ವಿಧಾನಸಭೆಯಲ್ಲಿ ಶಾಸಕರು ಅಶಿಸ್ತಿನಿಂದ ವರ್ತಿಸಿದರೆ, ಗದ್ದಲ ಎಬ್ಬಿಸಿದರೆ ಅಮಾನತು ಶಿಕ್ಷೆಗೆ ಗುರಿ| ವಿಧಾನಸಭೆಗೆ ಟಿ-ಶರ್ಟ್‌ ಧರಿಸಿ ಬಂದ ಶಾಸಕನನ್ನು ಹೊರಗಟ್ಟಿದ ಸ್ಪೀಕರ್‌!

ಗಾಂಧಿನಗರ(ಮಾ.16): ವಿಧಾನಸಭೆಯಲ್ಲಿ ಶಾಸಕರು ಅಶಿಸ್ತಿನಿಂದ ವರ್ತಿಸಿದರೆ, ಗದ್ದಲ ಎಬ್ಬಿಸಿದರೆ ಅಮಾನತು ಶಿಕ್ಷೆಗೆ ಗುರಿಯಾಗುವುದು ಹೊಸದಲ್ಲ. ಆದರೆ, ಟಿ- ಶರ್ಟ್‌ ಧರಿಸಿ ಬಂದ ಕಾರಣಕ್ಕೆ ಸದನದ ಕಲಾಪದಿಂದ ಶಾಸಕರೊಬ್ಬರನ್ನು ಸ್ಪೀಕರ್‌ ಹೊರಗೆ ಕಳುಹಿಸಿರುವ ಘಟನೆ ಗುಜರಾತ್‌ ವಿಧಾನಸಭೆಯಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾಂಗ್ರೆಸ್‌ ಶಾಸಕ ವಿಮಲ್‌ ಚೂಡಸಮ ಎನ್ನುವವರು ಸೋಮವಾರ ಸದನಕ್ಕೆ ಟಿ- ಶರ್ಟ್‌ ಧರಿಸಿ ಆಗಮಿಸಿದ್ದರು. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್‌ ರಾಜೇಂದ್ರ ತ್ರಿವೇದಿ, ಶಾಸಕನನ್ನು ಸದನದಿಂದ ಹೊರಗೆ ಕಳುಹಿಸಿದ್ದಾರೆ.

ಶಾಸಕರಾದವರು ಶರ್ಟ್‌ ಅಥವಾ ಕುರ್ತಾ ಧರಿಸಬೇಕು ಮತ್ತು ಸದನದ ಗೌರವ ಮತ್ತು ಮರ್ಯಾದೆಯನ್ನು ಕಾಪಾಡಬೇಕು. ಈ ಬಗ್ಗೆ ಮೊದಲೇ ತಿಳಿಸಿದ್ದ ಹೊರತಾಗಿಯೂ ಚೂಡಸಮ ಶಿಸ್ತನ್ನು ಉಲ್ಲಂಘಿಸಿದ್ದಾರೆ ಎಂದು ಸ್ಪೀಕರ್‌ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.