ಕುಟುಂಬಕ್ಕೆ ಎರಡನೇ ಮಕ್ಕಳು ನೀತಿ ಜಾರಿಗೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಮಸೂದೆ ಮಂಡನೆ!| ಅಭಿಷೇಕ್ ಮನು ಸಿಂಘ್ವಿ ಮಸೂದೆ ಮಂಡನೆ| ಖಾಸಗಿ ಮಸೂದೆ ಮಂಡಿಸಿರುವ ಕಾಂಗ್ರೆಸ್ಸಿ ಗ
ನವದೆಹಲಿ[ಮಾ.15]: ಹೆಚ್ಚುತ್ತಿರುವ ಜನಸಂಖ್ಯೆ ದೇಶದ ನಿಯಮಿತ ನೈಸರ್ಗಿಕ ಸಂಪನ್ಮೂಲದ ಮೇಲಿನ ಒತ್ತಡವನ್ನು ಹೆಚ್ಚಿಸುತ್ತಿದೆ ಎಂದು ಪ್ರತಿಪಾದಿಸಿರುವ ಕಾಂಗ್ರೆಸ್ ಮುಖಂಡ ಅಭಿಷೇಕ್ ಮನು ಸಿಂಘ್ವಿ, ದೇಶದಲ್ಲಿ ಎರಡು ಮಕ್ಕಳ ನೀತಿಯನ್ನು ಜಾರಿಗೆ ತರಬೇಕು ಎಂದು ರಾಜ್ಯಸಭೆಯಲ್ಲಿ ಖಾಸಗಿ ಮಸೂದೆಯೊಂದನ್ನು ಮಂಡಿಸಿದ್ದಾರೆ.
ಜನಸಂಖ್ಯೆ ನಿಯಂತ್ರಣ ಮಸೂದೆ-2020ಗೆ ಹಣಕಾಸಿನ ಬಾಧ್ಯತೆ ಇರುವ ಕಾರಣ ಅದನ್ನು ರಾಜ್ಯಸಭೆಯಲ್ಲಿ ಮಂಡಿಸಲು ರಾಷ್ಟ್ರಪತಿಗಳ ಅನುಮೋದನೆ ಪಡೆಯುವ ಅಗತ್ಯವಿದೆ. ಈ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅನುಮತಿ ನೀಡಿದ್ದಾರೆ ಎಂದು ಸಿಂಘ್ವಿ ತಿಳಿಸಿದ್ದಾರೆ.
ಎರಡು ಮಕ್ಕಳ ನೀತಿಯನ್ನು ಪಾಲಿಸದೇ ಇರುವವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ನಿಷೇಧ ಹೇರುವುದು, ಸರ್ಕಾರಿ ಸೇವೆಗಳಲ್ಲಿ ಬಡ್ತಿ ಹಾಗೂ ಸಬ್ಸಿಡಿ ನಿರಾಕರಿಸುವ ಪ್ರಸ್ತಾವ ಇದೆ. ಅಲ್ಲದೆ ಒಂದು ಮಕ್ಕಳು ಹೊಂದಿದವರಿಗೆ ವಿಶೇಷ ಸವಲತ್ತು ಕೊಡಬೇಕು ಎಂಬ ಪ್ರಸ್ತಾಪವೂ ಇದೆ.
ಖಾಸಗಿ ಮಸೂದೆಗಳು ಅಂಗೀಕಾರ ಪಡೆದುಕೊಳ್ಳುವುದು ಕಡಿಮೆ. ಆದರೆ ಕೇಂದ್ರ ಸರ್ಕಾರದ ಚಿಂತನೆಯಲ್ಲಿ ಇದೆ ಎಂದು ಹೇಳಲಾದ ಇಂಥದ್ದೊಂದು ಮಸೂದೆಯನ್ನು ಸ್ವತಃ ವಿಪಕ್ಷ ನಾಯಕರೇ ಮಂಡಿಸಿರುವಾಗ ಆಡಳಿತಾರೂಢ ಬಿಜೆಪಿ ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬ ಕುತೂಹಲ ಇದೆ. ಒಂದು ವೇಳೆ ಕೇಂದ್ರದಲ್ಲಿನ ಆಡಳಿತಾರೂಢ ಎನ್‌ಡಿಎ ಒಕ್ಕೂಟಕ್ಕೆ ಬಹುಮತ ಇಲ್ಲದ ರಾಜ್ಯಸಭೆಯಲ್ಲಿ ಈ ಮಸೂದೆ ಏನಾದರೂ, ಪಾಸಾದರೆ, ಎನ್‌ಡಿಎಗೆ ಬಹುಮತ ಇರುವ ಲೋಕಸಭೆಯಲ್ಲಿ ಅದು ಯಾವುದೇ ಅಡ್ಡಿ ಇಲ್ಲದೆಯೇ ಅಂಗೀಕಾರವಾಗುವ ಸಾಧ್ಯತೆ ನಿಚ್ಚಳವಾಗಿದೆ. ಹೀಗಾಗಿಯೇ ಮಸೂದೆ ತೀವ್ರ ಕುತೂಹಲ ಕೆರಳಿಸಿದೆ.
