Asianet Suvarna News Asianet Suvarna News

6 ತಿಂಗಳಲ್ಲಿ ಕಾಂಗ್ರೆಸ್ಸಿಗೆ 2ನೇ ಜಯ ತಂದುಕೊಟ್ಟ ಕನ್ನಡಿಗ : ಕೆಸಿಆರ್ ಸೋತಿದ್ದರ ಹಿಂದೆ ಕಾನುಗೋಲು ತಂತ್ರ

ಕರ್ನಾಟಕದಲ್ಲಿ ಆರು ತಿಂಗಳ ಹಿಂದಷ್ಟೇ ಜಯಭೇರಿ ಬಾರಿಸಿದ್ದ ಕಾಂಗ್ರೆಸ್‌, ಇದೀಗ ತೆಲಂಗಾಣದಲ್ಲಿ 10 ವರ್ಷಗಳ ಬಳಿಕ ಮತ್ತೊಮ್ಮೆ ಅಧಿಕಾರಕ್ಕೆ ಏರಿದೆ. ಇದರ ಹಿಂದೆ ಬಳ್ಳಾರಿ ಮೂಲದ ಚುನಾವಣಾ ರಣತಂತ್ರಗಾರ ಸುನೀಲ್‌ ಕಾನುಗೋಲು ಮಾಡಿದ ತಂತ್ರಗಾರಿಕೆ ಎದ್ದು ಕಾಣುತ್ತಿದೆ.

Congress got 2nd victory in 6 month Behind this victory Bellary based election strategist Kannadiga Sunil Kanugolu tactics stand out akb
Author
First Published Dec 4, 2023, 6:48 AM IST

ನವದೆಹಲಿ: ಕರ್ನಾಟಕದಲ್ಲಿ ಆರು ತಿಂಗಳ ಹಿಂದಷ್ಟೇ ಜಯಭೇರಿ ಬಾರಿಸಿದ್ದ ಕಾಂಗ್ರೆಸ್‌, ಇದೀಗ ತೆಲಂಗಾಣದಲ್ಲಿ 10 ವರ್ಷಗಳ ಬಳಿಕ ಮತ್ತೊಮ್ಮೆ ಅಧಿಕಾರಕ್ಕೆ ಏರಿದೆ. ಇದರ ಹಿಂದೆ ಬಳ್ಳಾರಿ ಮೂಲದ ಚುನಾವಣಾ ರಣತಂತ್ರಗಾರ ಸುನೀಲ್‌ ಕಾನುಗೋಲು ಮಾಡಿದ ತಂತ್ರಗಾರಿಕೆ ಎದ್ದು ಕಾಣುತ್ತಿದೆ.

ಹಾಗೆ ನೋಡಿದರೆ, ಕಾಂಗ್ರೆಸ್ಸಿಗಿಂತ ಮೊದಲೇ ಕಾನುಗೋಲು ಅವರನ್ನು ಸಂಪರ್ಕಿಸಿದ್ದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್‌ (ಕೆಸಿಆರ್). ತಮಿಳುನಾಡಿನಲ್ಲಿ ಸ್ಟಾಲಿನ್‌ (Stalin) ಪರ ಕೆಲಸ ಮಾಡಿದ್ದ ಕಾನುಗೋಲು ಹೊಸ ಜವಾಬ್ದಾರಿ ಹೊರಲು ಸಿದ್ಧರಾಗಿದ್ದರು. ಆ ವೇಳೆ ಹೈದರಾಬಾದ್‌ನ ತಮ್ಮ ಫಾರ್ಮ್‌ ಹೌಸ್‌ಗೆ ಕರೆಸಿ ಅವರ ಜತೆ ಕೆಸಿಆರ್‌ (KCR) ಹಲವು ಸುತ್ತಿನ ಮಾತುಕತೆ ನಡೆಸಿದರು. ಆದರೆ ಇಬ್ಬರ ನಡುವೆ ಸಹಮತ ಮೂಡಲಿಲ್ಲ. ಇದೀಗ ಅದೇ ಕೆಸಿಆರ್‌ ಸೋಲಿಗೆ ಕಾನುಗೋಲು ಕಾರಣರಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕೆಸಿಆರ್‌ ಜತೆಗಿನ ಮಾತುಕತೆ ವಿಫಲವಾದ ಬಳಿಕ ಕಾಂಗ್ರೆಸ್ಸಿಗೆ ಚುನಾವಣಾ ತಂತ್ರಗಾರರಾಗಿ ಕಾನುಗೋಲು (Sunil Kanugolu) ನಿಯೋಜನೆಗೊಂಡರು. ತೆಲಂಗಾಣ ಜತೆಗೆ ಕರ್ನಾಟಕದ ಜವಾಬ್ದಾರಿಯನ್ನೂ ಹೊತ್ತುಕೊಂಡರು. ಎರಡೂ ರಾಜ್ಯಗಳಲ್ಲೂ ಒಟ್ಟಿಗೇ ಕೆಲಸ ಮಾಡಿದರು. ತೆಲಂಗಾಣದಲ್ಲಿ ಗೆಲ್ಲುವುದು ಕಷ್ಟ ಎಂಬ ಭಾವನೆ ಹೊಂದಿದ್ದ ಕಾಂಗ್ರೆಸ್ಸಿಗರಿಗೆ, ಅಲ್ಲಿ ಹೇಗೆ ಗೆಲ್ಲಬಹುದು ಎಂಬ ದಾರಿಯನ್ನು ಕಾನುಗೋಲು ತೋರಿಸಿಕೊಟ್ಟರು.

ಬಿಜೆಪಿ (BJP) ಹೆಚ್ಚು ಮತಗಳನ್ನು ಪಡೆದಷ್ಟೂ ಕೆಸಿಆರ್‌ ಅವರು ಅಧಿಕಾರದಲ್ಲಿ ಭದ್ರವಾಗಿ ಉಳಿಯುತ್ತಾರೆ ಎಂಬುದನ್ನು ಮನಗಂಡ ಕಾನುಗೋಲು, ಬಿಜೆಪಿಯ ಪ್ರಭಾವವನ್ನು ತಗ್ಗಿಸಲು ಸಾಧ್ಯವಿರುವ ಎಲ್ಲ ತಂತ್ರಗಾರಿಕೆಗಳನ್ನೂ ಮಾಡಿದರು. ಆಂಧ್ರ ಸಿಎಂ ಜಗನ್ಮೋಹನ ರೆಡ್ಡಿ ಸೋದರಿ ವೈ.ಎಸ್‌.ಶರ್ಮಿಳಾ ಅವರು ಚುನಾವಣೆಗೆ ಅಭ್ಯರ್ಥಿಗಳನ್ನು ಹೂಡಿದ್ದರೆ ಮತ ವಿಭಜನೆಯಾಗುತ್ತಿತ್ತು. ಅವರ ಮನವೊಲಿಸಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದಂತೆ ನೋಡಿಕೊಂಡರು. ಇದೇ ವೇಳೆ, ತೆಲುಗುದೇಶಂ ಪಕ್ಷ ಕಣದಿಂದ ದೂರ ಉಳಿದಿದ್ದು ಕಾನುಗೋಲು ಕೆಲಸವನ್ನು ಸುಲಭ ಮಾಡಿತು. ಮತ ವಿಭಜನೆಯನ್ನು ತಪ್ಪಿಸಿದ್ದರಿಂದ ಕಾಂಗ್ರೆಸ್‌ (Congress) ಜಯಭೇರಿ ಬಾರಿಸಿತು. ಜತೆಗೆ ಅಬ್ಬರದ ಆನ್‌ಲೈನ್‌ ಪ್ರಚಾರ, ಗ್ಯಾರಂಟಿ ಸ್ಕೀಂಗಳನ್ನು ಜನರಿಗೆ ಮುಟ್ಟಿಸಿದ್ದೂ ಫಲ ನೀಡಿತು ಎಂದು ವಿಶ್ಲೇಷಿಸಲಾಗುತ್ತಿದೆ.

ಕೆಸಿಆರ್‌ ಗುರಿಯಾಗಿಸಿಕೊಂಡು ಕಾನುಗೋಲು ಪ್ರಚಾರ ಆರಂಭಿಸಿದ್ದರು. ಅದರಿಂದ ಕೆರಳಿದ್ದ ಕೆಸಿಆರ್‌ ಅವರು ಕಾನುಗೋಲು ಕಚೇರಿಗೆ ಪೊಲೀಸರನ್ನು ಕಳುಹಿಸಿ ದಾಳಿ ನಡೆಸಿ, ವಿಚಾರಣೆಗೂ ಒಳಗಾಗುವಂತೆ ನೋಡಿಕೊಂಡಿದ್ದರು. ಆದರೂ ಕಾನುಗೋಲು ಎದೆಗುಂದಲಿಲ್ಲ.

ನಿಮ್ಮ ಕನಸನ್ನು ಈಡೇರಿಸುವುದು ನನ್ನ ಸಂಕಲ್ಪ: ಕಾರ್ಯಕರ್ತರನ್ನುದ್ದೇಶಿಸಿ ಪ್ರಧಾನಿ ವಿಜಯೋತ್ಸವ ಭಾಷಣ

ಯಾರು ಈ ಕಾನುಗೋಲು?

ಕರ್ನಾಟಕದ (Karnataka) ಬಳ್ಳಾರಿ ಮೂಲದವರು. ಹುಟ್ಟಿ, ಬೆಳೆದಿದ್ದು ಚೆನ್ನೈನಲ್ಲಿ. ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆದು, ಮೆಕ್‌ಕಿನ್ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಭಾರತಕ್ಕೆ ಮರಳಿದ ಬಳಿಕ ಅಸೋಸಿಯೇಷನ್‌ ಆಫ್‌ ಬಿಲಿಯನ್‌ ಮೈಂಡ್ಸ್‌ ಸೇರಿ ಗುಜರಾತ್‌ ಚುನಾವಣೆಗೆ ತಂತ್ರಗಾರಿಕೆ ಮಾಡಿದ್ದರು. 2014ರಲ್ಲಿ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರ ಹಿಂದೆ ಇದ್ದ ಪ್ರಮುಖ ತಂತ್ರಗಾರರಲ್ಲಿ ಇವರೂ ಇಬ್ಬರು. 2017ರಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿ, 2019ರ ಲೋಕಸಭೆ ಚುನಾವಣೆಯಲ್ಲಿ ಡಿಎಂಕೆ ಪರ ಕೆಲಸ ಮಾಡಿದ್ದರು. ಪ್ರಚಾರ ಪ್ರಿಯ ಅಲ್ಲ. ಎಲ್ಲೂ ಕಾಣಿಸಿಕೊಳ್ಳುವುದಿಲ್ಲ. ಎಲೆಮರೆಕಾಯಿಯಂತೆ ಇದ್ದು ಪ್ರಚಾರ ತಂತ್ರ ರೂಪಿಸುವುದು ಕಾನುಗೋಲು ಶೈಲಿ.

Follow Us:
Download App:
  • android
  • ios