Asianet Suvarna News Asianet Suvarna News

ಏಪ್ರಿಲ್‌ನಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಗೆ ಚುನಾವಣೆ: ರಾಹುಲ್‌ ಒಪ್ಪದಿದ್ದರೆ ಪ್ರಿಯಾಂಕಾ ಸ್ಪರ್ಧೆ?

ಚುನಾವಣೆಗಳಲ್ಲಿ ಮೇಲಿಂದ ಮೇಲೆ ಸೋಲುಣ್ಣುತ್ತಿರುವ ಹಾಗೂ ಆಂತರಿಕ ಬಂಡಾಯದಿಂದ ನಲುಗುತ್ತಿರುವ ಕಾಂಗ್ರೆಸ್‌| ಏಪ್ರಿಲ್‌ನಲ್ಲಿ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಹುದ್ದೆಗೆ ಚುನಾವಣೆ?| ರಾಹುಲ್‌ ಒಪ್ಪದಿದ್ದರೆ ಪ್ರಿಯಾಂಕಾ ಸ್ಪರ್ಧೆ?

Congress President Elections In April Rahul Gandhi Unwilling Priyanka May Contest pod
Author
Bangalore, First Published Dec 17, 2020, 12:57 PM IST

ನವದೆಹಲಿ(ಡಿ.17): ಚುನಾವಣೆಗಳಲ್ಲಿ ಮೇಲಿಂದ ಮೇಲೆ ಸೋಲುಣ್ಣುತ್ತಿರುವ ಹಾಗೂ ಆಂತರಿಕ ಬಂಡಾಯದಿಂದ ನಲುಗುತ್ತಿರುವ ಕಾಂಗ್ರೆಸ್‌ ಪಕ್ಷಕ್ಕೆ ಹೊಸ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡಲು ಏಪ್ರಿಲ್‌ ತಿಂಗಳಲ್ಲಿ ಆಂತರಿಕ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಅನಾರೋಗ್ಯವಿದ್ದರೂ ಅನಿವಾರ್ಯ ಕಾರಣಗಳಿಂದ ಹಂಗಾಮಿ ಅಧ್ಯಕ್ಷೆಯಾಗಿ ಮುಂದುವರೆಯುತ್ತಿರುವ ಸೋನಿಯಾ ಗಾಂಧಿ ಜಾಗಕ್ಕೆ ಹೊಸ ಅಧ್ಯಕ್ಷರನ್ನು ಆಂತರಿಕ ಚುನಾವಣೆಯ ಮೂಲಕ ಆಯ್ಕೆ ಮಾಡಲು ಪಕ್ಷ ಒಲವು ವ್ಯಕ್ತಪಡಿಸಿದೆ ಎಂದು ಮೂಲಗಳು ಹೇಳಿವೆ.

ಈ ಚುನಾವಣೆಯಲ್ಲಿ ಮಾಜಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸ್ಪರ್ಧಿಸಲು ಒಪ್ಪದಿದ್ದರೆ ಅವರ ಸೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಆದರೆ, ಪಕ್ಷದ ಪರಮೋಚ್ಚ ನಿರ್ಣಾಯಕ ಸಮಿತಿಯಾಗಿರುವ ‘ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ’ (ಸಿಡಬ್ಲ್ಯುಸಿ)ಗೆ ಸದಸ್ಯರನ್ನು ಆಯ್ಕೆ ಮಾಡಲು ಆಂತರಿಕ ಚುನಾವಣೆ ನಡೆಸಬೇಕೋ ಬೇಡವೋ ಎಂಬ ಬಗ್ಗೆ ಇನ್ನೂ ಗೊಂದಲಗಳಿವೆ.

ಕಳೆದ ಆಗಸ್ಟ್‌ನಲ್ಲಷ್ಟೇ ಈ ಸಮಿತಿಯನ್ನು ಪುನಾರಚಿಸಲಾಗಿದ್ದರೂ, ಪಕ್ಷದ 23 ಹಿರಿಯ ನಾಯಕರು ಎಐಸಿಸಿಗೆ ಪೂರ್ಣಾವಧಿ ಅಧ್ಯಕ್ಷರನ್ನು ನೇಮಿಸಬೇಕು ಹಾಗೂ ಸಿಡಬ್ಲ್ಯುಸಿಗೆ ಚುನಾವಣೆ ಮೂಲಕ ಸದಸ್ಯರನ್ನು ಆಯ್ಕೆ ಮಾಡಬೇಕು ಎಂದು ಪತ್ರ ಬರೆದು ದೊಡ್ಡ ವಿವಾದ ಏರ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಸಿಡಬ್ಲ್ಯುಸಿಗೆ ಆಂತರಿಕ ಚುನಾವಣೆ ನಡೆಸಲಾಗುತ್ತದೆಯೇ ಇಲ್ಲವೇ ಎಂಬುದು ಕುತೂಹಲ ಮೂಡಿಸಿದೆ. ಎಐಸಿಸಿ ಚುನಾವಣಾ ವಿಭಾಗದ ಮುಖ್ಯಸ್ಥರಾಗಿರುವ ಮಧುಸೂದನ್‌ ಮಿಸ್ತ್ರಿ ಅವರ ಸಮಿತಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.

ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಹೀನಾಯವಾಗಿ ಸೋತ ನಂತರ ಪಕ್ಷಕ್ಕೆ ಆದಷ್ಟುಬೇಗ ಪೂರ್ಣಾವಧಿ ಹೊಸ ಅಧ್ಯಕ್ಷರು ಬೇಕೆಂಬ ಕೂಗು ಜೋರಾಗಿದೆ. ಮುಂಬರುವ ಪಶ್ಚಿಮ ಬಂಗಾಳ, ತಮಿಳುನಾಡು ಹಾಗೂ ಅಸ್ಸಾಂ ವಿಧಾನಸಭೆ ಚುನಾವಣೆ ನಂತರ ಅಧ್ಯಕ್ಷರ ಆಯ್ಕೆಗೆ ಆಂತರಿಕ ಚುನಾವಣೆ ನಡೆಸಬೇಕೆಂಬ ಚಿಂತನೆಯನ್ನು ಪಕ್ಷ ಹೊಂದಿದೆ.

Follow Us:
Download App:
  • android
  • ios