ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗಾಗಿ ದಿಢೀರ್ ಸೋನಿಯಾ ಗಾಂಧಿಯನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಶಿಮ್ಲಾ(ಜೂ.07) ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರಾಗಿದೆ. ಪುತ್ರಿ ಪ್ರಿಯಾಂಕಾ ಗಾಂಧಿ ಜೊತೆ ರಜಾ ದಿನ ಕಳೆಯುತ್ತಿದ್ದ ವೇಳೆ ಆರೋಗ್ಯ ಕ್ಷೀಣಿಸಿದೆ. ಕಳೆದ ಮೂರು ದಿನಗಳಿಂದ ಹಿಮಾಚಲ ಪ್ರದೇಶದ ಚರಬ್ರಾ ಬಳಿ ಇರುವ ಪ್ರಿಯಾಂಕಾ ಗಾಂಧಿಯ ಮನೆಯಲ್ಲಿ ವಾಸವಿದ್ದ ಸೋನಿಯಾ ಗಾಂಧಿ ಆರೋಗ್ಯ ಇಂದು ಕ್ಷೀಣಿಸಿದೆ. ಆಸ್ವಸ್ಥಗೊಂಡ ಸೋನಿಯಾ ಗಾಂಧಿಯನ್ನು ತಕ್ಷಣವೇ ಶಿಮ್ಲಾದ ಇಂದಿರಾ ಗಾಂಧಿ ಮೆಡಿಕಲ್ ಕಾಲೇಡು ಹಾಗೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ನುರಿತ ವೈದ್ಯರ ತಂಡ ಸೋನಿಯಾ ಗಾಂಧಿಗೆ ಚಿಕಿತ್ಸೆ ನೀಡುತ್ತಿದೆ.
ಸೋನಿಯಾ ಗಾಂಧಿಗೆ ಇಸಿಜಿ, ಎಂಆರ್‌ಐ ಪರೀಕ್ಷೆ
ಪ್ರಿಯಾಂಕಾ ಗಾಂಧಿಯೊಂದಿಗೆ ಕಳೆದ ಮೂರು ದಿನಗಳಿಂದ ಸಮಯ ಕಳೆಯುತ್ತಿದ್ದ ಸೋನಿಯಾ ಗಾಂಧಿ ದಿಢೀರ್ ಅಸ್ವಸ್ಥಗೊಂಡಿದ್ದಾರೆ. ಎದೆನೋವು, ಉಸಿರಾಟ ಸಮಸ್ಯೆ ಸೇರಿದಂತೆ ಕೆಲ ಆರೋಗ್ಯ ಸಮಸ್ಯೆಗಳಿಂದ ಸೋನಿಯಾ ಗಾಂಧಿ ಆರೋಗ್ಯ ಕ್ಷೀಣಿಸಿತ್ತು. ಹೀಗಾಗಿ ತಕ್ಷಣವೇ ಸೋನಿಯಾ ಗಾಂಧಿಯನ್ನು ಆಸ್ಪತ್ರೆ ದಾಖಲಿಸಲಾಗಿದೆ. ಶಿಮ್ಲಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋನಿಯಾ ಗಾಂಧಿಗೆ ಇಸಿಜಿ ಪರೀಕ್ಷೆ ಹಾಗೂ ಎಂಆರ್‌ಆ ಸ್ಕ್ಯಾನ್ ಮಾಡಲಾಗಿದೆ.
ಸೋನಿಯಾ ಗಾಂಧಿ ಆರೋಗ್ಯ ಸ್ಥಿರ
ಸದ್ಯ ಆಸ್ಪತ್ರೆ ಮೂಲಗಳ ಮಾಹಿತಿ ಪ್ರಕಾರ ಸೋನಿಯಾ ಗಾಂಧಿ ಆರೋಗ್ಯ ಸ್ಥಿರವಾಗಿದೆ. ಕೆಲ ಆರೋಗ್ಯ ಸಮಸ್ಯೆ ಎದುರಾಗಿತ್ತು. ಜೊತೆಗೆ ರೂಟೀನ್ ಹೆಲ್ತ್ ಚೆಕ್ಅಪ್ ಕಾರಣದಿಂದ ಸೋನಿಯಾ ಗಾಂಧಿ ಆಸ್ಪತ್ರೆ ದಾಖಲಾಗಿದ್ದಾರೆ ಎಂದು ಆಸ್ಪತ್ರೆ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಸೋನಿಯಾ ಗಾಂಧಿಯ ಆರೋಗ್ಯ ಸ್ಥಿರವಾಗಿದ್ದು, ಆತಂಕ ಪಡುವ ಅವಶ್ಯಕತೆ ಇಲ್ಲ. ಸಾಮಾನ್ಯ ಹೆಲ್ತ್ ಚೆಕ್ಅಪ್ ಮಾಡಲಾಗಿದೆ. ಇದೇ ವೇಳೆ ಕೆಲ ಸಣ್ಣ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡ ಕಾರಣ ಆರೋಗ್ಯ ಹಾಗೂ ವಯಸ್ಸಿನ ದೃಷ್ಟಿಯಿಂದ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ ಎಂದು ಆಸ್ಪತ್ರೆ ಮೂಲಗಳು ಸ್ಪಷ್ಟಪಡಿಸಿದೆ.
ಸೋನಿಯಾ ಗಾಂಧಿ ಆರೋಗ್ಯದ ದೃಷ್ಟಿಯಿಂದ ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಫೆಭ್ರವರಿ ತಿಂಗಳಲ್ಲಿ ಸೋನಿಯಾ ಗಾಂಧಿ ದೆಹಲಿಯ ಗಂಗಾ ರಾಮ್ ಆಸ್ಪತ್ರೆಗೆ ದಾಖಲಾಗಿದ್ದರು. ಹೊಟ್ಟೆ ನೋವು ಸೇರಿದಂತೆ ಇತರ ಆರೋಗ್ಯ ಸಮಸ್ಯೆಗಳ ಕಾರಣ ಆಸ್ಪತ್ರೆ ದಾಖಲಾಗಿದ್ದರು. ಇದಾದ ಬಳಿಕ ಪ್ರತಿ ತಿಂಗಳು ಸಾಮಾನ್ಯ ಆರೋಗ್ಯ ತಪಾಸಣೆ ಮಾಡಲಾಗಿದೆ. ಆರೋಗ್ಯವಾಗಿದ್ದ ಕಾರಣ ದೆಹಲಿಯಿಂದ ಹಿಮಾಚಲ ಪ್ರದೇಶಕ್ಕೆ ಮೂರು ದಿನಗಳ ಹಿಂದೆ ಪ್ರಯಾಣ ಮಾಡಿದ್ದರು.
