ನವದೆಹಲಿ (ಫೆ.21): ದೇಶವನ್ನು 70 ವರ್ಷ ಕಾಲ ಆಳಿದ ಇತಿಹಾಸ ಹೊಂದಿರುವ ಕಾಂಗ್ರೆಸ್‌ ಇದೀಗ ಅಕ್ಷರಶಃ ಹಣಕಾಸಿನ ಮುಗ್ಗಟ್ಟಿಗೆ ತುತ್ತಾಗಿದ್ದು, ನೆರವಿಗಾಗಿ ತನ್ನ ಆಡಳಿತವಿರುವ ರಾಜ್ಯಗಳ ಮೊರೆ ಹೋಗಿದೆ. ಇನ್ನು 2-3 ತಿಂಗಳಲ್ಲಿ 5 ರಾಜ್ಯಗಳ ವಿಧಾನಸಭಾ ಚುನಾವಣೆ ಎದುರಾಗುತ್ತಿದ್ದು, ಅಲ್ಲಿ ಬಿಜೆಪಿಯನ್ನು ಎದುರಿಸುವ ಜೊತೆಜೊತೆಗೇ ಆರ್ಥಿಕ ಮುಗ್ಗಟ್ಟಿನ ವಿರುದ್ಧ ಹೋರಾಡುವ ಸ್ಥಿತಿಗೆ ಪಕ್ಷ ತಲುಪಿದೆ ಎಂದು ಮೂಲಗಳು ತಿಳಿಸಿವೆ ಎಂದು ಪ್ರಮುಖ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

2014ರ ಬಳಿಕ ಸತತ 2 ಬಾರಿ ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರ ವಂಚಿತವಾಗಿದೆ. ಅದೇ ಸಮಯದಲ್ಲಿ ಹಲವು ರಾಜ್ಯಗಳಲ್ಲೂ ಅಧಿಕಾರ ಕಳೆದುಕೊಂಡಿದೆ. ಅಧಿಕಾರದಲ್ಲಿರುವ ಪಕ್ಷಗಳಿಗೆ ಮಾತ್ರವೇ ಸಾಮಾನ್ಯವಾಗಿ ಹಣದ ಹರಿವು ಹೆಚ್ಚು. ಆದರೆ 7 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರ ವಂಚಿತ ಕಾಂಗ್ರೆಸ್‌, ಮತ್ತೆ ದೊಡ್ಡಮಟ್ಟದಲ್ಲಿ ಪುಟಿದೇಳುವ ಯಾವುದೇ ಲಕ್ಷಣವನ್ನೂ ತೋರಿಸುತ್ತಿಲ್ಲ. ಇನ್ನು ಅಧಿಕಾರ ಕಳೆದುಕೊಂಡಿರುವ ರಾಜ್ಯಗಳಲ್ಲೂ ಇದೇ ಕಥೆ.

ಕೋಟಿ ಬೆಲೆ ಬಾಳುವ ಜಮೀನು ಕೊಡ್ತೀನಿ, ಮಿನಿ ರಾಮ ಮಂದಿರ ಕಟ್ಟಿ ತೋರಿಸಿ: ಸಿದ್ದುಗೆ ಸವಾಲ್ ...

ಹೀಗಾಗಿ ಪಕ್ಷದ ಹೈಕಮಾಂಡ್‌ಗೆ ಈಗ ಕೇವಲ ಪಂಜಾಬ್‌, ಛತ್ತೀಸ್‌ಗಢ ಮತ್ತು ರಾಜಸ್ಥಾನ ರಾಜ್ಯಗಳೇ ಗತಿ. ಕಾರಣ ಇಲ್ಲಿ ಮಾತ್ರವೇ ಕಾಂಗ್ರೆಸ್‌ ಪೂರ್ಣ ಅಧಿಕಾರದಲ್ಲಿದೆ. ಮಹಾರಾಷ್ಟ್ರ, ಜಾರ್ಖಂಡ್‌ನಲ್ಲಿ ಮಿತ್ರಪಕ್ಷಗಳೇ ಹೆಚ್ಚಿನ ಅಧಿಕಾರ ಹೊಂದಿರುವ ಕಾರಣ, ಅಲ್ಲಿಂದ ಹೆಚ್ಚಿನ ನೆರವು ಯಾಚನೆ ಸ್ಥಿತಿಯಲ್ಲಿ ಕಾಂಗ್ರೆಸ್‌ ಇಲ್ಲ.

ಹೀಗಾಗಿಯೇ ದೆಹಲಿಯಲ್ಲಿನ ಪಕ್ಷದ ವ್ಯವಹಾರದ ಉಸ್ತುವಾರಿ ಹೊತ್ತ ನಾಯಕರು ಇತ್ತೀಚಿಗೆ ಮಹಾರಾಷ್ಟ್ರ, ಪಂಜಾಬ್‌, ಛತ್ತೀಸ್‌ಗಢ, ಜಾರ್ಖಂಡ್‌ ರಾಜ್ಯದ ನಾಯಕರ ಜೊತೆ ನಡೆಸಿದ ಮಾತುಕತೆ ವೇಳೆ ಪಕ್ಷ ಸಂಘಟನೆಗಿಂತ ಹೆಚ್ಚಾಗಿ, ದೇಣಿಗೆ ಸಂಗ್ರಹದ ವಿಷಯವಾಗಿಯೇ ಹೆಚ್ಚಿನ ಒತ್ತು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನು ದೆಹಲಿಯಲ್ಲಿ ಹಲವು ವರ್ಷಗಳಿಂದ ಪಕ್ಷದ ಹೊಸ ಕಚೇರಿಯ ನಿರ್ಮಾಣ ಕಾಮಗಾರಿ ಕುಂಟುತ್ತಾ ಸಾಗಿದೆ. ಅದಕ್ಕೂ ಕೂಡಾ ಹಣಕಾಸಿನ ಕೊರತೆ ಕಾಣಿಸಿಕೊಂಡಿದೆ ಎನ್ನಲಾಗಿದೆ.