ಸಂಸತ್ತಿನಲ್ಲಿ ಚಕ್ರವ್ಯೂಹ ಹೇಳಿಕೆ ನೀಡಿದ ನಂತರ ನನ್ನ ಮೇಲೆ ಜಾರಿ  ಇ.ಡಿ ದಾಳಿ ನಡೆಸಲು ಸಿದ್ಧತೆ ನಡೆದಿದೆ. ಇ.ಡಿ. ಒಳಗಿನವರೇ ನನಗೆ ಮಾಹಿತಿ ನೀಡಿದ್ದಾರೆ ಎಂದು ವಿಪಕ್ಷ ನಾಯಕ ರಾಹುಲ್‌ ಗಾಂಧಿ ತಿಳಿಸಿದ್ದಾರೆ.

ನವದೆಹಲಿ (ಆ.3): ಸಂಸತ್ತಿನಲ್ಲಿ ಚಕ್ರವ್ಯೂಹ ಹೇಳಿಕೆ ನೀಡಿದ ನಂತರ ನನ್ನ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.)ದ ದಾಳಿಗೆ ಸಿದ್ಧತೆ ನಡೆದಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

‘ಸಂಸತ್ತಿನಲ್ಲಿ ನಾನು ನೀಡಿದ ಚಕ್ರವ್ಯೂಹ ಹೇಳಿಕೆಯ ನಂತರ ಇ.ಡಿ. ದಾಳಿಯ ಸಿದ್ಧತೆ ಆರಂಭವಾಗಿದೆ. ಇ.ಡಿ. ನಿರ್ದೇಶಕರೇ, ನಾನು ತೆರೆದ ಬಾಹುಗಳೊಂದಿಗೆ ಕಾಯುತ್ತಿದ್ದೇನೆ. ಟೀ ಮತ್ತು ಬಿಸ್ಕತ್‌ ನನ್ನ ಲೆಕ್ಕದಲ್ಲಿ’ ಎಂದು ರಾಹುಲ್‌ ‘ಎಕ್ಸ್‌’ (ಈ ಹಿಂದಿನ ಟ್ವಿಟ್ಟರ್ ನಲ್ಲಿ) ಬರೆದುಕೊಂಡಿದ್ದಾರೆ.

ವಯನಾಡು ದುರಂತದಲ್ಲಿ ನಲುಗಿದ ಕುಟುಂಬಕ್ಕೆ ರಾತ್ರಿ ಇಡೀ ಆಶ್ರಯ ನೀಡಿ ಕಾಪಾಡಿದ ಕಾಡಾನೆ!

‘ಖಂಡಿತ ಇಬ್ಬರಲ್ಲಿ ಒಬ್ಬರಿಗೆ ನನ್ನ ಚಕ್ರವ್ಯೂಹ ಭಾಷಣ ಇಷ್ಟವಾಗಿರುವುದಿಲ್ಲ. ಇ.ಡಿ. ಒಳಗಿನವರೇ ನನ್ನ ವಿರುದ್ಧ ದಾಳಿಯ ಸಿದ್ಧತೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ’ ಎಂದೂ ತಿಳಿಸಿದ್ದಾರೆ.

ಸೋಮವಾರ ಲೋಕಸಭೆಯಲ್ಲಿ ಮಾತನಾಡುವಾಗ ರಾಹುಲ್‌ ಗಾಂಧಿ, ‘ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಆರು ಜನರು ಇಡೀ ದೇಶವನ್ನು ಚಕ್ರವ್ಯೂಹದಲ್ಲಿ ಸಿಲುಕಿಸಿದ್ದಾರೆ’ ಎಂದು ಆರೋಪಿಸಿದ್ದರು.

ಬಾಹ್ಯಾಕಾಶ ಯಾನಕ್ಕೆ ಇಬ್ಬರ ಹೆಸರು ಖಚಿತ ಪಡಿಸಿದ ಇಸ್ರೋ, ಒಪ್ಪಂದಕ್ಕೆ ಸಹಿ ಹಾಕಿದ ಅಮೆರಿಕದ ಕಂಪೆನಿ

ರಾಹುಲ್ ಚಕ್ರವ್ಯೂಹದ ಭಾಷಣ ಸಾರಾಂಶ:
 ‘ಪ್ರಧಾನಿ ನರೇಂದ್ರ ಮೋದಿ ಹೆಣೆದ ಆಧುನಿಕ ಚಕ್ರವ್ಯೂಹದಲ್ಲಿ ಭಾರತ ಇಂದು ಸಿಲುಕಿದೆ. ಮಹಾಭಾರತದ ಯುದ್ಧದಲ್ಲಿ ಚಕ್ರವ್ಯೂಹದಲ್ಲಿ ಸಿಲುಕಿದ ಅಭಿಮನ್ಯುವಿನ ಜಾಗದಲ್ಲಿ ಇಂದು ಭಾರತದ ಯುವಕರು, ಮಹಿಳೆಯರು, ರೈತರು ಮತ್ತು ಸಣ್ಣ ಉದ್ಯಮಿಗಳು ಇದ್ದಾರೆ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದರು. ಅವರ ಮಾತು ಬಿಜೆಪಿಗರ ಆಕ್ರೋಶಕ್ಕೆ ತುತ್ತಾಗಿದ್ದು, ಆಡಳಿತ ಪಕ್ಷದ ಸದಸ್ಯರು ಲೋಕಸಭೆಯಲ್ಲಿ ಪ್ರತಿಭಟನೆ ನಡೆಸಿದರು.

ಕಳೆದ ವಾರ ಕೇಂದ್ರ ಬಜೆಟ್‌ ಮೇಲಿನ ಚರ್ಚೆಯಲ್ಲಿ ಮಾತನಾಡಿದ ರಾಹುಲ್‌, ಚಕ್ರವ್ಯೂಹವನ್ನು ಪದ್ಮವ್ಯೂಹ ಎಂದೂ ಕರೆಯುತ್ತಾರೆ. ಯುದ್ಧದಲ್ಲಿ ಸೇನಾಪಡೆಯನ್ನು ಕಮಲದ ಆಕಾರದಲ್ಲಿ ನಿಯೋಜಿಸಿ ಚಕ್ರವ್ಯೂಹ ರಚಿಸಲಾಗುತ್ತದೆ. ಈಗ 21ನೇ ಶತಮಾನದ ಚಕ್ರವ್ಯೂಹವನ್ನೂ ಕಮಲದ ಆಕಾರದಲ್ಲೇ ರಚಿಸಲಾಗಿದೆ. ಪ್ರಧಾನಿ ಮೋದಿ ತಮ್ಮ ಎದೆಯ ಮೇಲೆ ಕಮಲವನ್ನು ಧರಿಸುತ್ತಾರೆ ಎಂದು ಕಿಡಿಕಾರಿದ್ದರು.

6 ಜನರ ವ್ಯೂಹ:
ಮಹಾಭಾರತದ ಚಕ್ರವ್ಯೂಹವನ್ನು ಆರು ಜನರು ಸೇರಿ ರಚಿಸಿದ್ದರು. ಈಗಿನ ಚಕ್ರವ್ಯೂಹವನ್ನೂ ಮೋದಿ ನೇತೃತ್ವದಲ್ಲಿ ಆರು ಜನರೇ ರಚಿಸಿದ್ದಾರೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಮತ್ತು ಇಬ್ಬರು ಉದ್ಯಮಿಗಳಾದ ರಿಲಯನ್ಸ್‌ನ ಅಂಬಾನಿ ಮತ್ತು ಅದಾನಿ ಗ್ರೂಪ್‌ನ ಅದಾನಿ ಅವರೇ ಆ ಆರು ಜನರು ಎಂದು ರಾಹುಲ್‌ ಹೇಳಿದ್ದರು.

ಚಕ್ರವ್ಯೂಹದ ಹಿಂದೆ 3 ದುಷ್ಟಶಕ್ತಿ:
ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಿದ ಆಧುನಿಕ ಚಕ್ರವ್ಯೂಹದ ಹಿಂದೆ ಮೂರು ಶಕ್ತಿಗಳಿವೆ. ಒಂದು- ಏಕಸ್ವಾಮ್ಯ. ಇಬ್ಬರು ಉದ್ಯಮಿಗಳ ಕೈಗೆ ಇಡೀ ದೇಶದ ಸಂಪತ್ತನ್ನು ನೀಡುವ ಮೂಲಕ ಹಣಕಾಸು ಬಲವನ್ನು ನಿಯಂತ್ರಿಸುವುದು. ಎರಡು- ಸಿಬಿಐ, ಇ.ಡಿ., ಆದಾಯ ತೆರಿಗೆ ಮುಂತಾದ ಸಂಸ್ಥೆಗಳನ್ನು ನಿಯಂತ್ರಿಸುವ ಮೂಲಕ ತಮಗೆ ಆಗದವರನ್ನು ನಿಗ್ರಹಿಸುವುದು. ಮೂರು- ರಾಜಕೀಯ ಶಕ್ತಿ. ಈ ಮೂರು ಶಕ್ತಿಗಳು ಮೋದಿಯ ಚಕ್ರವ್ಯೂಹದ ಹಿಂದಿವೆ ಮತ್ತು ದೇಶವನ್ನು ನಿರ್ನಾಮ ಮಾಡುತ್ತಿವೆ ಎಂದು ಆರೋಪಿಸಿದ್ದರು. ‘ದೇಶದ ಯುವಕರನ್ನು ಅಗ್ನಿವೀರ ಚಕ್ರವ್ಯೂಹದಲ್ಲಿ ಸಿಲುಕಿಸಿದ್ದೀರಿ. ನಿಮ್ಮ ಜಾಲವು ಕೋಟ್ಯಂತರ ಜನರಿಗೆ ತೊಂದರೆ ಉಂಟುಮಾಡುತ್ತಿದೆ. ನಾವು ಈ ಚಕ್ರವ್ಯೂಹವನ್ನು ಭೇದಿಸುತ್ತೇವೆ. ಆ ಭೀತಿಯಿಂದಲೇ ನೀವು ಜಾತಿ ಗಣತಿ ನಡೆಸುತ್ತಿಲ್ಲ’ ಮೋದಿ ಉದ್ದೇಶಿಸಿ ರಾಹುಲ್‌ ಹೇಳಿದ್ದರು.