ರಾಹುಲ್ ಗಾಂಧಿ ಶೂ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆ; ಬೆಲೆ ಎಷ್ಟು?
ಲೋಕಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ನಡೆದ ಘರ್ಷಣೆಯ ನಂತರ, ರಾಹುಲ್ ಗಾಂಧಿ ಧರಿಸಿದ್ದ ಶೂಗಳ ಬೆಲೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಕೆಲವರು ಶೂಗಳ ಬೆಲೆ 3 ಲಕ್ಷ ರೂಪಾಯಿ ಎಂದು ಹೇಳುತ್ತಿದ್ದಾರೆ.
ನವದೆಹಲಿ: ಲೋಕಸಭೆ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಧರಿಸಿರುವ ಶೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇವುಗಳ ಬೆಲೆಯ ಬಗ್ಗೆ ವ್ಯಾಪಕ ಚರ್ಚೆ ಶುರುವಾಗಿದೆ. ಗುರುವಾರ ಲೋಕಸಭಾ ಆವರಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ತಳ್ಳಾಟ-ನೂಕಾಟ ನಡೆದಿತ್ತು. ಎರಡೂ ಪಕ್ಷದ ನಾಯಕರು ಆರೋಪ ಪ್ರತ್ಯಾರೋಪಗಳನ್ನು ಮಾಡಿದ್ದರು. ಈ ಎಲ್ಲಾ ಬೆಳವಣಿಗೆ ನಡುವೆ ರಾಹುಲ್ ಗಾಂಧಿ ಧರಿಸಿರುವ ಬೂಟಿನ ಬೆಲೆಯ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಈ ಹಿಂದೆ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಧರಿಸಿದ್ದ ಟೀ ಶರ್ಟ್ ಬೆಲೆಯ ಫೋಟೋಗಳು ವೈರಲ್ ಆಗಿದ್ದವು.
ಸೋಶಿಯಲ್ ಮೀಡಿಯಾ 'ಮಹಂತ್ ಆದಿತ್ಯನಾಥ್ 2.O' ಹೆಸರಿನ ಎಕ್ಸ್ ಖಾತೆಯಲ್ಲಿ ರಾಹುಲ್ ಗಾಂಧಿ ಧರಿಸಿದ್ದ ಶೂ ಬೆಲೆ ಮಾಹಿತಿಯುಳ್ಳ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಈ ಫೋಟೋ ಜೊತೆಗೆ, ರಾಹುಲ್ ಗಾಂಧಿ ಅವರು 3 ಲಕ್ಷ ರೂಪಾಯಿ ಬೆಲೆಯ ಶೂ ಧರಿಸಿದ್ದಾರೆ ಎಂದು ಬರೆಯಲಾಗಿದೆ. ಇದೇ ರೀತಿ ಗೌರೀಶ್ ಬನ್ಸಲ್ ಹೆಸರಿನ ಎಕ್ಸ್ ಖಾತೆಯಲ್ಲಿ, ರಾಹುಲ್ ಗಾಂಧಿ ಧರಿಸಿರುವ ಶೂ ಬೆಲೆ ಎಷ್ಟು ಅನ್ನೋದನ್ನು ನೋಡಿ ಎಂದು ಬರೆಯಲಾಗಿದೆ. ಇವರು ಪ್ರತಿದಿನ ಅದಾನಿ, ಅಂಬಾನಿ ಬಗ್ಗೆ ಕಟ್ಟೆದಾಗಿ ಮಾತನಾಡುತ್ತಾರೆ. ಮೋದಿ ಅವರನ್ನು ಬಂಡವಾಳಶಾಹಿಗಳ ಮಿತ್ರರು ಎಂದು ಟೀಕಿಸುತ್ತಾರೆ. ಆದ್ರೆ ಇವರು ಸೊರೊಸ್ ಹಣದಿಂದ ಇಷ್ಟೊಂದು ದುಬಾರಿ ಶೂಗಳು ಬರುತ್ತವೆಯಾ ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಅಮಿತ್ ಶಾ ಭಾಷಣ ತಿರುಚಿದ್ರಾ ರಾಹುಲ್? ಫುಲ್ ವಿಡಿಯೋ ವೈರಲ್- ವಿಪಕ್ಷ ನಾಯಕನ ವಿರುದ್ಧ ಮತ್ತೊಂದು ಕೇಸ್?
ಮತ್ತೋರ್ವ ನೆಟ್ಟಿಗ @alkumar25000 ಎಂಬವರು ರಾಹುಲ್ ಗಾಂಧಿಯವರ ಫೋಟೋ ಶೇರ್ ಮಾಡಿಕೊಂಡು, ಈ ಚಿತ್ರ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗಿದ್ದು, ಕಾಂಗ್ರೆಸ್ ನಾಯಕ ಧರಿಸಿರುವ ಶೂ ಬೆಲೆ 3 ಲಕ್ಷ ರೂಪಾಯಿ ಅಂತೆ. ಇಷ್ಟು ದುಬಾರಿ ಬೆಲೆಯ ಶೂ ಇರುತ್ತೆ ಎಂಬುವುದು ಗೊತ್ತಾಯ್ತು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ರಾಹುಲ್ ಕೈಹಿಡಿಯದ ಸಂವಿಧಾನ, ಬಿಜೆಪಿಗೆ ವರವಾದ ಮೋದಿ ಆಡಳಿತ, ಸ್ಫೋಟಕ ಸಮೀಕ್ಷಾ ವರದಿ ಪ್ರಕಟ!
ಗುರುವಾರ ಲೋಕಸಭಾ ಆವರಣದಲ್ಲಿ ಕಾಂಗ್ರೆಸ್ ನಾಯಕರು, ಅಂಬೇಡ್ಕರ್ ಕುರಿತ ಅಮಿತ್ ಶಾ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದರು. ಇತ್ತ ಅಮಿತ್ ಶಾ ಹೇಳಿಕೆಯನ್ನು ತಿರುಚಿ ವೈರಲ್ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ ಸಂಸದರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಉಭಯ ಪಕ್ಷಗಳ ನಡುವೆ ಉಂಟಾಗಿತ್ತು. ಈ ವೇಳೆ ಬಿಜೆಪಿ ಸಂಸದ ಪ್ರತಾಪ್ ಸಾರಂಗಿ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದರು. ರಾಹುಲ್ ಗಾಂಧಿ ಸಂಸದರನ್ನು ತಳ್ಳಿದ್ದರು. ಈ ವೇಳೆ ಸಂಸದನೊಬ್ಬ ನನ್ನ ಮೇಲೆ ಬಿದ್ದಿದ್ದರಿಂದ ತಲೆಗೆ ಗಾಯವಾಗಿದೆ ಎಂದು ಬಿಜೆಪಿ ಸಂಸದ ಹೇಳಿಕೆ ನೀಡಿದ್ದರು.