ನವದೆಹಲಿ(ಫೆ.07): ದೇಶದ ಪ್ರಧಾನಿ ಶೈಕ್ಷಣಿಕ ಸಂಸ್ಥೆಗಳಿಂದ ಪದವಿ ಪಡೆದಿರದೇ, ಕೇವಲ ವಾಟ್ಸಪ್ ಎಂಬ ವಿಶ್ವವಿದ್ಯಾಲಯದಿಂದ ಪದವಿ ಪಡೆದಾಗ ತಪ್ಪುಗಳಾಗುವುದು ಸಹಜ ಎಂದು ಕಾಂಗ್ರೆಸ್ ಪ್ರಧಾನಿ ಮೋದಿ ಕುರಿತು ವ್ಯಂಗ್ಯವಾಡಿದೆ.

ಅನಧಿಕೃತ ವೆಬ್‌ಸೈಟ್‌ವೊಂದರ ಮಾಹಿತಿ ಆಧರಿಸಿ ನಿನ್ನೆ(ಫೆ.06) ಲೋಕಸಭೆಯಲ್ಲಿ ಪ್ರಧಾನಿ ಮೋದಿ ಜಮ್ಮು ಮತ್ತು ಕಾಶ್ಮೀರದ ರಾಜಕೀಯ ನಾಯಕರು ನೀಡಿದ್ದಾರೆ ಎನ್ನಲಾದ ಹೇಳಿಕೆಗಳನ್ನು ಉಲ್ಲೇಖಿಸಿದ್ದರು.

ಆದರೆ ಈ ವೆಬ್‌ಸೈಟ್‌ನಲ್ಲಿರುವ ಮಾಹಿತಿ ಸತ್ಯಕ್ಕೆ ದೂರ ಎಂಬುದು ಸಾಬೀತಾಗಿದ್ದು, ಅನಧಿಕೃತ ವೆಬ್‌ಸೈಟ್ ಮಾಹಿತಿ ಮೊರೆ ಹೋಗಿದ್ದಕ್ಕೆ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.

FackingNews.com ಎಂಬ ವೆಬ್‌ಸೈಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜಕೀಯ ನಾಯಕರು ನೀಡಿದ್ದಾರೆ ಎನ್ನಲಾದ ಹೇಳಿಕೆಗಳನ್ನು ಅಪ್ಲೋಡ್ ಮಾಡಲಾಗಿತ್ತು. ಇದರಲ್ಲಿ ಕಣಿವೆಯ ರಾಜಕೀಯ ನಾಯಕರು ನೀಡಿದ್ದಾರೆ ಎನ್ನಲಾದ ವಿವಾದಾತ್ಮಕ ಹೇಳಿಕೆಗಳಿದ್ದವು.

ಜಮ್ಮು ಮತ್ತು ಕಾಶ್ಮೀರಕ್ಕೆ ಭಾರತ ಮೋಸ ಮಾಡಿದ್ದು. 1947ರಲ್ಲಿ ನಾವು ತಪ್ಪು ಸಂಘ ಸೇರಿದ್ದಾಗಿ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಹೇಳಿದ್ದಾರೆ ಎಂದು ವೆಬ್‌ಸೈಟ್‌ ಹೇಳಿತ್ತು. ಅಲ್ಲದೇ ವಿಶೇಷ ಸ್ಥಾನಮಾನ ರದ್ದತಿಯಿಂದ ಕಣಿವೆ ಶೀಘ್ರದಲ್ಲೇ ಭಾರತದಿಂದ ಬೇರ್ಪಡಲಿದೆ ಎಂದು ಮಾಜಿ ಸಿಎಂ ಓಮರ್ ಅಬ್ದುಲ್ಲಾ ಹೇಳಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು.

ಪ್ರಧಾನಿ ಮೋದಿ ನಿನ್ನೆ ಲೋಕಸಭೆಯಲ್ಲಿ ವಿಶೇಷ ಸ್ಥಾನಮಾನ ರದ್ದತಿ ಸಮರ್ಥಿಸಿಕೊಳ್ಳುತ್ತಾ, ಈ ವೆಬ್‌ಸೈಟ್ ಮಾಹಿತಿಯನ್ನು ಉಲ್ಲೇಖಿಸಿದ್ದರು. ಭಾರತ ಇಂತಹ ಹೇಳಿಕೆಗಳನ್ನು ಸಹಿಸಿಕೊಳ್ಳಬೇಕೆ ಎಂದು ಮೋದಿ ಪ್ರಶ್ನಿಸಿದ್ದರು.

ಆದರೆ ಈ ವೆಬ್‌ಸೈಟ್ ಅನಧಿಕೃತ ಎಂದು ಹೇಳಿರುವ ಕಾಂಗ್ರೆಸ್, ವಾಟ್ಸಪ್ ವಿವಿ ಡಿಗ್ರ ಹೊಂದಿರುವ ಪ್ರಧಾನಿ ಸುಳ್ಳು ಸುದ್ದಿ ನಂಬುವುದರಲ್ಲಿ ಆಶ್ವರ್ಯವೇನಿಲ್ಲ ಎಂದು ವ್ಯಂಗ್ಯಭರಿತ ಟ್ವೀಟ್ ಮಾಡಿದೆ.