ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ಗೆ ಹೀನಾಯ ಸೋಲು| ಪಕ್ಷದ ವಿರುದ್ಧ ನಾಯಕರು ಗರಂ| ಫೇಸ್‌ಬುಕ್‌, ಟ್ವೀಟರ್‌ ಬಿಟ್ಟು ಕಾಂಗ್ರೆಸ್‌ ಬೀದಿಗೆ ಇಳಿಯಬೇಕು

ನವದೆಹಲಿ(ಮೇ.05): ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ನ ಹೀನಾಯ ಸೋಲಿಗೆ ಪಕ್ಷದ ಹೈಕಮಾಂಡ್‌ ಹಾಗೂ ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಕಾಂಗ್ರೆಸ್‌ ಮುಖಂಡರು ಟ್ವೀಟರ್‌ ಹಾಗೂ ಫೇಸ್‌ಬುಕ್‌ ಅನ್ನು ಬಿಟ್ಟು ಬೀದಿಗೆ ಇಳಿದು ಪಕ್ಷವನ್ನು ಸಂಘಟಿಸಬೇಕು ಎಂದು ಪಶ್ಚಿಮ ಬಂಗಾಳದ ಕಾಂಗ್ರೆಸ್‌ ಉಸ್ತುವಾರಿ ಅಧೀರ್‌ ರಂಜನ್‌ ಚೌಧರಿ ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿಗೋಷ್ಠಿಯ ವೇಳೆ ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ಯೋಜಿತ ರೀತಿಯಲ್ಲಿ ಪ್ರಚಾರ ಹಾಗೂ ತಂತ್ರಗಾರಿಕೆಯನ್ನು ಮಾಡದೇ ಇರುವುದೇ ಕಾಂಗ್ರೆಸ್‌ ಸೋಲಿಗೆ ಪ್ರಮುಖ ಕಾರಣ. ಮಹಿಳಾ ಮತದಾರರು ಹಾಗೂ ಮುಸ್ಲಿಮರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಬೆಂಬಲಕ್ಕೆ ನಿಂತಿದ್ದರಿಂದ ಪಕ್ಷಕ್ಕೆ ಹಿನ್ನಡೆ ಆಯಿತು ಎಂದು ಹೇಳಿದ್ದಾರೆ.

ಕಳೆದೆರಡು ದಿನಗಳ ಹಿಂದಷ್ಟೇ ಕಾಂಗ್ರೆಸ್‌ ವಕ್ತಾರೆ ರಾಗಿಣಿ ನಾಯಕ್ ಟ್ವೀಟ್ ಮಾಡಿದ್ದು, ಒಂದು ವೇಳೆ ನಾವು ಕಾಂಗ್ರೆಸಿಗರು ಮೋದಿ ಸೋಲಿನಲ್ಲಿ, ಖುಷಿ ಹುಡುಕುತ್ತಾ ನಿಂತರೆ ನಮ್ಮ ಸೋಲಿನ ಬಗ್ಗೆ ಆತ್ಮಾವಕಲೋಕನ ಮಾಡುವುದು ಯಾವಾಗ ಎಂದು ಪ್ರಶ್ನಿಸಿದ್ದರು.