Asianet Suvarna News Asianet Suvarna News

'ರಾಷ್ಟ್ರಪತಿ, ಗೌರ್ನರ್‌ಗಷ್ಟೇ ಅಧಿಕಾರ': ಸ್ಪೀಕರ್‌ ಬಿರ್ಲಾ ಭಾಷಣಕ್ಕೆ ಕೈ ಬಹಿಷ್ಕಾರ!

* ಲೋಕಸಭೆ ಸ್ಪೀಕರ್‌ಗೆ ಕಾಂಗ್ರೆಸ್‌ ಬಹಿಷ್ಕಾರ

* ಜಂಟಿ ಅಧಿವೇಶನ ಉದ್ದೇಶಿಸಿ ಓಂ ಬಿರ್ಲಾ ಇಂದು ಭಾಷಣ

* ಕಾಂಗ್ರೆಸ್‌ನಿಂದ ತೀವ್ರ ಆಕ್ಷೇಪ

* ರಾಷ್ಟ್ರಪತಿ, ಗೌರ್ನರ್‌ಗಷ್ಟೆ ಜಂಟಿ ಕಲಾಪ ಅಧಿಕಾರ ಎಂದು ವಾದ

Congress to boycott Lok Sabha speaker Om Birla address in Karnataka legislature pod
Author
Bangalore, First Published Sep 24, 2021, 7:54 AM IST

ಬೆಂಗಳೂರು(ಸೆ.24): ರಾಜ್ಯದ ವಿಧಾನಮಂಡಲ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಶುಕ್ರವಾರ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ(Om Birla) ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ವಿಧಾನಮಂಡಲದ(Karnataka Assembly) ಜಂಟಿ ಅಧಿವೇಶನ ನಡೆಯಲಿದೆ. ಸಾಮಾನ್ಯವಾಗಿ ರಾಷ್ಟ್ರಪತಿ(President) ಹಾಗೂ ರಾಜ್ಯಪಾಲರಿಗೆ(Governor) ಮಾತ್ರ ಇದ್ದ ಈ ಅವಕಾಶವನ್ನು ಲೋಕಸಭಾ ಸ್ಪೀಕರ್‌ ಅವರಿಗೂ ನೀಡುವ ಮೂಲಕ ಸಂಸದೀಯ ನಡವಳಿಕೆ ಉಲ್ಲಂಘನೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌(Congress) ಈ ಅಧಿವೇಶನವನ್ನು ಬಹಿಷ್ಕಾರ ಮಾಡಿದೆ.

ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸದೀಯ ಮೌಲ್ಯಗಳ ರಕ್ಷಣೆ’ ಎಂಬ ವಿಷಯ ಕುರಿತು ಓಂ ಬಿರ್ಲಾ ಜಂಟಿ ಭಾಷಣ ಮಾಡಲಿದ್ದಾರೆ. ಶುಕ್ರವಾರ ಬೆಳಗ್ಗೆ ವಿಧಾನಸಭೆ ಕಲಾಪ ಆರಂಭವಾಗಲಿದ್ದು, ಮಧ್ಯಾಹ್ನ 1.30ವರೆಗೆ ಸಾಮಾನ್ಯ ಕಲಾಪ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಲೋಕಸಭೆ ಸ್ಪೀಕರ್‌(Loksabha Speaker) ಅಧ್ಯಕ್ಷತೆಯಲ್ಲಿ ಜಂಟಿ ಅಧಿವೇಶನ ಆರಂಭವಾಗಲಿದೆ. ಈ ವೇಳೆ ಲೋಕಸಭೆ ಸ್ಪೀಕರ್‌, ವಿಧಾನಸಭೆ ಸ್ಪೀಕರ್‌ ಹಾಗೂ ವಿಧಾನಪರಿಷತ್‌ ಸಭಾಧ್ಯಕ್ಷರು ಭಾಷಣ ಮಾಡಲಿದ್ದಾರೆ.

ಕಾಂಗ್ರೆಸ್‌ ಬಹಿಷ್ಕಾರ:

ವಿಧಾನಮಂಡಲ ಅಧಿವೇಶನದಲ್ಲಿ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರಿಂದ ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡಿಸಲು ರಾಜ್ಯ ಸರ್ಕಾರ ಮುಂದಾಗುವ ಮೂಲಕ ಸಂಸದೀಯ ನಡವಳಿಕೆಗೆ ವಿರುದ್ಧವಾಗಿ ವರ್ತಿಸುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದ್ದು, ಜಂಟಿ ಸದನವನ್ನು ಬಹಿಷ್ಕರಿಸಲು ತೀರ್ಮಾನಿಸಿದೆ.

ವಿಧಾನಸಭೆಯಲ್ಲಿ ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳನ್ನು ಹೊರತುಪಡಿಸಿ ಉಳಿದವರು ಯಾರೂ ಜಂಟಿ ಅಧಿವೇಶನ(Joint Session) ನಡೆಸಲು ಅವಕಾಶವಿಲ್ಲ. ಹೀಗಾಗಿ ವಿಧಾನಸಭೆಯ ಬದಲಿಗೆ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಸಭೆ ನಡೆಸುವಂತೆ ಸರ್ಕಾರ ಹಾಗೂ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಮಾಡಲಾಗಿತ್ತು. ಆದರೂ ನಿಯಮ ಉಲ್ಲಂಘಿಸಿ ವಿಧಾನಸಭೆಯಲ್ಲೇ ಮಾಡಲು ಸರ್ಕಾರ ಮುಂದಾಗಿದೆ. ಹೀಗಾಗಿ ಅಧಿವೇಶನವನ್ನು ಬಹಿಷ್ಕರಿಸುತ್ತಿರುವುದಾಗಿ ಕಾಂಗ್ರೆಸ್‌ ಸ್ಪಷ್ಟಪಡಿಸಿದೆ.

ಈ ಬಗ್ಗೆ ಗುರುವಾರ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಧಾನಸಭೆಯಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರನ್ನು ಹೊರತುಪಡಿಸಿ ಬೇರೆಯವರು ಸಭೆ ನಡೆಸಿ, ಭಾಷಣ ಮಾಡಲು ಅವಕಾಶವಿಲ್ಲ. ಆದರೆ ರಾಜ್ಯ ಬಿಜೆಪಿ ಸರ್ಕಾರ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರನ್ನು ಕರೆಸಿ ಸಭೆ ಮಾಡುತ್ತಿರುವುದನ್ನು ನಾವು ಬಹಿಷ್ಕರಿಸುತ್ತಿದ್ದೇವೆ ಎಂದರು.

ಸಂಪ್ರದಾಯಕ್ಕೆ ವಿರುದ್ಧ:

ಸಿದ್ದರಾಮಯ್ಯ(Siddaramaiah) ಮಾತನಾಡಿ, ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರನ್ನು ಕರೆದು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿಸಲು ಮುಂದಾಗಿದ್ದಾರೆ. ಇದಕ್ಕೆ ಆಹ್ವಾನ ಪತ್ರಿಕೆಯನ್ನೂ ಮುದ್ರಣ ಮಾಡಿದ್ದಾರೆ. ಈ ಮೂಲಕ ಹೊಸ ಸಂಪ್ರದಾಯ ಹುಟ್ಟುಹಾಕಿದ್ದಾರೆ ಎಂದು ಕಿಡಿಕಾರಿದರು.

ಆರು ತಿಂಗಳ ನಂತರ ವಿಧಾನಮಂಡಲದ ಅಧಿವೇಶನ ಕರೆದಿದ್ದಾರೆ. ಜನಸಾಮಾನ್ಯರ ಸಮಸ್ಯೆಗಳು ಚರ್ಚೆಯಾಗಬೇಕಿತ್ತು. ಅಧಿವೇಶನವನ್ನು ಮತ್ತೊಂದು ವಾರ ವಿಸ್ತರಿಸುವಂತೆ ಮನವಿ ಮಾಡಿದರೂ ಕೇಳಿಲ್ಲ. ಸದನ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ನಾವು ಪ್ರಸ್ತಾಪಿಸಿದರೆ, ಸರ್ಕಾರ ಒಪ್ಪುತ್ತಿಲ್ಲ ನಾನೇನು ಮಾಡಲಿ ಎಂದು ಸ್ಪೀಕರ್‌ ಹೇಳುತ್ತಾರೆ. ಇದೀಗ ಕಲಾಪ ಸಲಹಾ ಸಮಿತಿಯಲ್ಲಿ ನಾವು ವಿರೋಧಿಸಿದ್ದರೂ ಜಂಟಿ ಅಧಿವೇಶನ ನಡೆಸುತ್ತಿದ್ದಾರೆ. ಲೋಕಸಭೆ ಸ್ಪೀಕರ್‌ ಜಂಟಿ ಸದನ ನಡೆಸಲು ಅವಕಾಶವಿಲ್ಲ. ಇದು ಸಂಪ್ರಾಯಕ್ಕೆ ವಿರುದ್ಧ ಎಂದು ಆರೋಪಿಸಿದರು.

ಕೆಟ್ಟ ಪದ್ಧತಿ ಸೃಷ್ಟಿ:

ಡಿ.ಕೆ.ಶಿವಕುಮಾರ್‌(DK Shivakumar) ಮಾತನಾಡಿ, ಅನೇಕ ವರ್ಷಗಳ ಇತಿಹಾಸ ಇರುವ ನಮ್ಮ ವಿಧಾನಸಭೆಯಲ್ಲಿ ರಾಜ್ಯ ಸರ್ಕಾರ ಕೆಟ್ಟಪದ್ಧತಿ ಸೃಷ್ಟಿಸಲು ಹೊರಟಿದೆ. ಈ ಮೂಲಕ ರಾಜಕೀಯ ವೇದಿಕೆ ಮಾಡಿಕೊಳ್ಳಲು ಮುಂದಾಗಿದೆ. ಸಂಸದೀಯ ಕಲಾಪ ಸಲಹಾ ಸಮಿತಿಯಲ್ಲಿ ಈ ವಿಚಾರ ಪ್ರಸ್ತಾಪವಾದಾಗ, ನಮ್ಮ ಶಾಸಕಾಂಗ ಪಕ್ಷದ ನಾಯಕರೂ ಆದ ವಿರೋಧ ಪಕ್ಷದ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಭೆ ಮೂಲಕ ನಿಮ್ಮ ಸರ್ಕಾರದ ಅವಧಿಯಲ್ಲಿ ಸಂಸದೀಯ ಮೌಲ್ಯ ಕುಸಿಯುತ್ತಿದೆ ಎಂದು ನೀವು ಒಪ್ಪಿಕೊಳ್ಳುತ್ತಿದ್ದೀರಿ. ಬ್ಯಾಂಕ್ವೆಟ್‌ ಹಾlfನಲ್ಲಿ ಮಾಡಿ ನಮ್ಮ ಅಭ್ಯಂತರವಿಲ್ಲ. ಆಹ್ವಾನ ಕೊಟ್ಟರೆ ನಾವೂ ಬರುತ್ತೇವೆ ಎಂದು ನಾವು ಸಲಹೆ ನೀಡಿದ್ದೆವು. ಸರ್ಕಾರ ಇದನ್ನು ಒಪ್ಪದೇ ವಿಧಾನಸಭೆಯಲ್ಲಿ ಮಾಡುತ್ತೇವೆ ಎಂದು ಪಟ್ಟು ಹಿಡಿದಿದೆ. ಹೀಗಾಗಿ ಬಹಿಷ್ಕರಿಸಲು ತೀರ್ಮಾನಿಸಿದ್ದೇವೆ ಎಂದರು.

ಎಲ್ಲರೂ ಹಾಜರಾಗಿ: ಸ್ಪೀಕರ್‌

ವಿಧಾನಸಭೆಯಲ್ಲಿ ಮಾತನಾಡಿದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಜಂಟಿ ಸದನ ಉದ್ದೇಶಿಸಿ ಮಾತನಾಡಲು ಲೋಕಸಭೆ ಸ್ಪೀಕರ್‌ ಆಗಮಿಸುತ್ತಿದ್ದಾರೆ. ಹೀಗಾಗಿ ಎಲ್ಲರೂ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಮಧ್ಯಾಹ್ನ ವಿಧಾನಸೌಧದಲ್ಲೇ ಸದಸ್ಯರಿಗೆ ಊಟದ ವ್ಯವಸ್ಥೆಯಿದ್ದು, ಮಧ್ಯಾಹ್ನ 2.15ಕ್ಕೆ ಸದನ ಆರಂಭವಾಗಲಿದೆ. 2.30ಕ್ಕೆ ಲೋಕಸಭೆ ಸ್ಪೀಕರ್‌ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಕಲಾಪ ಬಹಿಷ್ಕಾರ ನಿರ್ಧಾರ ಸ್ಪೀಕರ್‌ ಭಾಷಣ ಏಕೆ?

ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸದೀಯ ಮೌಲ್ಯಗಳ ರಕ್ಷಣೆ’ ಎಂಬ ವಿಷಯವಾಗಿ ಲೋಕಸಭೆ ಸ್ಪೀಕರ್‌ ಮಾತನಾಡಲಿದ್ದಾರೆ. ಇಂದು ಮಧ್ಯಾಹ್ನ 2.30ರಿಂದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಕಾಂಗ್ರೆಸ್‌ ವಾದವೇನು?

ರಾಷ್ಟ್ರಪತಿಗಳು, ರಾಜ್ಯಪಾಲರು ಮಾತ್ರ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುತ್ತಾರೆ. ಸರ್ಕಾರ ಲೋಕಸಭೆ ಸ್ಪೀಕರ್‌ರನ್ನು ಕರೆಸುತ್ತಿರುವುದು ಕೆಟ್ಟಸಂಪ್ರದಾಯ. ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಸಭೆ ನಡೆಸಲು ಹೇಳಿದ್ದರೂ ಸರ್ಕಾರ ಕೇಳಿಲ್ಲ. ಹೀಗಾಗಿ ಕಲಾಪ ಬಹಿಷ್ಕಾರ.

Follow Us:
Download App:
  • android
  • ios