ಆಯೋಧ್ಯೆ ರಾಮ ಮಂದಿರ ಮಾಳಿಗೆ ಸೋರಿಯಾಗಿಲ್ಲ, ನೃಪೇಂದ್ರ ಮಿಶ್ರಾ ಸ್ಪಷ್ಟನೆ!
ಆಯೋಧ್ಯೆ ರಾಮ ಮಂದಿರದ ಗರ್ಭಗುಡಿಯಲ್ಲಿ ನೀರು ಸೋರಿಕೆಯಾಗುತ್ತಿದೆ ಅನ್ನೋ ಆರೋಪ ಭಾರಿ ಕೋಲಾಹಲ ಸೃಷ್ಟಿಸಿತ್ತು. ಇದೀಗ ನಿರ್ಮಾಣ ಸಮಿತಿ ಅಧ್ಯಕ್ಷರೇ ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ ಭಕ್ತರಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಅಯೋಧ್ಯೆ: ರಾಮ ಮಂದಿರದಲ್ಲಿ ಮಳೆ ನೀರು ಸೋರಿಕೆಯಾಗುತ್ತಿದೆ ಎಂಬ ಆರೋಪಕ್ಕೆ ದೇಗುಲ ನಿರ್ಮಾಣ ಸಮಿತಿ ಅಧ್ಯಕ್ಷರಾದ ನೃಪೇಂದ್ರ ಮಿಶ್ರಾ ಸ್ಪಷ್ಟನೆ ನೀಡಿದ್ದು, ‘ವಿದ್ಯುತ್ ಪೈಪ್ ಹಾಕಿದ್ದ ಬಿರುಕಿನಿಂದ ನೀರು ಬಂದಿದೆ ಹೊರತು, ಮಾಳಿಗೆ ಸೋರಿಕೆಯಿಂದಲ್ಲ’ ಎಂದು ಹೇಳಿದ್ದಾರೆ.
ಈ ಕುರಿತು ಎರಡನೇ ದಿನವೂ ಸ್ಪಷ್ಟನೆ ನೀಡಿದ ಮಿಶ್ರಾ,‘ಪೂರ್ತಿ ವ್ಯವಸ್ಥೆಯನ್ನು ನಾನೇ ಖುದ್ದಾಗಿ ಪರಿಶೀಲನೆ ನಡೆಸಿದ್ದೇನೆ. ವಿದ್ಯುತ್ ಪೈಪ್ ಅಳವಡಿಸಲು ಹಾಕಿರುವ ಪೈಪ್‌ನಿಂದ ನೀರು ಬರುತ್ತಿದೆ, ಹೊರತು ಸೋರಿಕೆಯಿಂದಲ್ಲ. ಈಗ ಎರಡನೇ ಅಂತಸ್ತಿನ ಮಾಳಿಗೆ ಕಾಮಗಾರಿ ನಡೆಯುತ್ತಿದೆ. ಇದು ಪೂರ್ಣಗೊಂಡ ಬಳಿಕ ಎಲ್ಲವೂ ಸರಿಹೋಗುತ್ತದೆ’ ಎಂದರು.
ನೀರು ಸೋರಿಕೆ ಬಗ್ಗೆ ಮಾತನಾಡಿದ ದೇಗುಲದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್, ‘ರಾಮ ಮಂದಿರದ ಗರ್ಭಗುಡಿಯಲ್ಲಿ ಅರ್ಚಕರು ಕುಳಿತುಕೊಳ್ಳುವ ಜಾಗದಲ್ಲೇ ನೀರು ಸೋರುತ್ತಿದೆ. ದೇಶದ ದೊಡ್ಡ ದೊಡ್ಡ ಎಂಜಿನಿಯರ್‌ಗಳು ಕಟ್ಟಿದ ಗುಡಿಯ ಸ್ಥಿತಿ ಹೀಗಿದೆ’ ಎಂದು ಆರೋಪಿಸಿದ್ದರು. ಅಯೋಧ್ಯೆಯಲ್ಲಿ ಭಾರೀ ಮಳೆಯಾಗುತ್ತಿರುವ ಬೆನ್ನಲ್ಲೇ ನೂತನವಾಗಿ ನಿರ್ಮಾಣಗೊಂಡಿರುವ ರಾಮಮಂದಿರದ ಗರ್ಭಗುಡಿಯಲ್ಲಿ ಛಾವಣಿಯಿಂದ ನೀರು ಸೋರಿಕೆಯಾಗುತ್ತಿದೆ. ಸೋರಿಕೆಯಾದ ನೀರು ಹೊರಹಾಕಲು ವ್ಯವಸ್ಥೆ ಕೂಡ ಇಲ್ಲ. ಹಾಗಾಗಿ ಭಕ್ತಾದಿಗಳು ಶ್ರೀರಾಮನಿಗೆ ಅಭಿಷೇಕ ಮಾಡುವುದನ್ನು ನಿಲ್ಲಿಸಿದ್ದಾರೆ ಎಂದು ದೇಗುಲದ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ಹೇಳಿದ್ದರು.
ಮೊದಲ ಮಳೆಗೆ ಸೋರುತಿಹುದು ರಾಮಮಂದಿರ; ಒಳಚರಂಡಿ ವ್ಯವಸ್ಥೆ ಇಲ್ಲವೆಂದ ಪ್ರಧಾನ ಅರ್ಚಕರು
ರಾಮ ಮಂದಿರದ 2ನೇ ಅಂತಸ್ತಿನ ಮಾಳಿಗೆ ಕಾಮಗಾರಿ ಅಂತಿಮ ಹಂತದಲ್ಲಿದೆ. ಶೀಘ್ರದಲ್ಲೇ 2ನೇ ಅಂತಸ್ತು ಭಕ್ತರ ಪ್ರವೇಶಕ್ಕೆ ಮುಕ್ತವಾಗಲಿದೆ ಅನ್ನೋ ಸೂಚನೆಯನ್ನು ನೃಪೇಂದ್ರ ಮಿಶ್ರಾ ನೀಡಿದ್ದಾರೆ. ‘ಮೊದಲ ಅಂತಸ್ತಿನ ಕಟ್ಟಡ ಕಾಮಗಾರಿ ನಿರ್ಮಾಣವಾಗುತ್ತಿರುವ ಕಾರಣ ಸೋರಿಕೆ ಸಹಜ. ಏಕೆಂದರೆ ಗುರುಮಂಟಪ ಆಗಸಕ್ಕೆ ಪೂರ್ಣ ತೆರೆದುಕೊಂಡಿದೆ. ಎರಡನೇ ಮಹಡಿ ಮತ್ತು ನಗರ ಶೈಲಿಯ ಗೋಪುರ ಪೂರ್ಣಗೊಂಡ ಬಳಿಕ ತೆರೆದಿರುವ ಜಾಗ ಮುಚ್ಚಲಿದೆ. ಬಳಿಕ ಸೋರಿಕೆ ನಿಲ್ಲಲಿದೆ. ಜೊತೆಗೆ ಮಂಟಪಗಳನ್ನು ಇಳಿಜಾರಿನ ಮಾದರಿಯಲ್ಲಿ ನಿರ್ಮಿಸಿರುವ ಕಾರಣ ಗರ್ಭಗುಡಿಯಲ್ಲಿ ನೀರು ಇಳಿಯುವ ಸಾಧ್ಯತೆ ಇಲ್ಲ ಎಂಬ ಕಾರಣಕ್ಕೇ ಅಲ್ಲಿಂದ ನೀರು ಹೊರಗೆ ಹೋಗುವ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ದೇಗುಲದ ವಿನ್ಯಾಸದಲ್ಲಿ ಲೋಪವಿದೆ ಎಂಬ ವಾದ ಸರಿಯಲ್ಲ. ಇನ್ನು ಗರ್ಭಗುಡಿಯಲ್ಲಿ ಭಕ್ತರಿಗೆ ಅಭಿಷೇಕದ ಅವಕಾಶವೇ ಇಲ್ಲ ಎಂದು ದಾಸ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸೋರಿಗೆ ಆರೋಪ ಕೇಳಿಬರುತ್ತಿದ್ದಂತೆ ಕಾಂಗ್ರೆಸ್ ನಾಯಕರು ಬಿಜೆಪಿ ಮೇಲೆ ಮುಗಿಬಿದ್ದಿತ್ತು. ಬಿಜೆಪಿಯವರು ಲೋಕಸಭಾ ಚುನಾವಣೆಗಾಗಿ ಅವಸರದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿ ಉದ್ಘಾಟನೆ ಮಾಡಿದ್ದರಿಂದ ಈಗ ಸೋರುವ ಪರಿಸ್ಥಿತಿ ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದ್ದರು. ಶ್ರೀರಾಮ, ಆಂಜನೇಯನನ್ನು ರಾಜಕಾರಣಕ್ಕೆ ತಂದು ಅವಸರ ಮಾಡಿದ್ದಕ್ಕೆ ಇವತ್ತು ರಾಮಮಂದಿರ ಸೋರುವ ಪರಿಸ್ಥಿತಿ ಬಂದಿದೆ. ರಾಮಂದಿರ ಕಟ್ಟಿರುವ ಅಯೋಧ್ಯೆಯಲ್ಲಿ ಸಮಾಜವಾದಿ ಪಾರ್ಟಿ ಗೆದ್ದಿದೆ. ಕೊಪ್ಪಳದಲ್ಲಿ ಆಂಜನೇಯನನ್ನು ರಾಜಕಾರಣಕ್ಕೆ ತಂದಿದ್ದಕ್ಕೆ ಕಾಂಗ್ರೆಸ್ ಗೆದ್ದಿದೆ ಎಂದು ತೀಕ್ಷ್ಣವಾಗಿ ಹೇಳಿದರು.
ರಾಮಮಂದಿರ ಪ್ರಾಣಪ್ರತಿಷ್ಠೆ ನೆರವೇರಿಸಿದ ಅರ್ಚಕ ಲಕ್ಷ್ಮಿಕಾಂತ್ ದೀಕ್ಷಿತ್ ನಿಧನ, ಮೋದಿ ಸಂತಾಪ!