ಪಿಒಕೆ ವಶಪಡಿಸಿಕೊಳ್ಳುವುದು ಅಷ್ಟು ಸುಲಭವಿಲ್ಲ: ನಿವೃತ್ತ ಏರ್‌ವೈಸ್ ಮಾರ್ಷಲ್ ಮುರಳಿ
ನಿವೃತ್ತ ಏರ್‌ವೈಸ್ ಮಾರ್ಷಲ್ ಮುರಳಿ ಅವರು ಕನ್ನಡಪ್ರಭದ ಸೋದರ ಸಂಸ್ಥೆ ಏಷ್ಯಾನೆಟ್ ಸುವರ್ಣನ್ಯೂಸ್‌ನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಅದರಲ್ಲಿ ಬಹುಚರ್ಚಿತ ಪಾಕ್ ಆಕ್ರಮಿತ ಪ್ರದೇಶವನ್ನು ವಶಪಡಿಸಿಕೊಳ್ಳಲು ಭಾರತಕ್ಕಿರುವ ಸವಾಲುಗಳ ಬಗ್ಗೆ ವಿವರ ಮಾಹಿತಿ ನೀಡಿದ್ದಾರೆ.

ಸಂದರ್ಶನ: ಪ್ರತಿಮಾ ಭಟ್
* ಪಾಕ್ ಆಕ್ರಮಿತ ಕಾಶ್ಮೀರ ನಿಜಕ್ಕೂ ಭಾರತದ ಭಾಗವಾಗುವುದಕ್ಕೆ ಸಾಧ್ಯವಿದೆಯಾ?
ಪಿಒಕೆಯ ಒಟ್ಟು ವಿಸ್ತೀರ್ಣ 13,297 ಚದರ ಕಿ.ಮೀ. ಇದರಲ್ಲಿ 5,300 ಚದರ ಕಿ.ಮೀ. ಇರುವ ಸಕ್ಷಂಬ್ ವ್ಯಾಲಿ ಪ್ರದೇಶವನ್ನು ಪಾಕಿಸ್ತಾನ ಚೀನಾಗೆ ಕೊಟ್ಟಿದೆ. ಈ ವ್ಯಾಲಿ ಇರುವುದು ಜಿನ್‌ಝಿಯಾಂಗ್ ಉಗುರ್ ಪ್ರದೇಶದ ಎದುರಿಗೆ. ಜಿನ್‌ಝಿಯಾಂಗ್ ಪ್ರದೇಶವೇ ಅಕ್ಸಾಯ್ ಚಿನ್. ಭಾರತಕ್ಕೆ ಚೀನಾ ಈಗ ಹೇಗೆ ತೊಂದರೆ ಕೊಡುತ್ತಿದೆಯೋ ಹಾಗೆ 1963ರಲ್ಲಿ ಪಾಕಿಸ್ತಾನಕ್ಕೂ ತೊಂದರೆ ಕೊಡುತ್ತಿತ್ತು. ಗಡಿ ದಾಟಿ ಹೋಗಿ ಜಾಗವನ್ನು ಅತಿಕ್ರಮಿಸಿಕೊಳ್ಳುತ್ತಿತ್ತು. ಆಗ ಪಾಕಿಸ್ತಾನ 5,300 ಚದರ ಕಿ.ಮೀ. ಪ್ರದೇಶವನ್ನು ಚೀನಾಗೆ ಕೊಟ್ಟಿತು. ಹೀಗಾಗಿ ಪಿಓಕೆಯಲ್ಲಿ ಚೀನಾವೂ ಇದೆ. ಮೊದಲನೆಯದಾಗಿ ಅಲ್ಲಿ 11,000 ಚೀನಾ ಸೈನಿಕರಿದ್ದಾರೆ. ಎರಡನೆಯದಾಗಿ ಈ ಪ್ರದೇಶದಲ್ಲಿ ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಯೋಜನೆಯಲ್ಲಿ ಚೀನಾ 60 ಬಿಲಿಯನ್ ಡಾಲರ್ (ಸುಮಾರು 50 ಲಕ್ಷ ಕೋಟಿ ರು.) ಹೂಡಿಕೆ ಮಾಡಿದೆ. ಹಾಗಾಗಿ ಪಿಓಕೆಯಲ್ಲಿ ಚೀನಾ, ಕಾರಾಕೋರಂ ಹೈವೇ, ಚೀನಾ-ಪಾಕ್ ಎಕನಾಮಿಕ್ ಕಾರಿಡಾರ್ ಇವೆ. ಹೀಗಿರುವಾಗ ಯಾರೊಂದಿಗೆ ಯುದ್ಧ ಮಾಡುತ್ತೀರಾ?
* ಚೀನಾ, ಪಾಕಿಸ್ತಾನವನ್ನು ಪ್ರತ್ಯೇಕವಾಗಿ ಭಾರತ ಎದುರಿಸಬಹುದೇನೋ. ಆದರೆ ಎರಡೂ ಒಟ್ಟಾಗಿ ಬಂದರೆ ಎದುರಿಸುವ ಕ್ಷಮತೆ ಭಾರತಕ್ಕೆ ಇದೆಯಾ?
ಪಿಓಕೆಯನ್ನು ಮರುವಶಪಡಿಸಿಕೊಳ್ಳುತ್ತೇವೆ ಎಂದು ದೊಡ್ಡದಾಗಿ ಹೇಳಿಕೆ ಕೊಡುವ ಮುನ್ನ ಈ ವಿಷಯಗಳನ್ನು ಪರಿಗಣನೆಗೆ ತೆಗೆದುಕೊಂಡು ಯೋಚಿಸಬೇಕಾಗುತ್ತದೆ. ಪಿಓಕೆ ಅಂದರೆ ಬರೀ ಮುಜಾಫರಾಬಾದ್, ಬಾಲಾಕೋಟ್ ಅಲ್ಲ, ಗಿಲ್ಗಿಟ್ ಬಾಲ್ಟಿಸ್ತಾನದ ದಕ್ಷಿಣ ಹಾಗೂ ನೈಋುತ್ಯ ಭಾಗದಲ್ಲಿರುವ ಪ್ರದೇಶ. ಅದನ್ನು ನಾವು ತೆಗೆದುಕೊಳ್ಳುವುದಕ್ಕೆ ಆಗುತ್ತದೆಯೇ? ಚೀನಾದ ಅಷ್ಟುಸೈನ್ಯ, ಡ್ಯಾಂ, ಸೇನಾ ಘಟಕಗಳು ಅಲ್ಲಿರುವಾಗ ನಾವು ಪಿಓಕೆಗೆ ನುಗ್ಗಿ ಅದನ್ನು ಪಡೆಯುವ ಸ್ಥಿಯಲ್ಲಿದ್ದೇವೆಯೇ? ಇಲ್ಲ. ಆಗುವುದಿಲ್ಲ.
ಚೀನಾ ರೀತಿ ನುಗ್ತೇವೆಂದ ಮಹಾರಾಷ್ಟ್ರ ವಿರುದ್ಧ ಅಮಿತ್ ಶಾಗೆ ದೂರು: ಸಿಎಂ ಬೊಮ್ಮಾಯಿ
* ಒಂದು ವೇಳೆ ಪಿಓಕೆ ವಶಕ್ಕೆ ಸರ್ಕಾರ ಆದೇಶಿಸಿದರೆ ಎಷ್ಟು ಸಮಯ ಬೇಕು? ಅಥವಾ ಸಾಧ್ಯವೇ ಇಲ್ಲವೇ? ಯುದ್ಧ ಮಾಡುವ ಮನಸ್ಥಿತಿಯಲ್ಲಿ ಭಾರತ ಇದೆಯಾ?
ಮೊದಲು ನಾವು ತಯಾರಾಗಬೇಕು. 1971ರಲ್ಲಿ ನಮ್ಮ ಬಳಿ ಯಾವ ಯುದ್ಧ ಸಾಮಗ್ರಿಯೂ ಇರಲಿಲ್ಲ. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಮಾತಿಗೆ ಬೆಲೆ ಕೊಟ್ಟು ಆವತ್ತಿನ ರಷ್ಯಾ ಅಧ್ಯಕ್ಷ ಅಲೆಕ್ಸಿ ಕೊಸಿಗಿನ್ ನಮಗೆ ಬೇಕಾದ ಎಲ್ಲವನ್ನೂ ಕೊಟ್ಟರು. ಈಗ ನಮಗೆ ಅಂತಹ ದೇಶ ಇದೆಯೇ? ಯಾರೂ ಇಲ್ಲ. ನೀವು ಯುದ್ಧ ಮಾಡುತ್ತೇವೆ ಅಂದರೆ ನಾವೂ ನಿಮ್ಮ ಮೇಲೆ ಯುದ್ಧ ಮಾಡುತ್ತೇವೆ ಎಂದು ಪಾಕಿಸ್ತಾನ ಹೇಳಿದೆ. ಅವರು ಯುದ್ಧಕ್ಕೆ ರೆಡಿಯಾಗಿದ್ದಾರೆ. ಜತೆಗೆ ನಾವೂ ಚೀನಾವನ್ನೂ ಮರೆಯುವುದಕ್ಕೆ ಆಗುವುದಿಲ್ಲ. ಅಲ್ಲಿರುವ 11,000 ಸೈನಿಕರು ಸುಮ್ಮನೆ ಇರುತ್ತಾರಾ? ನಿಮ್ಮ ಯೋಜನೆ ನಿಲ್ಲಿಸಿ, ಈ ಜಾಗ ನಮ್ಮದು ಅಂದರೆ ಅವರು ನಮ್ಮ ಮೇಲೆ ಯುದ್ಧ ಮಾಡುವುದು ಸಾಮಾನ್ಯ. ಯುದ್ಧಕ್ಕೆ ಹೋಗುವ ಮುನ್ನ ಇವೆಲ್ಲವನ್ನೂ ಯೋಚಿಸಬೇಕು.
* ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾದರೂ ಪಿಓಕೆಯನ್ನು ವಶಪಡಿಸಿಕೊಳ್ಳದೆ ಇರೋದಕ್ಕೆ ಕಾರಣ ಏನು? ಇದಕ್ಕೆ ಭಾರತಕ್ಕಿರುವ ಸವಾಲುಗಳೇನು?
ಸಾಮಾನ್ಯವಾಗಿ ಬೇರೆ ದೇಶದ ಮೇಲೆ ಯುದ್ಧ ಮಾಡುವ ನೀತಿ ಭಾರತದ್ದಲ್ಲ. ನಾವು ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತೇವೆ. ನಾವು ಶಾಂತಿ ಪ್ರಿಯರು ಎಂಬುದು ವಿಶ್ವಕ್ಕೇ ಗೊತ್ತು. 75 ವರ್ಷ ನಾವು ಇದನ್ನೇ ಮಾಡಿದ್ದೇವೆ. ಆದರೆ ಪಾಕ್ ಜೊತೆ ಮಾತನಾಡುವ ಪರಿಸ್ಥಿತಿ ಬರಲಿಲ್ಲ. ಅವರು ಪರೋಕ್ಷವಾಗಿ ಉಗ್ರರನ್ನು ಭಾರತಕ್ಕೆ ಕಳುಹಿಸುತ್ತಿದ್ದಾರೆ. ಇದರಿಂದ 15,000 ಸೈನಿಕರು, ಹಲವಾರು ನಾಗರಿಕರು ಮೃತಪಟ್ಟಿದ್ದಾರೆ. ಪಿಓಕೆಯನ್ನು ಯಾವತ್ತೂ ಬಿಟ್ಟುಕೊಡದ ಪಾಕ್, ಅದನ್ನು ಪಾಕಿಸ್ತಾನದ ಪಶ್ಚಿಮ ಭಾಗ ಎನ್ನುತ್ತದೆ. ಸಯ್ಯದ್ ಚೌದರಿಯನ್ನು ಮುಜಾಫರಾಬಾದಲ್ಲಿ ಕೈಗೊಂಬೆ ಪ್ರಧಾನಿಯನ್ನಾಗಿ ಮಾಡಿ ಕೂರಿಸಿದೆ. ಪಿಓಕೆಯನ್ನು 75 ವರ್ಷದ ಮೊದಲೇ ತೆಗೆದುಕೊಳ್ಳಬೇಕಿತ್ತು.
* ಪಿಓಕೆ ವಶ ಇಂದಿಗೂ ಸಾಧ್ಯವಾಗುತ್ತಿಲ್ಲ ಎಂದರೆ ನಾವು ತಪ್ಪು ಮಾಡಿದ್ದೆಲ್ಲಿ?
ಈ 75 ವರ್ಷದಲ್ಲಿ ಬೇಕಾದ ಯುದ್ಧ ಸಾಮಗ್ರಿಗಳನ್ನು ನಾವು ತೆಗೆದುಕೊಂಡಿಲ್ಲ. ಮಾಡಬೇಕಾದ ಉತ್ಪಾದನೆ ಮಾಡಲಿಲ್ಲ, ಕೈಗಾರಿಕೀಕರಣಕ್ಕೆ ಬೆಂಬಲ ನೀಡಲಿಲ್ಲ. ಈಗ ಇದ್ದಕ್ಕಿದ್ದಂತೆ ಏನೇ ಮಾಡಿದರೂ ಪ್ರಯೋಜನವಿಲ್ಲ. ಏಕೆಂದರೆ ವರ್ಷದಿಂದ ವರ್ಷಕ್ಕೆ ಅವರೂ (ಪಾಕಿಸ್ತಾನ) ಮುಂದುವರೆಯುತ್ತಿದ್ದಾರೆ. ನಾವು ನಮ್ಮ ವೆಚ್ಚವನ್ನು ರಕ್ಷಣೆಗೆ ಹಾಕುವ ಬದಲು ದೇಶದ ಅಭಿವೃದ್ಧಿಗೆ ಬಳಸಬೇಕೆಂಬ ನಿರ್ಣಯ ತೆಗೆದುಕೊಂಡಿದ್ದು ಒಳ್ಳೆಯದು. ಅದರಿಂದ ನಾವು ಇಷ್ಟುಮುಂದೆ ಬಂದಿದ್ದೇವೆ. ಬರೀ ರಕ್ಷಣೆಗೆ ವೆಚ್ಚ ಮಾಡಿದ್ದರೆ ನಮ್ಮ ದೇಶಕ್ಕೆ ತುಂಬಾ ತೊಂದರೆ ಆಗುತ್ತಿತ್ತು.
* ಪಿಓಕೆ ನಮ್ಮ ವಶವಾದರೆ ಉಗ್ರವಾದ ಇನ್ನಷ್ಟು ಜಾಸ್ತಿ ಆಗಬಹುದೆ? ಇದನ್ನು ಪಾಸಿಟಿವ್ ಅನ್ನಬೇಕಾ, ಇಲ್ಲಾ ತೊಡಕು ಎಂದುಕೊಳ್ಳಬೇಕಾ?
ಖಂಡಿತ ಅದರಿಂದ ಭಾರತದ ಭದ್ರತೆಗೆ ಧಕ್ಕೆ ಆಗುತ್ತದೆ. ಮೊದಲಿನ ಹಾಗೆ ಸುರಂಗ ತೋಡಿಕೊಂಡು ಬರುವ ಅವಶ್ಯಕತೆ ಉಗ್ರರಿಗಿರುವುದಿಲ್ಲ. ಪಾಕಿಸ್ತಾನದಿಂದ ಡ್ರೋನ್ ಮೂಲಕ ಅವರಿಗೆ ಬೇಕಾದ ಎಲ್ಲ ಸಾಮಗ್ರಿ ಈಗಾಗಲೇ ತಲುಪುತ್ತಿದೆ. ಆ ಮೂಲಕ ಭಾರತದಲ್ಲಿ ಎಷ್ಟುಸಾಧ್ಯವೋ ಅಷ್ಟುಡ್ಯಾಮೇಜ್ ಮಾಡುತ್ತಿದ್ದಾರೆ.
* ಪಿಓಕೆಯಲ್ಲಿನ ಜನ ಏನು ಬಯಸುತ್ತಾರೆ? ಅವರು ಭಾರತವನ್ನು ಒಪ್ಪಿಕೊಳ್ಳುತ್ತಾರಾ?
ಕೆಲವರು ಭಾರತ ಸೇರಬೇಕು ಎಂದರೆ, ಕೆಲವರು ಪಾಕಿಸ್ತಾನ ಬೇಕು ಎನ್ನುತ್ತಾರೆ. ಕೆಲ ನಿರ್ದಿಷ್ಟಭಾಷಿಕರು ನಮಗೆ ಪಾಕಿಸ್ತಾನ ಬೇಡ, ಪ್ರತ್ಯೇಕ ದೇಶ ಬೇಕು ಇಲ್ಲವೇ ಭಾರತದೊಂದಿಗೆ ಸೇರಿಸಿ ಎಂದು ನಮ್ಮ ಪ್ರಧಾನಿಗಳಿಗೂ, ವಿಶ್ವಸಂಸ್ಥೆಗೂ ಹೇಳಿದ್ದಾರೆ. ಈ ಕುರಿತು ದೊಡ್ಡ ಹೋರಾಟವನ್ನೇ ಮಾಡಿದ್ದಾರೆ. ಪಾಕ್ ಸೇರುತ್ತೇವೆ ಎನ್ನುವ ಜನರ ಬೆಂಬಲದೊಂದಿಗೆ ಪಾಕಿಸ್ತಾನ ನಮಗೆ ತೊಂದರೆ ಮಾಡುತ್ತಿದೆ.
* ಅಷ್ಟು ಸುಲಭವಿಲ್ಲ ಎಂಬುದು ಗೊತ್ತಿದ್ದರೂ ಪಿಓಕೆ ವಶಪಡಿಸಿಕೊಳ್ಳುವ ಬಗ್ಗೆ ಇಷ್ಟುಚರ್ಚೆಯಾಗುತ್ತಿರುವುದಕ್ಕೆ ಕಾರಣ ರಾಜಕೀಯವೇ?
ಯಾರಾದರೂ ಯುದ್ಧ ಮಾಡುವ ಮುನ್ನ ನೀವು ರೆಡಿಯಾಗಿ, ನಾವು ಬಂದು ಯುದ್ಧ ಮಾಡುತ್ತೇವೆ ಎನ್ನುತ್ತಾರಾ? ಈ ರೀತಿಯ ಹೇಳಿಕೆ ನೀಡುವುದರಲ್ಲಿ ಅರ್ಥವೇ ಇಲ್ಲ. ಜನರಲ್ ಉಪೇಂದ್ರ ದ್ವಿವೇದಿ ಅವರ ಹೇಳಿಕೆಯಿಂದ ದೊಡ್ಡ ಟ್ವೀಟರ್ ವಾರ್ ಆಗಿ ಪಾಕಿಸ್ತಾನ ನಾವು ನಿಮ್ಮೊಂದಿಗೆ ಯುದ್ಧಕ್ಕೆ ತಯಾರಾಗಿದ್ದೇವೆ ಎಂದಿದೆ. ಇದು ಹಾಸ್ಯಾಸ್ಪದ.
* ಕಾಂಗ್ರೆಸ್ಸಿನವರೂ ಪಿಓಕೆ ವಶಪಡಿಸಿಕೊಳ್ಳುವ ಸಮಯ ಬಂದಿದೆ ಎಂದಿದ್ದಾರೆ. ಸಮಯವನ್ನು ಹೇಗೆ ನಿರ್ಧಾರ ಮಾಡುತ್ತಾರೆ?
ಸರ್ಕಾರಕ್ಕೆ ಕೆಟ್ಟಹೆಸರು ತರಬೇಕು ಎಂಬುದು ಕಾಂಗ್ರೆಸ್ ಯೋಚನೆಯಾಗಿದ್ದರೆ, ಕಾಂಗ್ರೆಸ್ಸನ್ನು ತುಳಿಯಬೇಕು ಎಂದು ಇನ್ನೊಬ್ಬರದು. ಎಷ್ಟೇ ರಾಜಕೀಯ ಹೇಳಿಕೆ ನೀಡಿದರೂ ಯುದ್ಧ ಮಾಡುವವರು ಇವರಲ್ಲ. ಯುದ್ಧ ಹೇಗೆ ಮಾಡಬೇಕು ಎಂಬುದು ಇವರಿಗೆ ಗೊತ್ತಿಲ್ಲ. ಯುದ್ಧ ಮಾಡುವವರು ನಮ್ಮ ಸೈನಿಕರು. ಪಿಓಕೆಯಲ್ಲಿ ಎರಡು ದೇಶಗಳು ಕೂತಿವೆ. ಅಲ್ಲಿ ಕಾಲಿಟ್ಟರೆ ಎರಡು ದೇಶಗಳ ಮೇಲೆ ಯುದ್ಧ ಸಾರಿದಂತೆ. ಇದನ್ನು ಜ್ಞಾಪಕ ಇಟ್ಟುಕೊಳ್ಳಬೇಕು. ಅಲ್ಲದೇ ಪಾಕ್, ಚೀನಾದೊಂದಿಗೆ ಅಲ್‌ಖೈದಾ, ಐಸಿಸ್‌ನಂತಹ ಭಯೋತ್ಪಾದಕರೂ ಸೇರಿಕೊಳ್ಳುತ್ತಾರೆ. ಹೇಳಿಕೆ ಕೊಡುವ ಮುನ್ನ ಇದೆಲ್ಲ ಯೋಚಿಸುವುದು ಉತ್ತಮ.
* ಅಂತಾರಾಷ್ಟ್ರೀಯ ಸಮುದಾಯ ಹೇಗೆ ಪ್ರತಿಕ್ರಿಯಿಸಬಹುದು? ಉಕ್ರೇನ್ ರಷ್ಯಾ ಯುದ್ಧದಲ್ಲಿ ರಷ್ಯಾಗೆ ಆರ್ಥಿಕ ನಿರ್ಬಂಧ ಹೇರಲಾಗಿದೆ. ಇಂಥ ಗತಿ ಭಾರತಕ್ಕೂ ಬರುತ್ತಾ?
ಭಾರತ, ಪಾಕ್, ಚೀನಾ ಮೂರು ನ್ಯೂಕ್ಲಿಯರ್ ದೇಶಗಳು. ಯುದ್ಧವಾದರೆ ಪಾಕಿಸ್ತಾನ ಶಾರ್ಚ್ ರೇಂಜ್ ನ್ಯೂಕ್ಲಿಯರ್ ವೆಪನ್ಸ್ ಬಳಸುವುದಿಲ್ಲ ಎಂಬುವಂತಿಲ್ಲ. ಬಳಸಿದರೆ ನಾವೂ ಸುಮ್ಮನಿರುವುದಕ್ಕೆ ಆಗುವುದಿಲ್ಲ. ನಾವು ಮಿಸೈಲ್ ಬಳಕೆ ಮಾಡಲ್ಲ ಎಂದೇನೂ ಹೇಳಿಲ್ಲ. ಚೀನಾವಂತೂ ಯುದ್ಧ ಮಾಡೇ ಬಿಡುತ್ತದೆ. ಹಾಗಾಗಿ ಉಳಿದ ದೇಶಗಳು ನಮಗೆ ಬೆಂಬಲ ನೀಡುವವೋ ಇಲ್ಲವೋ ಎಂಬುದು ದೊಡ್ಡ ಪ್ರಶ್ನೆ.
ಕರ್ನಾಟಕಕ್ಕೆ ನೀರು ಬಂದ್: ಮಹಾರಾಷ್ಟ್ರ ಸಚಿವ ಶಂಭುರಾಜ್ ಧಮಕಿ
* ಪಾಕಿಸ್ತಾನ ಡ್ರೋನ್ ಮೂಲಕ ಉಗ್ರರಿಗೆ ಶಸ್ತ್ರಾಸ್ತ್ರ ಪೂರೈಸುತ್ತಿದೆ. ಇದನ್ನು ಭಾರತ ಎದುರಿಸುವುದು ಹೇಗೆ?
ಈ ಹಿಂದೆ ಪಾಕಿಸ್ತಾನ ಸುರಂಗ ತೋಡಿ ಜೈಷ್-ಎ-ಮೊಹಮ್ಮದ್‌ರಂತಹ ಭಯೋತ್ಪಾದಕರನ್ನು ಪೀರ್ ಪಂಜಾಲ್, ಅಮೃತಸರ ಗಡಿ ಸೇರಿ ಅನೇಕ ಪ್ರದೇಶಗಳಿಗೆ ಕಳುಹಿಸುತ್ತಿತ್ತು. 2020ರಲ್ಲಿ ಒಟ್ಟು ಒಳನುಸುಳಿದ್ದ 59 ಡ್ರೋನ್‌ಗಳ ಸಂಖ್ಯೆ 2021ರಲ್ಲಿ 109ಕ್ಕೆ, 2022ರಲ್ಲಿ 191ಕ್ಕೆ ಏರಿದೆ. ಡ್ರೋನ್‌ನಲ್ಲಿ 5-6 ಕೇಜಿಯಿಂದ 10-12 ಕೇಜಿಯಷ್ಟುಅಸಾಲ್ಟ್ ರೈಫಲ್, ಎಂಫಾರ್ ಕಾರ್ಬೈನ್ಸ್, ಹೈ ಎಕ್ಸ್‌ಪ್ಲೋಸಿವ್ ಗ್ರೆನೇಡ್‌್ಸ ಹಾಗೂ ಭಾರತೀಯ ನಕಲಿ ನೋಟುಗಳು, ಹೆರಾಯಿನ್ ಅನ್ನು ಪಾಕಿಸ್ತಾನ ಕಳುಹಿಸುತ್ತಿದೆ. ಇದು ಭಯೋತ್ಪಾದಕರೇ ನುಗ್ಗುವುದಕ್ಕಿಂತ ಹೆಚ್ಚು ಸೀರಿಯಸ್. ಈಗ ಡ್ರೋನ್ ಹೊಡೆಯಲು ನಾಯಿಗಳು ಹಾಗೂ ಹದ್ದುಗಳನ್ನು ಸೇನೆಯಲ್ಲಿ ಬಳಸಲಾಗುತ್ತಿದೆ.
* ಇಷ್ಟೊಂದು ಸವಾಲುಗಳ ಮಧ್ಯೆ ಪಿಓಕೆ ವಶದ ಬಗ್ಗೆ ಚರ್ಚೆಯಾಗುತ್ತಿದೆ. ಹಾಗಾದರೆ ನಿಜಕ್ಕೂ ಭಾರತ ಮಾಡಬೇಕಿರುವುದು ಏನು?
ನಾವು ಪಿಓಕೆ ವಶಪಡಿಸಿಕೊಳ್ಳುತ್ತೇವೆ, ಯುದ್ಧಕ್ಕೆ ತಯಾರಾಗಿದ್ದೇವೆ ಎಂಬ ಹೇಳಿಕೆ ಹಾಸ್ಯಾಸ್ಪದ. ಇದರ ಬದಲು ದೇಶದ ಎಲ್ಲ ಸಶಸ್ತ್ರ ಪಡೆಗಳನ್ನು ತಯಾರು ಮಾಡಬೇಕು. ಮುಂದೊಂದು ದಿನ ನಿಜವಾಗಿ ಯುದ್ಧ ಮಾಡುವ ಸಮಯ ಬಂದರೆ ನಮ್ಮಲ್ಲಿ ಏನೂ ಇಲ್ಲ, ನಾವೂ ನಿಶ್ಯಕ್ತರು ಎಂದುಕೊಳ್ಳದೆ ನಮ್ಮ ಬಳಿ ಎಲ್ಲವೂ ಇದೆ, ನಾವು ಯುದ್ಧ ಮಾಡುವ ಸ್ಥಿತಿಯಲ್ಲಿದ್ದೇವೆ ಎಂಬ ನಿರ್ಣಯದಿಂದ ಮುಂದೆ ಹೋಗಬೇಕು.