ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್‌ ಪಕ್ಷಕ್ಕೆ ಆತಂಕ ಎದುರಾಗಿದೆ. ಇದರಿಂದ ಎಚ್ಚೆತ್ತುಕೊಂಡ ಕಾಂಗ್ರೆಸ್ ಇದೀಗ ಪಕ್ಷದ ಅಧ್ಯಕ್ಷರ ಚುನಾವಣೆ ನಡೆಸುವ ಕುರಿತು ಚರ್ಚಿಸಲು ನಾಳೆ ಸಭೆ ಕರೆದಿದೆ.

ನವದೆಹಲಿ(ಆ.27): ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ರಾಜೀನಾಮೆ ಕಾಂಗ್ರೆಸ್ ಪಕ್ಷದ ಬುಡವನ್ನೇ ಅಲುಗಾಡಿಸಿದೆ. ಇದರ ಜೊತೆಗೆ ಆತಂಕವೂ ಕಾಡುತ್ತಿದೆ. ಗುಲಾಮ್ ನಬಿ ಆಜಾದ್ ಕಾಂಗ್ರೆಸ್ ಒಳ ರಾಜಕೀಯ, ಅಧಪತನವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇದರಿಂದ ಮತ್ತಷ್ಟು ವಿಕೆಟ್ ಪತನವಾಗುವ ಸಾಧ್ಯತೆ ಹೆಚ್ಚಾಗಿದೆ. ಇದನ್ನರಿತ ಕಾಂಗ್ರೆಸ್ ಇದೀಗ ದಿಢೀರ್ ಪಾರ್ಟಿ ಅಧ್ಯಕ್ಷರ ಚುನಾವಣೆ ಕುರಿತು ಚರ್ಚಿಸಲು ನಾಳೆ ಸಭೆ ಕರೆದಿದೆ. ಪಕ್ಷದ ಹಂಗಾಮಿ ಅಧ್ಯಕ್ಷರಾಗಿರುವ ಸೋನಿಯಾ ಗಾಂಧಿ ಈ ಸಭೆ ಕರೆದಿದ್ದಾರೆ. ಆಗಸ್ಟ್ 28ರ ಮಧ್ಯಾಹ್ನಾ 3.30ಕ್ಕೆ ಸಭೆ ಕರೆದಿದ್ದಾರೆ. ಈ ಸಭೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ನಡೆಯಲಿದೆ. ಪಕ್ಷದ ಅಧ್ಯಕ್ಷರ ಆಯ್ಕೆಯನ್ನು ಚುನಾವಣೆ ಮೂಲಕ ನಡೆಸಿ ಕಾಂಗ್ರೆಸ್‌ಗೆ ಆಗುತ್ತಿರುವ ನಷ್ಟವನ್ನು ತಪ್ಪಿಸಲು ಪಕ್ಷ ಮುಂದಾಗಿದೆ. 

ಕಾಂಗ್ರೆಸ್ ಪಕ್ಷದ ನಾಯಕತ್ವ ವಹಿಸಿಕೊಳ್ಳಲು ರಾಹುಲ್ ಗಾಂಧಿ ಸೂಕ್ತ ಅನ್ನೋ ಮಾತುಗಳು ಕೇಳಿಬರುತ್ತಿದೆ. ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಈ ಕುರಿತು ಸ್ಪಷ್ಟವಾಗಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ರಾಹುಲ್ ಗಾಂಧಿ ಹೊರತುಪಡಿಸಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಬಲ್ಲ ಬೇರೆ ನಾಯಕರಿಲ್ಲ ಎಂದಿದ್ದಾರೆ. ಇನ್ನು ಹಲವು ಹಿರಿಯ ನಾಯಕರು ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ರಾಹುಲ್ ಗಾಂಧಿ ಅಲಂಕರಿಸಬೇಕು ಎಂದು ಹೇಳುವ ಮೂಲಕ ಗಾಂಧಿ ಕುಟುಂಬಕ್ಕೆ ನಿಷ್ಠೆ ಮೆರೆದಿದ್ದಾರೆ. ಆದರೆ ಇದು ಹಲವು ನಾಯಕರ ಅಸಮಾಧಾನಕ್ಕೂ ಕಾರಣವಾಗಿದೆ. ರಾಹುಲ್ ಗಾಂಧಿ ನಾಯಕತ್ವದಿಂದ ಪಕ್ಷಕ್ಕೆ ಆಗಿರುವ ಸಮಸ್ಯೆ ಹಾಗೂ ನಷ್ಟವನ್ನು ದಾಖಲೆ ಸಮೇತ ಈಗಾಗಲೇ ಗುಲಾಮ್ ನಬಿ ಆಜಾದ್ ವಿವರಿಸಿದ್ದಾರೆ. ಹೀಗಾಗಿ ಮತ್ತೆ ರಾಹುಲ್ ಗಾಂಧಿಗೆ ನೇರವಾಗಿ ಅಧ್ಯಕ್ಷ ಪಟ್ಟ ನೀಡಿದರೆ ಹಲವು ನಾಯಕರು ಪಕ್ಷದಿಂದ ದೂರ ಸರಿಯುವ ಸಾಧ್ಯತೆ ಇದೆ.ಹೀಗಾಗಿ ಕಾಂಗ್ರೆಸ್ ನಾಳೆ ದಿಢೀರ್ ಆಗಿ ಸಭೆ ಕರೆದಿದೆ.

ಒಬ್ಬ ಸಾಮಾನ್ಯ ಕಾರ್ಯಕರ್ತ ಪಕ್ಷದಿಂದ ಬಯಸುವ ಎಲ್ಲ ಹುದ್ದೆ ಪಡೆದಿದ್ದಾರೆ ಆಜಾದ್, ಸಿದ್ದು ಅವಾಜ್

ಕಳೆದ ವರ್ಷ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ವಿಚಾರ ಚರ್ಚೆಗೆ ಬಂದಿತ್ತು. ಈ ವೇಳೆ ಸೋನಿಯಾ ಗಾಂಧಿಯನ್ನು ಮತ್ತೆ ಹಂಗಾಮಿ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಇದೇ ವೇಳೆ ಮುಂದಿನ ವರ್ಷದ ಅಂದರೆ 2022ರ ಆಗಸ್ಟ್ 21 ರಿಂದ ಸೆಪ್ಟೆಂಬರ್ 20ರೊಳಗೆ ಪಕ್ಷದ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಸಲು ತೀರ್ಮಾನಿಸಲಾಗಿತ್ತು. ಇದೀಗ ರಾಹುಲ್ ಗಾಂಧಿಯೇ ಅಧಿಕಾರ ವಹಿಸಿಕೊಳ್ಳಬೇಕು ಅನ್ನೋ ಆಗ್ರಹ ಕೇಳಿಬರುತ್ತಿರುವ ಹಿನ್ನಲೆಯಲ್ಲಿ ಮತ್ತೆ ಗಾಂಧಿ ಕುಟಂಬಕ್ಕೆ ಅಧಿಕಾರ ನೀಡಲು ಬಹುತೇಕ ನಿರ್ಧಾರವಾಗಿತ್ತು. ಆದರೆ ಅಜಾದ್ ರಾಜೀನಾಮೆ ಈ ಎಲ್ಲಾ ಲೆಕ್ಕಾಚಾರ ಉಲ್ಟಾ ಮಾಡಿದೆ.

ಕಾಂಗ್ರೆಸ್‌ ಅಧ್ಯಕ್ಷರಾಗಿ ಮರಳಲು ರಾಹುಲ್‌ ಗಾಂಧಿಯನ್ನೇ ಒತ್ತಾಯಿಸುತ್ತೇವೆ: ಖರ್ಗೆ

ಕಾಂಗ್ರೆಸ್‌ ಅವನತಿಗೆ ರಾಹುಲ್‌ ಕಾರಣ
ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ಆಜಾದ್‌ ಅವರು ಕಾಂಗ್ರೆಸ್‌ನ ಪ್ರಸಕ್ತ ದುಃಸ್ಥಿತಿ ಹಾಗೂ ರಾಹುಲ್‌ ಗಾಂಧಿ ಅವರ ನಾಯಕತ್ವದ ಬಗ್ಗೆ ಹಿಗ್ಗಾಮುಗ್ಗಾ ಟೀಕೆ ಮಾಡಿದ್ದಾರೆ. ‘2013ರಲ್ಲಿ ರಾಹುಲ್‌ ಕಾಂಗ್ರೆಸ್‌ ಉಪಾಧ್ಯಕ್ಷರಾದರು. ಇದಾದ ನಂತರ ಪಕ್ಷದ ಅವನತಿ ಆರಂಭವಾಯಿತು. ಪಕ್ಷದಲ್ಲಿ ಆಂತರಿಕ ಸಮಾಲೋಚನೆ ಎಂಬುದೇ ಮಾಯವಾಯಿತು. ಅವರ ಸುತ್ತಲೂ ಭಟ್ಟಂಗಿಗಳು ಸೇರಿಕೊಂಡರು. ಹಿರಿಯ ನಾಯಕರು ಮೂಲೆಗುಂಪಾದರು. ಭಟ್ಟಂಗಿಗಳೇ ಪಕ್ಷ ನಿಯಂತ್ರಿಸಲು ಆರಂಭಿಸಿದರು. ಪಕ್ಷದಲ್ಲಿನ ನಿರ್ಧಾರಗಳನ್ನು ರಾಹುಲ್‌ ಗಾಂಧಿ ರಾಹುಲ್‌ ಗಾಂಧಿ ತೆಗೆದುಕೊಳ್ಳುತ್ತಾರೆ ಅವರ ಸೆಕ್ಯೂರಿಟಿ ಗಾರ್ಡ್‌ಗಳು ಅಥವಾ ಆಪ್ತ ಸಹಾಯಕರು ತೆಗೆದುಕೊಳ್ಳುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.