ನವದೆಹಲಿ(ಜೂ.25): ಚೀನಾ ವಸ್ತುಗಳ ಆಮದು ಮತ್ತು ಅವುಗಳ ಬಳಕೆಗೆ ಕಡಿವಾಣ ಹಾಕಲು ನಾನಾ ಮಾರ್ಗ ಹುಡುಕುತ್ತಿರುವ ಸರ್ಕಾರ, ಇದೀಗ ದೇಶೀಯ ಹಾಗೂ ವಿದೇಶಿ ಉತ್ಪನ್ನಗಳನ್ನು ಸುಲಭವಾಗಿ ಗುರುತಿಸುವಂತೆ ಮಾಡಲು ಪ್ರತ್ಯೇಕ ಕಲರ್‌ ಕೋಡ್‌ ಜಾರಿ ಮಾಡುವ ಬಗ್ಗೆ ಚಿಂತನೆ ನಡೆಸಿದೆ.

ಸಸ್ಯಾಹಾರ ಮತ್ತು ಮಾಂಸಾಹಾರ ಉತ್ಪನ್ನಗಳನ್ನು ಗುರುತಿಸಲು ಅವುಗಳ ಮೇಲೆ ಹಸಿರು ಮತ್ತು ಕೆಂಪು ಬಣ್ಣದ ಕೋಡ್‌ ಇರುವಂತೆ, ಭಾರತೀಯ ಉತ್ಪನ್ನಗಳಿಗೆ ಕೇಸರಿ ವರ್ಣದ ಕೋಡ್‌ (ಸೂಚಕ) ನೀಡುವ ಬಗ್ಗೆ ಸರ್ಕಾರ ಗಮನ ಹರಿಸಿದೆ ಎನ್ನಲಾಗಿದೆ.

ನಮ್ಮ ಉತ್ಪನ್ನ ಬಹಿಷ್ಕಾರ ಭಾರತೀಯರಿಗೆ ಅಸಾಧ್ಯ: ಚೀನಾ ಕುಹಕ!

ಈ ಯೋಜನೆಯ ಮೊದಲ ಹಂತವಾಗಿ ಈಗಾಗಲೇ ಕೇಂದ್ರ ಸರ್ಕಾರ, ಗವರ್ನಮೆಂಟ್‌ ಇ- ಮಾರ್ಕೆಟ್‌ಪ್ಲೇಸ್‌ನಲ್ಲಿ ಉತ್ನನ್ನಗಳನ್ನು ಮಾರಾಟ ಮಾಡುವವವರಿಗೆ ಅದು ದೇಶಿ ಅಥವಾ ವಿದೇಶಿ ಮೂಲದ ಉತ್ಪನ್ನ ಎಂಬುದನ್ನು ಘೋಷಿಸುವುದನ್ನು ಕಡ್ಡಾಯ ಮಾಡಿದೆ. ಈ ಮೂಲಕ ಸರ್ಕಾರದ ಎಲ್ಲಾ ಖರೀದಿಯಲ್ಲೂ ದೇಶೀಯ ಉತ್ಪನ್ನಗಳಿಗೆ ಆದ್ಯತೆ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ.

ಇದರ ಮುಂದಿನ ಹಂತವಾಗಿ ಎಲ್ಲಾ ಇ- ಕಾಮರ್ಸ್‌ ತಾಣಗಳೂ, ತಮ್ಮ ಉತ್ಪನ್ನಗಳ ಜೊತೆ ಅವುಗಳು ಉತ್ಪಾದಿತವಾದ ದೇಶಗಳ ಹೆಸರನ್ನು ಬಹಿರಂಗಪಡಿಸುವುದನ್ನು ಕಡ್ಡಾಯಗೊಳಿಸಲೂ ಸರ್ಕಾರ ನಿರ್ಧರಿಸಿದೆ.