ಕೋಲ್ಕತಾ(ಫೆ.24): ಪಶ್ಚಿಮ ಬಂಗಾಳದ ವಿವಿಧ ಗಣಿಗಳಲ್ಲಿ ನಡೆದಿದೆ ಎನ್ನಲಾದ ಕಲ್ಲಿದ್ದಲು ಕಳ್ಳತನ ಪ್ರಕರಣ ಸಂಬಂಧ ಟಿಎಂಸಿ ಸಂಸದ ಅಭಿಷೇಕ್‌ ಬ್ಯಾನರ್ಜಿ ಅವರ ಪತ್ನಿ ರುಜಿರಾ ಬ್ಯಾನರ್ಜಿ ಅವರನ್ನು ಸಿಬಿಐ ಮಂಗಳವಾರ ಅವರ ನಿವಾಸಕ್ಕೆ ತೆರಳಿ ಒಂದು ಗಂಟೆಗಳ ಕಾಲ ವಿಚಾರಣೆಗೆ ನಡೆಸಿತು.

ಈ ವೇಳೆ ತನಿಖಾ ಸಂಸ್ಥೆಯು ರುಜಿರಾ ಅವರ ಬ್ಯಾಂಕ್‌ ವಹಿವಾಟಿಗೆ ಸಂಬಂಧಿಸಿದ ಮಾಹಿತಿ ಪಡೆದಿರುವುದಾಗಿ ಮೂಲಗಳು ತಿಳಿಸಿವೆ. ಸಿಬಿಐ ವಿಚಾರಣೆಗೂ ಮುನ್ನ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಸೋದರ ಸಂಬಂಧಿ ಅಭಿಷೇಕ್‌ ಬ್ಯಾನರ್ಜಿ ಮನೆಗೆ ಭೇಟಿ ನೀಡಿದ್ದರು.

ಇದೇ ಪ್ರಕರಣ ಸಂಬಂಧ ಸೋಮವಾರ ರುಜಿರಾ ಅವರ ಸೋದರಿ ಮನೇಕಾ ಗಂಭೀರ್‌ ಅವರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿತ್ತು. ಕಲ್ಲಿದ್ದಲು ಕಳ್ಳತನ ಪ್ರಕರಣದ ಪ್ರಮುಖ ರೂವಾರಿ ಮಾಂಝಿ ಅಲಿಯಾಸ್‌ ಲಾಲಾನ ಖಾತೆಯಿಂದ ರುಜಿರಾ ಮತ್ತು ಮೇನಕಾ ಬ್ಯಾಂಕ್‌ ಖಾತೆಗೆ ಭಾರೀ ಪ್ರಮಾಣದ ಹಣ ವರ್ಗಾವಣೆ ಆಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಇಬ್ಬರನ್ನೂ ಸಿಬಿಐ ವಿಚಾರಣೆಗೆ ಒಳಪಡಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.