ಪುದುಚೇರಿ(ಫೆ.22): ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಕಾಂಗ್ರೆಸ್‌ಗೆ ಬಹುದೊಡ್ಡ ಶಾಕ್ ಲಭಿಸಿದೆ. ಇಲ್ಲಿನ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಸೋಮವಾರ ಪತನಗೊಂಡಿದೆ. ಮುಖ್ಯಮಂತ್ರಿ ನಾರಾಯಣಸ್ವಾಮಿ ಬಹುಮತ ಸಾಬೀತುಪಡಿಸುವಲ್ಲಿ ವಿಫಲಗೊಂಡಿದ್ದಾರೆ. ಹೀಗಿರುವಾಗಲೇ ಅತ್ತ ವಿಶ್ವಾಸಮತದ ಬಳಿಕ ಕಾಂಗ್ರೆಸ್‌ ಶಾಸಕರು ಸದನದಿಂದ ವಾಕೌಟ್ ಮಾಡಿದ್ದಾರೆ. ಇನ್ನು ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಮುಖ್ಯಮಂತ್ರಿ ನಾರಾಯಣಸ್ವಾಮಿ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ನೀಡಿದ್ದಾರೆ.

ವಿಶ್ವಾಸ ಮತ ಯಾಚನೆಗೂ ಮೊದಲು ಮಾತನಾಡಿದ ಮುಖ್ಯಮಮತ್ರಿ ನಾರಾಯಣಸ್ವಾಮಿ ಶಾಸಕರು ಪಕ್ಷದ ಪರ ಪ್ರಾಮಾಣಿಕರಾಗಿರಬೇಕು. ರಾಜೀನಾಮೆ ನೀಡಿದ ಶಾಸಕರು ಜನರೆದುರು ಯಾವ ಮುಖ ಹಿಡಿದು ನಿಲ್ಲುತ್ತಾರೆ? ಯಾಕೆಂದರೆ ಇವರೆಲ್ಲರನ್ನೂ ಮತದಾರರು ಅವಕಾಶವಾದಿಗಳೆನ್ನುತ್ತಾರೆ. ಶೀಘ್ರದಲ್ಲಿ ಇಲ್ಲಿನ ಜನರು ಬಿಜೆಪಿ ಹಾಗೂ AIADMKಗೆ ಬುದ್ಧಿ ಕಲಿಸುತ್ತಾರೆ ಎಂದಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ಆರೋಪ

ಇನ್ನು ಮಾಜಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧವೂ ನಾರಾಯಣಸ್ವಾಮಿ ಗುಡುಗಿದ್ದಾರೆ. ಕಿರಣ್ ಬೇಡಿ ಹಾಗೂ ಕೇಂದ್ರ ಸರ್ಕಾರ ವಿಪಕ್ಷದ ಜೊತೆ ಸೇರಿ ಸರ್ಕಾರ ಬೀಳಿಸಲು ಯತ್ನಿಸಿದ್ದಾರೆ. ಒಂದು ವೇಳೆ ನಮ್ಮ ಶಾಸಕರು ನಮ್ಮೊಂದಿಗಿರುತ್ತಿದ್ದರೆ ಸರ್ಕಾರ ಐದು ವರ್ಷ ಅಧಿಕಾರ ನಡೆಸುತ್ತಿತ್ತು ಎಂದೂ ತಿಳಿಸಿದ್ದಾರೆ.