ರಾಹುಲ್ ಗಾಂಧಿ ಟೀಕಿಸಿದ ಬಿಜೆಪಿಗರಿಗೆ ಶಾಕ್ ಕೊಟ್ಟ ಕಾಂಗ್ರೆಸ್
ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆಡಳಿತಾರೂಢ ಎನ್‌ಡಿಎ ಕೂಟದ ನಾಯಕರ ವಿರುದ್ಧ ಕಾಂಗ್ರೆಸ್ ದೂರು ದಾಖಲಿಸಿದೆ. ಈ ಹೇಳಿಕೆಗಳು ರಾಹುಲ್ ಗಾಂಧಿ ಅವರ ಸುರಕ್ಷತೆಗೆ ಧಕ್ಕೆ ತರುವುದಲ್ಲದೆ, ದೇಶದಲ್ಲಿ ಶಾಂತಿ ಕದಡುವ ಉದ್ದೇಶ ಹೊಂದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ನವದೆಹಲಿ: ಆಡಳಿತಾರೂಢ ಎನ್‌ಡಿಎ ಕೂಟಕ್ಕೆ ಸೇರಿದ ಕೆಲ ನಾಯಕರು ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿ ನೀಡಿದ ಹೇಳಿಕೆ ವಿರುದ್ಧ ಇಲ್ಲಿನ ಠಾಣೆಯಲ್ಲಿ, ದೂರು ದಾಖಲಿಸಿದೆ. ವಿಪಕ್ಷ ನಾಯಕರ ಸುರಕ್ಷತೆ ಮತ್ತು ಭದ್ರತೆಗೆ ಧಕ್ಕೆ ತರುವ ಉದ್ದೇಶದಿಂದ ಇಂತಹ ಹೇಳಿಕೆ ನೀಡಲಾಗಿದೆ. ಇದು ಜಮ್ಮು ಕಾಶ್ಮೀರ ಮತ್ತು ಹರ್ಯಾಣ ಚುನಾವಣೆ ಗಮನದಲ್ಲಿಟ್ಟುಕೊಂಡು ದೇಶಾದ್ಯಂತ ಶಾಂತಿ ಕದಡುವ ಉದ್ದೇಶ ಹೊಂದಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕನ್ ದೂರಿನಲ್ಲಿ ಆರೋಪಿಸಿದ್ದಾರೆ. ಬಿಜೆಪಿ ಮತ್ತು ಶಿವಸೇನೆಯ ನಾಯಕರು ರಾಹುಲ್ ಗಾಂಧಿಯನ್ನು ಭಯೋತ್ಪಾದಕ, ಅವರ ನಾಲಗೆ ಕತ್ತರಿಸಿದವರಿಗೆ 11 ಲಕ್ಷ ನೀಡುವುದಾಗಿ ಹೇಳಿಕೆ ನೀಡಿದ್ದರು.
ಕೈ ನಾಯಿಗಳ ಸಮಾಧಿ ಮಾಡುತ್ತೇನೆ: ಶಿವಸೇನಾ ಶಾಸಕನ ಕೀಳು ಹೇಳಿಕೆ
ಮೀಸಲು ರದ್ದುಪಡಿಸುವ ಕುರಿತು ಮಾತನಾಡಿದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ನಾಲಗೆಯನ್ನು ಕತ್ತರಿಸಿದವರಿಗೆ 11 ಲಕ್ಷ ರು. ಬಹುಮಾನ ನೀಡುವೆ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಶಿವಸೇನೆ (ಶಿಂಧೆ ಬಣ) ಶಾಸಕ ಸಂಜಯ್ ಗಾಯಕ್ವಾಡ್ ಇದೀಗ ‘ಕಾಂಗ್ರೆಸ್ ನಾಯಿಗಳನ್ನು ಸಮಾಧಿ ಮಾಡುತ್ತೇನೆ’ ಎಂದು ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಭಾಗವಹಿಸುವ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಿಗಳು ಯಾವಾದರೂ ಉದ್ದೇಶ ಪೂರ್ವಕವಾಗಿ ಆಗಮಿಸಲು ಪ್ರಯತ್ನಿಸಿದರೆ ನಾನು ಅವರನ್ನು ಅಲ್ಲಿಯೇ ಸಮಾಧಿ ಮಾಡುತ್ತೇನೆ ಎಂದು ಗಾಯಕ್ವಾಡ್ ಕಿಡಿಕಾರಿದ್ದಾರೆ.
'ಒಂದು ದೇಶ ಒಂದು ಚುನಾವಣೆ' ಒಕ್ಕೂಟ ವ್ಯವಸ್ಥೆ, ಪ್ರಜಾಪ್ರಭುತ್ವಕ್ಕೆ ಮಾರಕ: ಮಲ್ಲಿಕಾರ್ಜುನ ಖರ್ಗೆ
ಮೋದಿಗೆ ಖರ್ಗೆ ಪತ್ರ
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ನಿಮ್ಮ ಪಕ್ಷದ ಕೆಲ ನಾಯಕರು ಆಕ್ಷೇಪಾರ್ಹ ಪದ ಬಳಸಿ ಟೀಕೆ ಮಾಡುತ್ತಿದ್ದಾರೆ. ಅಂಥವರಿಗೆ ಶಿಸ್ತಿನಿಂದ ಇರಲು ಸೂಚಿಸಿ ಎಂದು ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಮೋದಿಗೆ ಬರೆದಿರುವ ಪತ್ರದಲ್ಲಿ ಖರ್ಗೆ, ಅಂತಹ ಹೇಳಿಕೆಗಳನ್ನು ನೀಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ದೇಶದ ರಾಜಕೀಯ ಅಧೋಗತಿಗೆ ಹೋಗದಂತೆ ಮತ್ತು ಆ ರೀತಿಯ ಅವಘಡಗಳು ನಡೆಯದಂತೆ ತಡೆಗಟ್ಟಬೇಕು ಎಂದು ಒತ್ತಾಯಿಸಿದ್ದಾರೆ.
‘ಬಿಜೆಪಿ ನಾಯಕರು ಮತ್ತು ನಿಮ್ಮ ಮೈತ್ರಿ ಕೂಟದ ನಾಯಕರು ಬಳಸುವ ಹಿಂಸೆ ಪ್ರಚೋದಿತ ಭಾಷೆಗಳು ಭವಿಷ್ಯಕ್ಕೆ ಹಾನಿಕಾರಕ. ರೈಲ್ವೆ ರಾಜ್ಯ ಸಚಿವರು ಮತ್ತು ಯುಪಿ ಸಚಿವರೊಬ್ಬರು ಲೋಕಸಭೆ ವಿಪಕ್ಷ ನಾಯಕನನ್ನು ನಂ. 1 ಭಯೋತ್ಪಾದಕ ಎಂದು ಕರೆದಿದ್ದಾರೆ. ಮಹಾರಾಷ್ಟ್ರದ ಶಾಸಕ ರಾಹುಲ್ ನಾಲಗೆ ಕತ್ತರಿಸಿದವರಿಗೆ 11 ಲಕ್ಷ ರು. ಬಹುಮಾನ ನೀಡುವುದಾಗಿ ಹೇಳುತ್ತಾರೆ.
ಈ ರೀತಿ ಹೇಳಿಕೆಗಳು ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷದ ಒರಟುತನ ಸೂಚಿಸುತ್ತದೆ. ನಿಮ್ಮ ನಾಯಕರನ್ನು ಶಿಸ್ತಿನಿಂದ ಮತ್ತು ಸಜ್ಜನಿಕೆಯಿಂದಿರಲು ಹೇಳಿ. ಸರಿಯಾದ ರೀತಿಯಲ್ಲಿ ನಡೆದುಕೊಳ್ಳಲು ಸೂಚಿಸಿ. ಈ ರೀತಿ ಹೇಳಿಕೆ ನೀಡಿದವರ ಮೇಲೆ ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳುತ್ತೀರಿ ಎನ್ನುವ ಭರವಸೆ ಹೊಂದಿದ್ದೇನೆ’ ಎಂದು ಖರ್ಗೆ ಉಲ್ಲೇಖಿಸಿದ್ದಾರೆ.
ಒಂದು ದೇಶ ಒಂದು ಚುನಾವಣೆ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದು ಅಸಾಧ್ಯ -ಡಿಕೆ ಶಿವಕುಮಾರ