ಇದು ಬುಡಕಟ್ಟು ಸಮುದಾಯಕ್ಕೆ ಕಾಂಗ್ರೆಸ್‌ನ ರಾಜಪರಿವಾರ ಮಾಡಿದ ಅವಮಾನ ಎಂದು ಪ್ರಧಾನಿ ನರೇಂದ್ರ ಮೋದಿ ಹರಿಹಾಯ್ದಿದ್ದರೆ, ರಾಷ್ಟ್ರಪತಿ ಬಗ್ಗೆ ಸೋನಿಯಾ ಗಾಂಧಿ ಅಪಾರ ಗೌರವ ಹೊಂದಿದ್ದಾರೆ. ಸೋನಿಯಾ ಅವರ ಹೇಳಿಕೆಯನ್ನು ತಿರುಚಲಾಗಿದೆ ಎಂದು ಕಾಂಗ್ರೆಸ್ ಸ್ಪಷ್ಟನೆ ನೀಡಿದೆ.
ನವದೆಹಲಿ(ಫೆ.01): ಸಂಸತ್ತಿನ ಜಂಟಿ ಸದನ ಉದ್ದೇಶಿಸಿ ರಾಷ್ಟ್ರಪತಿ ದೌಪದಿ ಮುರ್ಮು ಅವರು ಶುಕ್ರವಾರ ಮಾಡಿದ ಭಾಷಣವನ್ನು ಉಲ್ಲೇಖಿಸಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ನೀಡಿದ 'ಬಡಪಾಯಿ ಮಹಿಳೆ' ಎಂಬ ಹೇಳಿಕೆ ಭಾರೀ ವಿವಾದಕ್ಕೆ ಕಾರಣ ವಾಗಿದೆ. ಅತ್ಯಂತ ಅಪರೂಪದ ಬೆಳವಣಿಗೆಯಲ್ಲಿ ಸ್ವತಃ ರಾಷ್ಟ್ರಪತಿ ಭವನವೇ, 'ಇಂಥ ಹೇಳಿಕೆ ಕಳಪೆ ಅಭಿರುಚಿಯದ್ದು ಮತ್ತು ದುರದೃಷ್ಟಕರ' ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಮತ್ತೊಂದೆಡೆ, ಇದು ಬುಡಕಟ್ಟು ಸಮುದಾಯಕ್ಕೆ ಕಾಂಗ್ರೆಸ್‌ನ ರಾಜಪರಿವಾರ ಮಾಡಿದ ಅವಮಾನ ಎಂದು ಪ್ರಧಾನಿ ನರೇಂದ್ರ ಮೋದಿ ಹರಿಹಾಯ್ದಿದ್ದರೆ, ರಾಷ್ಟ್ರಪತಿ ಬಗ್ಗೆ ಸೋನಿಯಾ ಗಾಂಧಿ ಅಪಾರ ಗೌರವ ಹೊಂದಿದ್ದಾರೆ. ಸೋನಿಯಾ ಅವರ ಹೇಳಿಕೆ ಯನ್ನು ತಿರುಚಲಾಗಿದೆ ಎಂದು ಕಾಂಗ್ರೆಸ್ ಸ್ಪಷ್ಟನೆ ನೀಡಿದೆ.
ಆಗಿದ್ದೇನು?:
ಬಜೆಟ್ ಅಧಿವೇಶನದ ಮೊದಲ ದಿನವಾದ ಶುಕ್ರವಾರ ರಾಷ್ಟ್ರಪತಿ ದೌಪದಿ ಮುರ್ಮು ಅವರು ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿ ತೆರಳಿದರು. ಇದಾದ ಬಳಿಕ ವಿರಾಮದ ಸಮಯದಲ್ಲಿ ಸದನದಿಂದ ಹೊರಗೆ ಬಂದ ಸಂಸದೆ ಸೋನಿಯಾ ಗಾಂಧಿ ಸುದ್ದಿಗಾರರೊಂದಿಗೆ ಮಾತನಾಡಿ, 'ಭಾಷಣದ ಅಂತ್ಯದಲ್ಲಿ ಅವರು ತೀವ್ರವಾಗಿ ಬಳಲಿದ್ದರು... ಬಡಪಾಯಿ ಮಹಿಳೆ ಭಾಷಣ ಮಾಡಲೇ ಕಷ್ಟಪಟ್ಟರು' ಎಂದು ಪ್ರತಿಕ್ರಿಯಿಸಿದರು. ಈ ವೇಳೆ ಪಕ್ಕದಲ್ಲೇ ಇದ್ದ ರಾಹುಲ್ ಗಾಂಧಿ ಕೂಡ ಇದಕ್ಕೆ ದನಿಗೂಡಿಸಿ, ಭಾಷಣ ನೀರಸವಾಗಿತ್ತು. ಹೇಳಿದನ್ನೇ ಹೇಳಿದರು' ಎಂದರು.
ಸ್ವೀಕಾರಾರ್ಹವಲ್ಲ:
ಸೋನಿಯಾ ಹೇಳಿಕೆ ವಿವಾದ ಸೃಷ್ಟಿಸುತ್ತಲೇ ಈ ಕುರಿತು ಪ್ರತಿಕ್ರಿಯಿಸಿರುವ ರಾಷ್ಟ್ರಪತಿ ಭವನವು, 'ರಾಷ್ಟ್ರಪತಿಗಳ ಸಂಸತ್ ಭಾಷಣದ ಕುರಿತ ಕೆಲವು ಪ್ರಮುಖ ಕಾಂಗ್ರೆಸ್ ನಾಯಕರು ನೀಡಿದ ಹೇಳಿಕೆ ಸಷ್ಟವಾಗಿ ದೇಶದ ಅತ್ಯುನ್ನತ ಸಂಸ್ಥೆಯ ಘನತೆಗೆ ಧಕ್ಕೆ ತಂದಿದೆ. ಇದು ಸ್ವೀಕಾರಾರ್ಹವಲ್ಲ. ಭಾಷಣದ ವೇಳೆ ರಾಷ್ಟ್ರಪತಿಗಳು ಸಂಪೂರ್ಣವಾಗಿ ದಣಿದಿದ್ದರು, ಭಾಷಣದ ಅಂತ್ಯದ ವೇಳೆಗೆ ಅವರು ಮಾತನಾಡಲೂ ಕಷ್ಟಪಡುತ್ತಿದ್ದರು ಎಂಬ ಹೇಳಿಕೆಗಳು ಸತ್ಯಕ್ಕೆ ಸಂಪೂರ್ಣ ದೂರವಾದುವು. ರಾಷ್ಟ್ರಪತಿಗಳು ಯಾವುದೇ ಹಂತದಲ್ಲೂ ದಣಿದಿರಲಿಲ್ಲ. ವಾಸ್ತವವಾಗಿ ದಮನಿತ ಸಮುದಾಯ, ಮಹಿಳೆಯರು ಮತ್ತು ರೈತರ ಬಗ್ಗೆ ಭಾಷಣದಲ್ಲಿ ಮಾತನಾಡುವುದು ಎಂದಿಗೂ ದಣಿವಿನ ವಿಷಯವಾಗಿ ಕಂಡಿಲ್ಲ' ಎಂದು ಸ್ಪಷ್ಟಪಡಿಸಿದೆ.
ಜೊತೆಗೆ, 'ಈ ನಾಯಕರಿಗೆ ಭಾರತೀಯ ಭಾಷಾ ವೈಶಿಷ್ಟ್ಯ ಮತ್ತು ಹಿಂದಿಯಂಥ ಭಾರತೀಯ ಭಾಷೆಯಲ್ಲಿ ವಾಕ್ಯ ರಚನೆಯ ಪರಿಚಯ ಇಲ್ಲದೇ ಇರುವುದು ಕೂಡ ಈ ಘಟನೆಗೆ ಕಾರಣವಾಗಿರಬಹುದು, ಏನೇ ಆದರೂ ಈ ಹೇಳಿಕೆ ಉತ್ತಮ ಅಭಿರುಚಿ ಹೊಂದಿಲ್ಲ, ದುರದೃಷ್ಟಕರವಾದುದು ಮತ್ತು ಸಂಪೂರ್ಣವಾಗಿ ತಪ್ಪಿಸಬಹುದಾಗಿತ್ತು' ಎಂದು ಹೇಳಿದೆ.
ಮೋದಿ ಕಿಡಿ:
ಸೋನಿಯಾ ಹೇಳಿಕೆ ಕುರಿತು ಕಿಡಿಕಾರಿರುವ ಪ್ರಧಾನಿ ನರೇಂದ್ರ ಮೋದಿ, 'ಕಾಂಗ್ರೆಸ್‌ನ ರಾಜಪರಿವಾರವು (ಶಾಹಿ ಪರಿವಾರ) ಬುಡಕಟ್ಟು ಹಿನ್ನೆಲೆಯನ್ನು ಹೊಂದಿರುವ ಮುರ್ಮು ಅವರನ್ನು ಅವಮಾನಿಸಿದೆ. ತಮ್ಮನ್ನು ತಾವು ದೇಶದ ಒಡೆಯರು ಎಂದುಕೊಂಡಿರುವ ಅವರು ತಮ್ಮ ದರ್ಪವನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. ಮುರ್ಮು ಅವರನ್ನು ಬಡಪಾಯಿ ಎಂದಿದ್ದು, ದೇಶದ 10 ಕೋಟಿ ಬುಡಕಟ್ಟು ಸಹೋದರ ಸಹೋದರಿಯರಿಗೆ, ಕೆಳಮಟ್ಟದಿಂದ ಉನ್ನತ ಸ್ಥಾನಕ್ಕೆ ಏರಿದವರಿಗೆ ಮಾಡಿದ ಅವಮಾನವಾಗಿದೆ. ಕಾಂಗ್ರೆಸ್ ಪಕ್ಷವು, ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗದವರ ಬೆಳವಣಿಗೆಯನ್ನು ಸಹಿಸದೆ, ಪ್ರತಿ ಹೆಜ್ಜೆಯಲ್ಲಿ ಅವಮಾನಿಸುತ್ತದೆ' ಎಂದು ಆರೋಪಿಸಿದರು.
ಬಿಜೆಪಿ ಆಕ್ಷೇಪ:
ಸೋನಿಯಾ ಹೇಳಿಕೆಗೆ ಬಿಜೆಪಿ ಕೂಡ ಆಕ್ರೋಶ ವ್ಯಕ್ತಪಡಿಸಿದೆ. ರಾಷ್ಟ್ರಪತಿಗಳು, ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡುವಾಗ ಊಳಿಗಮಾನ್ಯ ಮನಸ್ಥಿತಿಯ ಪ್ರತಿಪಕ್ಷ ಮಾತ್ರ ಮೋದಿ ನಾಯಕತ್ವದಲ್ಲಿ ಹಿಂದುಳಿದ ವರ್ಗಗಳ ಸಬಲೀಕರಣ ಮತ್ತು ಮಹಿಳೆಯರ ವಿಚಾರದಲ್ಲಿ ಆದ ಬದಲಾವಣೆಯನ್ನು ವಿಡಂಬನೆ ಮಾಡುತ್ತಿದೆ. ಉದ್ದೇಶಪೂರ್ವಕವಾಗಿ 'ಬಡಪಾಯಿ' ಪದ ಬಳಕೆಯು ಕಾಂಗ್ರೆಸ್ ಬಡವಿರೋಧಿ, ಗುಡ್ಡಗಾಡು ಜನರ ವಿರೋಧಿ ರೂಪವನ್ನು ತೋರಿಸುತ್ತದೆ. ಈ ರೀತಿಯ ಹೇಳಿಕೆಗಾಗಿ ಕಾಂಗ್ರೆಸ್ ಬೇಷರತ್ ಕ್ಷಮೆ ಕೋರಬೇಕು ಎಂದು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಆಗ್ರಹ ಮಾಡಿದ್ದಾರೆ.
ಕಾಂಗ್ರೆಸ್ ಸ್ಪಷ್ಟನೆ:
ಈ ನಡುವೆ ರಾಷ್ಟ್ರಪತಿ ಅವರಿಗೆ ಸೋನಿಯಾ ಗಾಂಧಿ ಅವರು ಅಗೌರವ ತೋರಿಸಿಲ್ಲ ಎಂದು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದೆ ಪ್ರಿಯಾಂಕಾ ಗಾಂಧಿ ಸ್ಪಷ್ಟಪಡಿಸಿದ್ದಾರೆ. 'ಸೋನಿಯಾ ಗಾಂಧಿ ಅವರಿಗೆ ರಾಷ್ಟ್ರಪತಿ ಮುರ್ಮು ಅವರ ಬಗ್ಗೆ ಹೆಚ್ಚು ಗೌರವವಿದೆ. ಅವರ ಆರೋಗ್ಯದ ಕಾಳಜಿಯಿಂದಾಗಿ ಪದ ಬಳಸಿದ್ದರು. ರಾಷ್ಟ್ರಪತಿ ಅವರಿಗೆ ಯಾವುದೇ ಅಗೌರವ ತೋರುವ ಉದ್ದೇಶ ಸೋನಿಯಾ ಅವರಿಗಿಲ್ಲ. ಆದರೆ ಬಿಜೆಪಿಗರು ಮತ್ತು ಮಾಧ್ಯಮಗಳು ಸುದ್ದಿಯನ್ನು ತಿರುಚಿವೆ' ಎಂದು ಆರೋಪಿಸಿದ್ದಾರೆ.
ಸೋನಿಯಾ ಹೇಳಿದ್ದೇನು?
# ಬಜೆಟ್ ಅಧಿವೇಶನದ ಮೊದಲ ದಿನ ರಾಷ್ಟ್ರಪತಿಗಳಿಂದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ
. ಭಾಷಣ ಮುಗಿಸಿ ಬ್ರೌಪದಿ ಮುರ್ಮು ಹೊರ ನಡೆದ ಬಳಿಕ ಆ ಬಗ್ಗೆ ಸೋನಿಯಾ ಗಾಂಧಿ ಪ್ರತಿಕ್ರಿಯೆ
• ರಾಷ್ಟ್ರಪತಿಗಳು ತೀವ್ರ ಬಳಲಿದ್ದರು, ಬಡಪಾಯಿ ಮಹಿಳೆ ಭಾಷಣಕ್ಕೂ ಕಷ್ಟಪಟ್ಟರು ಎಂದ ಸೋನಿಯಾ
• ಭಾಷಣ ನೀರಸವಾಗಿತ್ತು, ಹೇಳಿ ದ್ದನ್ನೇ ಹೇಳಿದರು ಎಂದು ತಾಯಿ ಪಕ್ಕದಲ್ಲೇ ನಿಂತು ಹೇಳಿದ ರಾಹುಲ್
• ರಾಷ್ಟ್ರಪತಿಗಳನ್ನೇ ಬಡಪಾಯಿ ಎಂದು ಕರೆದಿದ್ದಕ್ಕೆ ರಾಷ್ಟ್ರಪತಿ ಭವನ, ಮೋದಿ, ಬಿಜೆಪಿಯಿಂದ ಟೀಕೆ
ಸೋನಿಯಾ ಹೇಳಿಕೆ ಒಪ್ಪಲ್ಲ
ಕಾಂಗ್ರೆಸ್ಸಿನ ಕೆಲ ನಾಯಕರು ರಾಷ್ಟ್ರಪತಿಗಳ ಕುರಿತು ನೀಡಿರುವ ಹೇಳಿಕೆಯಿಂದ ದೇಶದ ಅತ್ಯುನ್ನತ ಸಂಸ್ಥೆಯ ಘನತೆಗೆ ಧಕ್ಕೆ ಆಗಿದೆ. ಇದನ್ನು ಒಪ್ಪಲಾರದು. ಇದು ಕೀಳು ಅಭಿರುಚಿಯ ಹೇಳಿಕೆ: ರಾಷ್ಟ್ರಪತಿ ಭವನ
ಬುಡಕಟ್ಟು ಜನರಿಗೆ ಅಪಮಾನ
ತಾವು ದೇಶದ ಒಡೆಯರು ಎಂದು ಕೊಂಡಿರುವ ಕಾಂಗ್ರೆಸ್‌ನ ರಾಜ ಪರಿವಾರವು ಮತ್ತೆ ತಮ್ಮ ದರ್ಪವನ್ನು ಪ್ರದರ್ಶಿಸಿದೆ. ಸೋನಿಯಾ ಅವರ ಈ ಹೇಳಿಕೆ 10 ಕೋಟಿ ಬುಡಕಟ್ಟು ಜನರಿಗೆ ಮಾಡಿದ ಅಪಮಾನ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
