ನವದೆಹಲಿ(ಆ.26): ರಾಷ್ಟ್ರೀಯ ಕಾಂಗ್ರೆಸ್‌ನ ನಾಯಕತ್ವ ಬದಲಾವಣೆಯ ಕುರಿತು ಪಕ್ಷದ 23 ಹಿರಿಯ ನಾಯಕರು ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರ ಸೋರಿಕೆಯಾದ ನಂತರ ಪಕ್ಷದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮತ್ತು ಹೊರಗೆ ಹೊತ್ತಿಕೊಂಡ ‘ಬೆಂಕಿ’ ಆರಿಸಲು ಹಿರಿಯ ನಾಯಕರಾದ ಎಂ.ವೀರಪ್ಪ ಮೊಯ್ಲಿ ಮತ್ತು ಕಪಿಲ್‌ ಸಿಬಲ್‌ ಮಂಗಳವಾರ ಯತ್ನಿಸಿದ ಪರಿಯಿದು.

ಪಕ್ಷದ ಸಾಂಸ್ಥಿಕ ರಚನೆಯಲ್ಲಿ ಆಮೂಲಾಗ್ರ ಬದಲಾವಣೆ ತರಬೇಕೆಂದು ಆಗ್ರಹಿಸಿ ಪತ್ರ ಬರೆದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಸೇರಿದಂತೆ ಗಾಂಧಿ ಕುಟುಂಬದ ಕೆಂಗಣ್ಣಿಗೆ ಗುರಿಯಾದ 23 ನಾಯಕರಲ್ಲಿ ಮೊಯ್ಲಿ ಹಾಗೂ ಸಿಬಲ್‌ ಸೇರಿದ್ದಾರೆ. ಸೋಮವಾರವೇ ರಾಹುಲ್‌ರ ಕಟು ನುಡಿಗೆ ಬೇಸತ್ತು ತೀಕ್ಷ$್ಣ ಪ್ರತಿಕ್ರಿಯೆ ನೀಡಿ, ನಂತರ ಅದನ್ನು ಹಿಂಪಡೆದಿದ್ದ ಕಪಿಲ್‌ ಸಿಬಲ್‌ ಮಂಗಳವಾರ ಮತ್ತೆ ಈ ಕುರಿತು ಟ್ವೀಟ್‌ ಮಾಡಿದ್ದು, ‘ಇದೆಲ್ಲ ಹುದ್ದೆಯ ಬಗ್ಗೆ ಅಲ್ಲ. ನಮಗೆ ಅತಿಹೆಚ್ಚು ಕಳಕಳಿಯಿರುವುದು ನಮ್ಮ ದೇಶದ ಬಗ್ಗೆ’ ಎಂದು ಚುಟುಕಾಗಿ, ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.

ಬೇಸರವಾಗಿದ್ದರೆ ಕ್ಷಮೆ ಕೇಳುತ್ತೇವೆ:

ಇದೇ ವೇಳೆ, ಘಟನೆಯ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ಹಿರಿಯ ರಾಷ್ಟ್ರೀಯ ನಾಯಕ ಎಂ.ವೀರಪ್ಪ ಮೊಯ್ಲಿ, ನಾವು ಸೋನಿಯಾ ಗಾಂಧಿಯವರ ಭಾವನೆಗಳಿಗೆ ನೋವು ತಂದಿದ್ದರೆ ಕ್ಷಮೆ ಕೇಳುತ್ತೇವೆ. ಅವರು ನಮ್ಮ ಪಕ್ಷಕ್ಕೆ ಮತ್ತು ನಮಗೆಲ್ಲ ತಾಯಿಯಿದ್ದಂತೆ. ಅವರ ನಾಯಕತ್ವವನ್ನು ನಾವು ಎಂದೂ ಪ್ರಶ್ನೆ ಮಾಡಿಲ್ಲ. ಪತ್ರಕ್ಕೆ ಸಹಿ ಮಾಡಿದ 23 ನಾಯಕರಲ್ಲಿ ಯಾರೊಬ್ಬರಿಗೂ ಪಕ್ಷ ತೊರೆಯುವ ಯೋಚನೆಯಾಗಲೀ, ಬಿಜೆಪಿಯ ಜೊತೆಗೆ ನಂಟಾಗಲೀ ಇಲ್ಲ ಎಂದು ಹೇಳಿದರು.

ಪಕ್ಷ ಇಂದು ಸಂಕಷ್ಟದ ಸಮಯವನ್ನು ಹಾದುಹೋಗುತ್ತಿದೆ. ಸಾಕಷ್ಟುಬದ್ಧತೆ ಹಾಗೂ ತ್ಯಾಗದಿಂದ ಕಟ್ಟಿದ ಪಕ್ಷವನ್ನು ಕಳೆದುಕೊಳ್ಳಲು ನಮಗೆ ಇಷ್ಟವಿಲ್ಲ. ಸೋನಿಯಾ ಮಾಡಿದ ತ್ಯಾಗ ನಮಗೆಲ್ಲರಿಗೂ ಗೊತ್ತು. ಹಿಂದೆ ಅವರು ಈ ಹುದ್ದೆ ಒಪ್ಪಿಕೊಳ್ಳುವುದಕ್ಕೇ ನಿರಾಕರಿಸಿದ್ದರು. ಆದರೆ, ನಂತರ ಪಕ್ಷಕ್ಕಾಗಿ ಜೀವನವನ್ನೇ ನೀಡಿದರು. ಅವರಿಗೆ ದ್ರೋಹ ಬಗೆಯಲು ಯಾರಿಂದಲೂ ಸಾಧ್ಯವಿಲ್ಲ. ಇಂದಿಗೂ ನಾವು ಅವರನ್ನು ತಾಯಿಯಂತೆ ಗೌರವಿಸುತ್ತೇವೆ. ಪಕ್ಷದ ಹಾಗೂ ದೇಶದ ಭವಿಷ್ಯಕ್ಕೆ ಅವರು ಮಾರ್ಗದರ್ಶನ ನೀಡಬೇಕೆಂದು ಬಯಸುತ್ತೇವೆ ಎಂದು ತಿಳಿಸಿದರು.

ಸೋನಿಯಾ ಬಗ್ಗೆ ನಮಗಿರುವ ಗೌರವ ಹೀಗೇ ಮುಂದುವರೆಯುತ್ತದೆ. ಆದರೆ, ಇದೇ ವೇಳೆ ಪಕ್ಷಕ್ಕೆ ಮರುಜೀವ ನೀಡಬೇಕಿದೆ. ಪಕ್ಷವನ್ನು ಎಲ್ಲಾ ಹಂತದಲ್ಲೂ ಪುನರುಜ್ಜೀವನಗೊಳಿಸುವುದು ನಮ್ಮ ಪತ್ರದ ಮುಖ್ಯ ಆಶಯವಾಗಿತ್ತು. ಅದರರ್ಥ ಸೋನಿಯಾ ಅಧ್ಯಕ್ಷೆಯಾಗಬಾರದು ಎಂದಲ್ಲ. ಅವರು ಮತ್ತೆ ಹಂಗಾಮಿ ಅಧ್ಯಕ್ಷರಾಗಿರುವುದು ಸ್ವಾಗತಾರ್ಹ. ನಾವೆಲ್ಲರೂ ಅವರನ್ನು ಪ್ರೀತಿಸುತ್ತೇವೆ ಎಂದು ಹೇಳಿದರು.

ಕಿತಾಪತಿಗಳಿಂದ ಪತ್ರ ಸೋರಿಕೆ:

ಪಕ್ಷದಲ್ಲಿರುವ ಕೆಲ ಕಿತಾಪತಿಗಳು ಈ ಪತ್ರವನ್ನು ಸೋರಿಕೆ ಮಾಡಿದ್ದಾರೆ. ಅದು ಎಲ್ಲಿಂದ ಸೋರಿಕೆಯಾಯಿತು ಎಂಬುದು ಗೊತ್ತಿಲ್ಲ. ಒಟ್ಟಿನಲ್ಲಿ ಸೋರಿಕೆ ಮಾಡಿದ್ದು ಸರಿಯಲ್ಲ. ಅದರ ಬಗ್ಗೆ ಪಕ್ಷದಲ್ಲಿ ಆಂತರಿಕ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದೂ ಮೊಯ್ಲಿ ಅಭಿಪ್ರಾಯಪಟ್ಟರು.

ಸಿಡಬ್ಲ್ಯುಸಿ ಸಭೆಯ ನಂತರ ಕಪಿಲ್‌ ಸಿಬಲ್‌, ಶಶಿ ತರೂರ್‌ ಮುಂತಾದ ನಾಯಕರು ಸೋಮವಾರ ರಾತ್ರಿ ದೆಹಲಿಯ ಗುಲಾಂ ನಬಿ ಆಜಾದ್‌ ಮನೆಯಲ್ಲಿ ಸಭೆ ನಡೆಸಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಾನು ದೆಹಲಿಯಲ್ಲಿರಲಿಲ್ಲ. ಹೀಗಾಗಿ ಇದರ ಬಗ್ಗೆ ನನಗೆ ಗೊತ್ತಿಲ್ಲ. ಅದೇನೇ ಇದ್ದರೂ, ನಮಗ್ಯಾರಿಗೂ ಪಕ್ಷದಿಂದ ದೂರವಾಗುವ ಉದ್ದೇಶ ಇಲ್ಲ. ಬಿಜೆಪಿ ಜೊತೆ ಕೈಜೋಡಿಸುವ ಪ್ರಶ್ನೆಯಂತೂ ಬರುವುದೇ ಇಲ್ಲ. ನಾವು ಬಿಜೆಪಿಯನ್ನು ದ್ವೇಷಿಸುತ್ತೇವೆ. ನರೇಂದ್ರ ಮೋದಿಯವರ ನೀತಿಯನ್ನು ದ್ವೇಷಿಸುತ್ತೇವೆ’ ಎಂದರು.

ಪಕ್ಷದ್ರೋಹಿಗಳ ವಿರುದ್ಧ ವಾಗ್ದಾಳಿ:

‘ಕಾಂಗ್ರೆಸ್‌ ಪಕ್ಷಕ್ಕೆ ಸಾಕಷ್ಟುಸಲ ದ್ರೋಹ ಎಸಗಿದ ಅನೇಕ ಮಂದಿಯಿದ್ದಾರೆ. ಅವರು ನಮಗಿಂತ ಹೆಚ್ಚು ನಿಷ್ಠಾವಂತರು ಎಂದು ಹೇಳಿಕೊಳ್ಳುತ್ತಾರೆ. ಇಂದಿರಾ ಗಾಂಧಿಯವರಿಗೆ, ನಂತರ ಕಾಂಗ್ರೆಸ್‌ ಪಕ್ಷಕ್ಕೆ ದ್ರೋಹ ಮಾಡಿದವರು ಅನೇಕರಿದ್ದಾರೆ. ಅವರು ರಾಜನಿಗಿಂತ ಹೆಚ್ಚು ನಿಷ್ಠರು ಎಂದೂ ಹೇಳಿಕೊಳ್ಳುತ್ತಾರೆ. ಪಕ್ಷದ ಅತ್ಯಂತ ಕಷ್ಟಕರ ಸನ್ನಿವೇಶಗಳಲ್ಲಿ ಜೊತೆಗೆ ನಿಂತು ಹೋರಾಡಿದವರು ನಾವು’ ಎಂದು ಹೆಸರು ಹೇಳದೆ ಕೆಲ ನಾಯಕರ ವಿರುದ್ಧ ಮೊಯ್ಲಿ ವಾಗ್ದಾಳಿ ನಡೆಸಿದರು.