ಅಯೋಧ್ಯೆ ತೀರ್ಪು ಪಾಕ್ ಸುಪ್ರೀಂಗೆ ಹೋಲಿಕೆ; ನ್ಯಾಷನಲ್ ಹೆರಾಲ್ಡ್‌ನಿಂದ ವಿವಾದ
ಅಯೋಧ್ಯಾ ತೀರ್ಪು ಹೊರ ಬಿದ್ದ ಬಳಿಕ ಕಾಂಗ್ರೆಸ್ ಮುಖವಾಣಿ 'ನ್ಯಾಷನಲ್ ಹೆರಾಲ್ಡ್' ಪ್ರಕಟಿಸಿದ ಲೇಖನವೊಂದು ಆಕ್ರೋಶಕ್ಕೆ ಕಾರಣವಾಗಿದೆ. ಅಯೋಧ್ಯೆ ಪಾಕ್ ಸುಪ್ರೀಂಕೋರ್ಟನ್ನು ಜ್ಞಾಪಿಸುತ್ತದೆ ಎಂದಿದ್ದು ಆಕ್ರೋಶಕ್ಕೆ ಕಾರಣವಾಗಿದೆ.
ನವದೆಹಲಿ (ನ. 11): ಅಯೋಧ್ಯೆ ವಿವಾದದ ಕುರಿತ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖವಾಣಿ ಪತ್ರಿಕೆ ‘ನ್ಯಾಷನಲ್ ಹೆರಾಲ್ಡ್’ ಪ್ರಕಟಿಸಿದ ಲೇಖನವೊಂದು ವಿವಾದಕ್ಕೆ ಕಾರಣವಾಗಿದೆ.
ಈ ಲೇಖನವನ್ನು ‘ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾ’ ಸಂಸ್ಥೆಯ ಕಾರ್ಯ ನಿರ್ವಾ ಹಕ ನಿರ್ದೇಶಕ ಆಕಾರ್ ಪಟೇಲ್ ಬರೆದಿದ್ದು, ‘ಅಯೋಧ್ಯೆ ತೀರ್ಪು ಪಾಕಿಸ್ತಾನದ ಸುಪ್ರೀಂ ಕೋರ್ಟನ್ನು ಜ್ಞಾಪಿಸುತ್ತದೆ’ ಎಂದು ಟೀಕಿಸಿದ್ದಾರೆ.
ಅಲ್ಲದೆ, ‘ಭಾರತದ ಸುಪ್ರೀಂ ಕೋರ್ಟ್ ತೀರ್ಪು ವಿಶ್ವ ಹಿಂದೂ ಪರಿಷತ್ತು ಹಾಗೂ ಬಿಜೆಪಿ ಬಯಸಿದಂತೆಯೇ ಬಂದಿದೆ’ ಎಂದೂ ಆಕಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಲೇಖನ ವಿವಾದಕ್ಕೀಡಾಗುತ್ತಿದ್ದಂತೆಯೇ ಇದರ ಪ್ರಕಟಣೆಗೆ ಹೆರಾಲ್ಡ್ ಪತ್ರಿಕೆ ಕ್ಷಮೆಯಾಚಿಸಿದೆ ಹಾಗೂ ವೆಬ್‌ಸೈಟ್‌ನಿಂದ ಲೇಖನ ತೆಗೆದುಹಾಕಿದೆ. ಆದರೆ ‘ಲೇಖನದಲ್ಲಿನ ನಿಲುವು ಪತ್ರಿಕೆಯದ್ದಲ್ಲ. ಲೇಖಕರ ನಿಲುವು’ ಎಂದು ಅದು ಸ್ಪಷ್ಟಪಡಿಸಿದೆ.
ಈ ನಡುವೆ ಇಂಥ ಆಘಾತಕಾರಿ ಲೇಖನ ಸಂಬಂಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕ್ಷಮೆಯಾಚಿ ಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಲೇಖನದಲ್ಲೇನಿದೆ?:
‘1954 ರಲ್ಲಿ ಪಾಕಿಸ್ತಾನ ಅಸೆಂಬ್ಲಿಯನ್ನು ಅಲ್ಲಿನ ಗವರ್ನರ್ ಜನರಲ್ ಗುಲಾಂ ಮೊಹಮ್ಮದ್ ಅವರು ಕಾನೂನುಬಾ ಹಿರವಾಗಿ ವಿಸರ್ಜಿಸಿದ್ದರು. ಸಂವಿಧಾನ ರಚನೆ ವಿಳಂಬ ಆರೋಪ ಹೊರಿಸಿ ಗವರ್ನರ್ ಅವರು ಈ ನಿರ್ಧಾರ ಕೈಗೊಂಡಿದ್ದರು. ಬಳಿಕ ಈ ನಿರ್ಧಾರವನ್ನು ಪಾಕ್ ಸುಪ್ರೀಂ ಕೋರ್ಟ್ ಅನುಮೋದಿಸಿತ್ತು. ಪಾಕ್ ಸುಪ್ರೀಂ ಕೋರ್ಟ್ ಈ ತೀರ್ಪನ್ನು ಈಗ ಅಯೋಧ್ಯೆ ತೀರ್ಪು ನೆನಪಿಸುತ್ತದೆ’ ಎಂದು ಆಕಾರ್ ವ್ಯಂಗ್ಯವಾಡಿದ್ದಾರೆ.
‘ಅಯೋಧ್ಯೆಯ ಸಂಪೂರ್ಣ ವಿವಾದಿತ ಜಮೀನನ್ನು ಸುಪ್ರೀಂ ಕೋರ್ಟು, ಮಂದಿರಕ್ಕೆ ಏಕೆ ಹಸ್ತಾಂತರಿಸಿದೆಯೋ ಗೊತ್ತಿಲ್ಲ. ವಿವಾದಿತ ಜಮೀನಿನಲ್ಲಿ ಮಂದಿರವನ್ನು ಒಡೆದು ಬಾಬ್ರಿ ಮಸೀದಿ ನಿರ್ಮಿಸಲಾಯಿತು ಎಂಬುದು ಕೂಡ ಖಚಿತವಿಲ್ಲ. ಮಸೀದಿ ಧ್ವಂಸವನ್ನು ಕೋರ್ಟ್ ಟೀಕಿಸಿದೆ. ಆದರೆ ಧ್ವಂಸ ಮಾಡಿದವರಿಗೇ ಜಮೀನನ್ನು ಹಸ್ತಾಂತರಿಸಿದೆ. ವಿಎಚ್‌ಪಿ ಹಾಗೂ ಬಿಜೆಪಿ ಏನು ಬಯಸಿದ್ದವೋ ಅದನ್ನು ಕೋರ್ಟು ಕಾನೂನು ಪ್ರಕಾರ ಮಾಡಿದೆ’ ಎಂದು ಆಕಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.