ನವದೆಹಲಿ(ಡಿ.31): ರಕ್ಷಣಾ ಸಿಬ್ಬಂದಿ ಮುಖ್ಯಸ್ಥ(ಸಿಡಿಎಸ್) ಹುದ್ದೆ ಸೃಷ್ಟಿಗೆ ಪ್ರತಿಪಕ್ಷ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಪ್ಪುದಾರಿಯಲ್ಲಿ ಹೆಜ್ಜೆಯನ್ನಿಟ್ಟಿದೆ ಎಂದು ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ.

ಈ ಕುರಿತು ಟ್ವಿಟ್ ಮಾಡಿರುವ ಕಾಂಗ್ರೆಸ್ ವಕ್ತಾರ ಮನೀಶ್ ತೆವಾರಿ, ಸಿಡಿಎಸ್ ನೇಮಕ ಒಂದು ತಪ್ಪು ನಿರ್ಧಾರ ಎಂದು ಹೇಳಿದ್ದಾರೆ. ಸೇನೆಯ ಮೂರೂ ಪಡೆಗಳಿಗೆ ಮುಖ್ಯಸ್ಥರಿರುವಾಗ ಹೊಸದೊಂದು ಹುದ್ದೆಯ ಸೃಷ್ಟಿಯ ಔಚಿತ್ಯ ಏನಿತ್ತು ಎಂದು ತಿವಾರಿ ಪ್ರಶ್ನಿಸಿದ್ದಾರೆ.

ಮಿಲಿಟರಿಗೆ ಹೊಸ ಬಾಸ್‌: ಬಿಪಿನ್ ರಾವತ್ ದೇಶದ ಮೊದಲ CDS!

ಕೇಂದ್ರ ಸರ್ಕಾರದ ಈ ನಿರ್ಧಾರ ಭವಿಷ್ಯದಲ್ಲಿ ಹಲವು ಸಮಸ್ಯೆಗಳನ್ನು ಸೃಷ್ಟಿಸಲಿದೆ ಎಂದು ಮನೀಶ್ ತೆವಾರಿ ಎಚ್ಚರಿಸಿದ್ದಾರೆ. ಸಿಡಿಎಸ್ ನೇಮಕದ ಮೂಲಕ ಕೇಂದ್ರ ಸರ್ಕಾರದ ತಪ್ಪು ಹೆಜ್ಜೆಯನ್ನಿಟ್ಟಿದೆ ಎಂದು ಅವರು ಹರಿಹಾಯ್ದಿದ್ದಾರೆ.

ಕಾರ್ಗಿಲ್ ಯುದ್ಧದ ಬಳಿಕ ಸೇನೆಯ ಮೂರೂ ಪಡೆಗಳಲ್ಲಿ ಮಸನ್ವಯ ಸಾಧಿಸಲು ಸಿಡಿಎಸ್ ಹುದ್ದೆ ಸೃಷ್ಟಿಸುವ ಕುರಿತು ಚಿಂತನೆ ಪ್ರಾರಂಭವಾಗಿತ್ತು. ಯುಪಿಎ ಅವಧಿಯಲ್ಲೂ ಈ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.