ನವದೆಹಲಿ(ಜ.04): ಕೊರೋನಾ ಲಸಿಕೆಗೆ ಭಾರತದ ಔಷಧ ನಿಯಂತ್ರಣ ಪ್ರಾಧಿಕಾರ ಅನುಮತಿ ನೀಡಿದ ಬಗ್ಗೆ ಒಂದೆಡೆ ಸಂತಸ ವ್ಯಕ್ತವಾಗಿದ್ದರೆ, ಕಾಂಗ್ರೆಸ್‌ ಪಕ್ಷ ಆಕ್ಷೇಪ ವ್ಯಕ್ತಪಡಿಸಿದೆ. ‘ಭಾರತ್‌ ಬಯೋಟೆಕ್‌ನ ಕೋವ್ಯಾಕ್ಸಿನ್‌ ಲಸಿಕೆಯ 3ನೇ ಹಂತದ ಪ್ರಯೋಗವೇ ಇನ್ನೂ ಮುಗಿದಿಲ್ಲ. ಆಗಲೇ ಇದನ್ನು ತುರ್ತು ಬಳಕೆಗೆ ಯಾವ ಮಾನದಂಡ ಅನುಸರಿಸಿ ಅನುಮತಿ ನೀಡಲಾಗಿದೆ ಎಂಬ ದತ್ತಾಂಶಗಳನ್ನು ಹಾಗೂ ಮಾಹಿತಿಯನ್ನು ಬಹಿರಂಗಪಡಿಸಬೇಕು’ ಎಂದು ಹಿರಿಯ ಕಾಂಗ್ರೆಸ್‌ ಮುಖಂಡ ಆನಂದ ಶರ್ಮಾ ಆಗ್ರಹಿಸಿದ್ದಾರೆ.

ಒದೇ ವೇಳೆ, ‘ಬ್ರಿಟನ್‌ನ ಕೋವಿಶೀಲ್ಡ್‌ ಲಸಿಕೆ ಪ್ರಯೋಗದ ಅಂತಿಮ ದತ್ತಾಂಶವನ್ನು ಏಕೆ ಬಹಿರಂಗಪಡಿಸಿಲ್ಲ? ಜನರಲ್ಲಿನ ಗೊಂದಲ ನಿವಾರಿಸಲು ಭಾರತ ಹಾಗೂ ಬ್ರಿಟನ್‌ ಎಲ್ಲ ವಿವರಗಳನ್ನು ಜನರ ಎದುರು ತೆರೆದಿಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಕಾಂಗ್ರೆಸ್‌ ಮುಖಂಡರಾದ ಜೈರಾಂ ರಮೇಶ್‌ ಹಾಗೂ ಶಶಿ ತರೂರ್‌ ಕೂಡ ಇದೇ ಅನುಸಿಕೆ ವ್ಯಕ್ತಪಡಿಸಿ, ‘ಕೋವ್ಯಾಕ್ಸಿನ್‌ಗಾಗಿ ಅಂತಾರಾಷ್ಟ್ರೀಯ ಮಾನದಂಡವನ್ನೇಕೆ ಬದಲಿಸಲಾಗಿದೆ? 3ನೇ ಹಂತದ ಪ್ರಯೋಗ ಮುಗಿವ ಮುನ್ನವೇ ಅನುಮತಿ ಏಕೆ? ಈ ಬಗ್ಗೆ ಆರೋಗ್ಯ ಸಚಿವ ಡಾ

ಹರ್ಷವರ್ಧನ್‌ ಉತ್ತರಿಸಬೇಕು. ಕೋವ್ಯಾಕ್ಸಿನ್‌ ಪ್ರಯೋಗ ಮುಗಿವ ಮುನ್ನ ಆಸ್ಟ್ರಾಜೆನೆಕಾ ಮಾತ್ರ ಬಳಸಬೇಕು’ ಎಂದಿದ್ದಾರೆ.