚ್ಚ ನ್ಯಾಯಾಲಯವು 10ರಿಂದ 50 ವರ್ಷ ವಯಸ್ಸಿನ ಮಹಿಳೆಯರಿಗೆ ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಇದ್ದ ನಿರ್ಬಂಧವನ್ನು ತೆಗೆದು ಹಾಕಿತ್ತು. ಋುತುಮತಿ ಆಗುವ ವಯಸ್ಸಿನ ಮಹಿಳೆಯರೂ ದೇವಾಲಯ ಪ್ರವೇಶಿಸಬಹುದು ಎಂದು ಹೇಳಿತ್ತು. ಈಗ ಇದೇ ಆದೇಶವನ್ನು ಪರೋಕ್ಷವಾಗಿ ಕೈಪಿಡಿಯಲ್ಲಿ ಉಲ್ಲೇಖಿಸಿ, ‘ಎಲ್ಲ ಭಕ್ತರಿಗೂ ದೇವಾಲಯ ಪ್ರವೇಶಕ್ಕೆ ಅನುಮತಿಸಲಾಗಿದೆ’ ಎಂದು ಬರೆಯಲಾಗಿದೆ.

ಇಂದಿನಿಂದ ಶಬರಿಮಲೆಯಲ್ಲಿ ದರ್ಶನ ಆರಂಭ; ಭಕ್ತರಿಗಾಗಿ ಭರ್ಜರಿ ವ್ಯವಸ್ಥೆ

ಆದರೆ, ಕೋರ್ಟ್‌ ಈ ಆದೇಶ ನೀಡಿದ್ದರೂ ಭಕ್ತರ ಭಾವನೆ ಪರಿಗಣಿಸಿ ಅದರ ಜಾರಿಗೆ ಸರ್ಕಾರ ಮುಂದಾಗಿರಲಿಲ್ಲ. ಈ ನಡುವೆ ಕೈಪಿಡಿಯಲ್ಲಿ ಮತ್ತೆ ಈಗ ತೀರ್ಪಿನ ವಿಚಾರ ಕೆದಕಿರುವುದು ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದೆ. ‘ಈ ಕೈಪಿಡಿಯಲ್ಲಿನ ಮಾರ್ಗಸೂಚಿಗಳ ಹಿಂದೆ ದುರುದ್ದೇಶವಿದೆ. ಕೂಡಲೇ ಇದನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿದೆ.

ಇದಕ್ಕೆ ಕೇರಳ ದೇವಸ್ವಂ ಸಚಿವ ಕೆ. ರಾಧಾಕೃಷ್ಣನ್‌ ಪ್ರತಿಕ್ರಿಯಿಸಿ, ‘ಇದು ಮೊದಲೇ ಮುದ್ರಣಗೊಂಡ ಹಳೆಯ ಕೈಪಿಡಿ. ಪ್ರಮಾದವಶಾತ್‌ ವಿತರಣೆ ಆಗಿದೆ. ಕೈಪಿಡಿ ಹಿಂಪಡೆಯಲು ಸೂಚಿಸಲಾಗಿದೆ’ ಎಂದಿದ್ದಾರೆ.